ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದ್ಧತೆಯಿಂದ ಕೆಲಸ ಮಾಡಿ

ಸಭೆಯಲ್ಲಿ ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಿವಿಮಾತು
Last Updated 9 ಫೆಬ್ರುವರಿ 2019, 14:47 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್‌ ನಿಷ್ಕ್ರಿಯ ಆಸ್ತಿ ಪ್ರಮಾಣ ನಿರ್ವಹಣೆಯಲ್ಲಿ ಶೇ 3.6ರಷ್ಟು ವಸೂಲಾಗದ ಸಾಲದೊಂದಿಗೆ (ಎನ್‌ಪಿಎ) ಹಿಂದಿನ ಹಣಕಾಸು ವರ್ಷದಲ್ಲಿ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಿತ್ತು. ಈ ಗೌರವಕ್ಕೆ ಚ್ಯುತಿ ಬಾರದಂತೆ ಬದ್ಧತೆಯಿಂದ ಕೆಲಸ ಮಾಡಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ನೌಕರರಿಗೆ ಕಿವಿಮಾತು ಹೇಳಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಹಿಂದಿನ ವರ್ಷ ಡಿಸೆಂಬರ್ ವೇಳೆಗೆ ಬ್ಯಾಂಕ್‌ನ ಎನ್‌ಪಿಎ ಶೇ 12.6 ಇತ್ತು. ಸಮರ್ಪಕ ಸಾಲ ವಸೂಲಾತಿ ಮೂಲಕ ಮಾರ್ಚ್ ಅಂತ್ಯಕ್ಕೆ ಎನ್‌ಪಿಎ ಪ್ರಮಾಣವನ್ನು ಶೇ 3.6ಕ್ಕೆ ಇಳಿಯುವಂತೆ ಮಾಡಲಾಗಿದೆ’ ಎಂದರು.

‘ಬ್ಯಾಂಕ್ ಉಳಿಸುವುದೇ ನನ್ನ ಗುರಿ. ಈ ವಿಷಯದಲ್ಲಿ ರಾಜಿಯಿಲ್ಲ. ಸಾಲ ಮರು ಪಾವತಿ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ. ಸಾಲ ವಸೂಲಾತಿಗಾಗಿ ಎಲ್ಲಿ ಬೇಕಾದರೂ ನೌಕರರೊಂದಿಗೆ ಬರಲು ಸಿದ್ಧ’ ಎಂದು ತಿಳಿಸಿದರು.

‘ಸಾಲ ವಸೂಲಾತಿಯಲ್ಲಿ ಆಯಾ ವ್ಯಾಪ್ತಿಯ ನಿರ್ದೇಶಕರ ಸಹಕಾರ ಪಡೆಯಿರಿ. ನೌಕರರಿಗೆ ಸಾಲ ವಸೂಲಿಗೆ ಅಡಚಣೆಯಾದರೆ ನಿರ್ದೇಶಕರು ಜತೆಗೆ ಬರುತ್ತಾರೆ. ಸಾಲ ಮರು ಪಾವತಿಯಲ್ಲಿ ಮಹಿಳೆಯರು ತಪ್ಪು ಮಾಡುವುದಿಲ್ಲ. ಕೆಲ ಮಧ್ಯವರ್ತಿಗಳಿಂದ ಸಮಸ್ಯೆಯಾಗಿದೆ. ಅಂತಹ ಕಡೆ ಸ್ವಸಹಾಯ ಸಂಘದ ಎಲ್ಲಾ ಮಹಿಳೆಯರಿಂದ ಸಾಲದ ಕಂತು ಪಾವತಿಸಿರುವ ಕುರಿತು ಪತ್ರ ಪಡೆದುಕೊಳ್ಳಿ. ಪೊಲೀಸರಿಗೆ ದೂರು ನೀಡಿ ವಸೂಲಿ ಮಾಡೋಣ’ ಎಂದರು.

ಗಮನಕ್ಕೆ ತನ್ನಿ: ‘ಮುಳಬಾಗಿಲು ಮತ್ತು ಕೋಲಾರ ಶಾಖೆ ವ್ಯಾಪ್ತಿಯಲ್ಲಿ ಸಾಲ ವಸೂಲಾತಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅವಳಿ ಜಿಲ್ಲೆಗಳ ಬ್ಯಾಂಕ್‌ ಶಾಖೆಗಳ ವ್ಯಾಪ್ತಿಯಲ್ಲಿ ಸಾಲ ನೀಡುವಾಗ ತಪ್ಪದೇ ಆ ವ್ಯಾಪ್ತಿಯ ನಿರ್ದೇಶಕರ ಗಮನಕ್ಕೆ ತನ್ನಿ. ಸಾಲದ ಫಲಾನುಭವಿಯ ಮರುಪಾವತಿಯ ಬದ್ಧತೆ ಗಮನಿಸಿಯೇ ಸಾಲ ವಿತರಿಸಿ’ ಎಂದು ಸೂಚಿಸಿದರು.

‘ಕೋಳಿ ಸಾಕಾಣಿಕೆಗೆ ₹ 40 ಲಕ್ಷದವರೆಗೆ ಸಾಲ ನೀಡಲು ಬ್ಯಾಂಕ್‌ಗೆ ಅವಕಾಶ ಸಿಕ್ಕಿದೆ. ಶೇ 25ರಷ್ಟು ಅಂದರೆ ₹ 10 ಲಕ್ಷ ಸಬ್ಸಿಡಿ ಸಿಗುತ್ತದೆ. ಸಾಲ ನೀಡಿದ ತಕ್ಷಣವೇ ಸಬ್ಸಿಡಿ ಹಣ ಸಾಲದ ಖಾತೆಗೆ ಜಮಾ ಆಗುತ್ತದೆ. ಕೋಳಿ ಸಾಕಾಣಿಕೆಗೆ ಸಾಲ ನೀಡಿದರೆ ವಸೂಲಿ ಸಮಸ್ಯೆ ಎದುರಾಗುವುದಿಲ್ಲ. ಕೋಳಿ ಸರಬರಾಜು ಕಂಪನಿಯೊಂದಿಗೆ ಕರಾರು ಮಾಡಿಕೊಳ್ಳುವುದರಿಂದ ಸಾಲದ ಕಂತುಗಳು ಸಕಾಲಕ್ಕೆ ಜಮಾ ಆಗುತ್ತಿರುತ್ತವೆ’ ಎಂದರು.

‘₹ 40 ಲಕ್ಷ ಸಾಲಕ್ಕೆ ಕನಿಷ್ಠ 5 ಎಕರೆ ಜಮೀನು ಕಡ್ಡಾಯವಾಗಿ ಇರಬೇಕು. ₹ 10 ಲಕ್ಷ ಸಾಲ ನೀಡಬಹುದಾಗಿದ್ದು, ಒಟ್ಟಾರೆ ಶೇ 25ರಷ್ಟು ಸಬ್ಸಿಡಿ ಹಣ ನಬಾರ್ಡ್‌ನಿಂದ ಬರಲಿದೆ’ ಎಂದು ವಿವರಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ನೀಲಕಂಠೇಗೌಡ, ನರಸಿಂಹರೆಡ್ಡಿ, ವೆಂಕಟರೆಡ್ಡಿ, ಎಂ.ಎಲ್.ಅನಿಲ್‌ಕುಮಾರ್‌, ಹನುಮಂತರೆಡ್ಡಿ, ಕೆ.ವಿ.ದಯಾನಂದ್, ದ್ಯಾವಪ್ಪ, ಮೋಹನ್‌ರೆಡ್ಡಿ, ನಾಗಿರೆಡ್ಡಿ, ಚೆನ್ನರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT