ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರು ದೇಶದ ನಿಜವಾದ ಭವಿಷ್ಯ

ಸಿಐಟಿಯು ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಹೇಳಿಕೆ
Last Updated 1 ಮೇ 2020, 13:37 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕು ತಡೆಗೆ ಹಗಲಿರುಳು ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆಯ ಮತ್ತು ಗೌರವಯುತ ಬದುಕು ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ಸಿಐಟಿಯು ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಶುಕ್ರವಾರ ಸರಳವಾಗಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ‘ಕಾರ್ಮಿಕರೇ ಈ ದೇಶದ ನಿಜವಾದ ಭವಿಷ್ಯ ಎಂಬುದನ್ನು ಸರ್ಕಾರಗಳ ಮರೆಯಬಾರದು’ ಎಂದು ಹೇಳಿದರು.

‘ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗೆ ಸಂಘಟಿತರಾಗಿ ಹೋರಾಡಬೇಕು. ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಕಾರ್ಮಿಕರಿಗೆ ಮಾಹಿತಿ ನೀಡಬೇಕು. ಕಟ್ಟಡ ಕಾರ್ಮಿಕರು, ಪೌರ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ನೌಕರರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಕಾರ್ಮಿಕರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಒಗ್ಗೂಡಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಇಂದು ಕಾರ್ಮಿಕರ ಪರಿಸ್ಥಿತಿ ಚೆನ್ನಾಗಿಲ್ಲ. ಒಂದೆಡೆ ಆರ್ಥಿಕ ಅಸ್ಥಿರತೆಯಿಂದ ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಕಂಪನಿಗಳು ಕಾರ್ಮಿಕರ ಕೆಲಸಕ್ಕೆ ಸರಿಯಾದ ವೇತನ ನೀಡದೆ ವಂಚಿಸುತ್ತಿವೆ. ಕಾರ್ಮಿಕರ ಕಾನೂನು ಕಡತಕ್ಕೆ ಮಾತ್ರ ಸೀಮಿತವಾಗಿದೆ’ ಎಂದು ದೂರಿದರು.

ಆಹಾರ ಒದಗಿಸಬೇಕು: ‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಕೈಗಾರಿಕೆಗಳು ಸ್ಥಗಿತಗೊಂಡು ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ. ಇದರಿಂದ ಸಂಪಾದನೆಯಿಲ್ಲದೆ ಕಾರ್ಮಿಕರ ಜೀವನ ನಿರ್ವಹಣೆಗೆ ಕಷ್ಟವಾಗದೆ. ಆಳುವ ಸರ್ಕಾರಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಆಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸರ್ಕಾರ ಕೈಗೊಂಬೆ: ‘ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ಕಾರ್ಮಿಕರ ಹಿತ ಕಡೆಗಣಿಸಿವೆ. ಲಾಕ್‌ಡೌನ್‌ನಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಪ್ರಧಾನಿ ಮೋದಿ ಬಡ ಜನರ ಸಂಕಷ್ಟ ಪರಿಹರಿಸದೆ ಭಾಷಣಕ್ಕೆ ಸೀಮಿತವಾಗಿದ್ದಾರೆ. ಬಡ ಜನರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಸಿಗದೆ ಹಸಿವಿನಿಂದ ಸಾಯುತ್ತಿದ್ದಾರೆ’ ಎಂದು ಸಿಐಟಿಯು ಜಿಲ್ಲಾ ಸಮಿತಿ ಖಜಾಂಚಿ ಎಚ್.ಬಿ.ಕೃಷ್ಣಪ್ಪ ಕಿಡಿಕಾರಿದರು.

‘ಕಾರ್ಮಿಕರು ಸಂಘಟಿತರಾಗದಿದ್ದರೆ ಉತ್ತಮ ಜೀವನ ದೊರಕುವುದು ಕಷ್ಟಕರ. ಹೀಗಾಗಿ ಸಂಘಟನೆಗೆ ಕಾರ್ಮಿಕರು ಆದ್ಯತೆ ನೀಡಬೇಕು ಉದ್ದಿಮೆದಾರರು ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಸಂವಿಧಾನದ ಅನ್ವಯ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಮದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಎಸ್‌ಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ವಾಸುದೇವರೆಡ್ಡಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಜ್, ಸಿಐಟಿಯು ಸದಸ್ಯರಾದ ಮಂಜುನಾಥ್, ಮಂಜುಳಾ, ಆಶಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT