ಬುಧವಾರ, ಏಪ್ರಿಲ್ 1, 2020
19 °C

ಪಾದಪೂಜೆಗೆ ಬರುತ್ತಿದ್ದ ಯುವತಿಯೊಂದಿಗೆ ಪರಾರಿಯಾದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ದೇವಾಲಯದ ದತ್ತಾತ್ರೇಯ ಅವಧೂತ ಸ್ವಾಮೀಜಿ ಮತ್ತು ಗ್ರಾಮದ ಯುವತಿಯು ನಿಗೂಢವಾಗಿ ಕಣ್ಮರೆಯಾಗಿದ್ದು, ಗ್ರಾಮಸ್ಥರು ಸ್ವಾಮೀಜಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ದತ್ತಾತ್ರೇಯ ಅವಧೂತ ಸ್ವಾಮೀಜಿಯು ಭೀಮಲಿಂಗೇಶ್ವರ ದೇವಾಲಯ ಅಭಿವೃದ್ಧಿಪಡಿಸುವುದಾಗಿ ಹೇಳಿಕೊಂಡು ತಿಂಗಳ ಹಿಂದೆಯಷ್ಟೇ ಹೊಳಲಿಗೆ ಬಂದಿದ್ದರು. ಗ್ರಾಮದ ಯುವತಿಯರಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದ ದೇವಾಲಯದ ಮಠದಲ್ಲಿ ತಂಗಿದ್ದರು.

ಪಾದ ಪೂಜೆಗೆ ಬಂದಿದ್ದ ಯುವತಿಯನ್ನು ಪರಿಚಯಿಸಿಕೊಂಡಿದ್ದ ಸ್ವಾಮೀಜಿ ಸೋಮವಾರ (ಫೆ.24) ರಾತ್ರಿ ಮಠದಿಂದ ಪರಾರಿಯಾಗಿದ್ದಾರೆ. ಅದೇ ದಿನ ಯುವತಿ ಸಹ ಕಣ್ಮರೆಯಾಗಿದ್ದಾಳೆ. ಇದರಿಂದ ಆತಂಕಗೊಂಡ ಯುವತಿಯ ಪೋಷಕರು ಗ್ರಾಮಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೋಷಕರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

‘ಯುವತಿ ನಾಪತ್ತೆ ಮತ್ತು ಸ್ವಾಮೀಜಿ ಕಾಣೆಯಾಗಿರುವುದಕ್ಕೂ ಸಂಬಂಧವಿದೆ. ಸ್ವಾಮೀಜಿಯು ಯುವತಿಯನ್ನು ಮದುವೆಯಾಗಿದ್ದಾರೆ ಎಂದು ಗೊತ್ತಾಗಿದೆ. ಯುವತಿಯ ಸಂಬಂಧಿಕರೊಂದಿಗೆ ಮಾತನಾಡಿರುವ ಸ್ವಾಮೀಜಿ ತಿರುಪತಿಯಲ್ಲಿ ಇರುವುದಾಗಿ ಖಚಿತಪಡಿಸಿದ್ದಾರೆ’ ಎಂದು ದೇವಾಲಯದ ಉಸ್ತುವಾರಿ ರಾಮಕೃಷ್ಣಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಸ್ವಾಮೀಜಿಯು ಭೀಮಲಿಂಗೇಶ್ವರ ದೇವಾಲಯದಲ್ಲೇ ಇದ್ದು, ದೇವಾಲಯ ಅಭಿವೃದ್ಧಿಪಡಿಸುವುದರ ಜತೆಗೆ ಪೀಠಾಧಿಪತಿಯಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಗ್ರಾಮಸ್ಥರು ಇದಕ್ಕೆ ಒಪ್ಪಿ ದೇವಾಲಯ ಅಭಿವೃದ್ಧಿಪಡಿಸಲು ಮುಂದಾಗಿದ್ದರು. ನಂತರ ಸ್ವಾಮೀಜಿಯು ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಿ ಬ್ರಹ್ಮ ರಥೋತ್ಸವ ಹಾಗೂ ಗಿರಿಜೋತ್ಸವ ನಡೆಸಿದ್ದರು’ ಎಂದು ಹೇಳಿದರು.

ಹಣದೊಂದಿಗೆ ಪರಾರಿ: ‘ಬ್ರಹ್ಮ ರಥೋತ್ಸವಕ್ಕೆ ಧ್ವನಿವರ್ದಕ, ಫ್ಲೆಕ್ಸ್, ಬ್ಯಾನರ್‌ ಹಾಕಿದ್ದವರಿಗೆ ಇನ್ನೂ ಹಣ ಕೊಟ್ಟಿಲ್ಲ. ಗ್ರಾಮದ ಕೆಲವರ ಬಳಿ ದೇಣಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಸ್ವಾಮೀಜಿ ರಾತ್ರೋರಾತ್ರಿ ಯುವತಿಯೊಂದಿಗೆ ಪರಾರಿಯಾಗಿದ್ದಾರೆ’ ಎಂದು ದೂರಿದರು.

‘ಹೊಳಲಿ ಗ್ರಾಮದಲ್ಲಿ ಕಾಣೆಯಾಗಿರುವ ಯುವತಿಯು ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದ ಸ್ವಾಮೀಜಿ ಜತೆ ಹೋಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇಬ್ಬರ ಪತ್ತೆಗೆ ತನಿಖಾ ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು