ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ಕ್ಕೆ ಯುವಜನ ಆರೋಗ್ಯ ಅರಿವಿನ ಮೇಳ

Last Updated 6 ಫೆಬ್ರುವರಿ 2020, 12:50 IST
ಅಕ್ಷರ ಗಾತ್ರ

ಕೋಲಾರ: ‘ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಸೌಲಭ್ಯದ ಜತೆಗೆ ಪೌಷ್ಟಿಕ ಆಹಾರ ನೀಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಫೆ.8ರಂದು ಯುವಜನ ಆರೋಗ್ಯ ಅರಿವಿನ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ಯುವ ಮುನ್ನಡೆ ಸಂಘಟನೆ ಸದಸ್ಯೆ ಐಶ್ವರ್ಯ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯುವಕ ಯುವತಿಯರು ದೇಶದ ಸಂಪತ್ತು. ಅವರು ಆರೋಗ್ಯವಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಯುವಕ ಯುವತಿಯರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ಈ ಮೇಳ ಆಯೋಜಿಸಲಾಗಿದೆ’ ಎಂದರು.

‘ಜಗತ್ತಿನ ಬಹುಪಾಲು ದೇಶಗಳು ಹಸಿವು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿವೆ. ಭಾರತ ಸಹ ಈ ಪ್ರಯತ್ನದಲ್ಲಿದೆ. ದೇಶದ 130 ಕೋಟಿ ಜನಸಂಖ್ಯೆಯಲ್ಲಿ 36 ಕೋಟಿ ಮಂದಿ ಯುವಕ ಯುವತಿಯರೇ ಇದ್ದಾರೆ. ಇವರ ಆರೋಗ್ಯದ ದೃಷ್ಟಿಯಿಂದ ಪ್ರತಿ ಇಲಾಖೆಗೆ ಭೇಟಿ ನೀಡಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಕ್ಯಾಂಟೀನ್ ವ್ಯವಸ್ಥೆ ಹಾಗೂ ಮಧ್ಯಾಹ್ನ ಪೌಷ್ಟಿಕ ಆಹಾರ ನೀಡುವಂತೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

‘ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟ ಮಾಡಲು ಅನುಕೂಲವಿದ್ದರೆ ಸಹಾಯವಾಗುತ್ತದೆ. ಇದು ಉತ್ತಮ ಕೆಲಸ ಆಗಿರುವುದರಿಂದ ಸರ್ಕಾರ ಯೋಜನೆ ಜಾರಿ ಮಾಡಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದರೆ ಅದನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸತ್ಪ್ರಜೆಗಳಾಗಿ ಬೆಳೆದು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುತ್ತೇವೆ’ ಎಂದು ವಿವರಿಸಿದರು.

‘ಯುವಜನ ಆರೋಗ್ಯ ಅರಿವು ಅಭಿಯಾನದ ಭಾಗವಾಗಿ ಪತ್ರದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗಿದೆ. ಜಿಲ್ಲೆಯಲ್ಲಿರುವ ಯುವ ಸ್ಪಂದನ ಕೇಂದ್ರಗಳಿಗೆ ತರಬೇತಿ ಹೊಂದಿದ ಆಪ್ತ ಸಮಾಲೋಚಕರನ್ನು ನೇಮಿಸಬೇಕು. ಪ್ರತಿ ತಾಲ್ಲೂಕುಗಳಲ್ಲೂ ಯುವ ಸ್ಪಂದನ ಕೇಂದ್ರ ತೆರೆಯಬೇಕು. ಯುವ ಸಹಾಯವಾಣಿಯು ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಬೇಕು. ಯುವ ನೀತಿ ಜಾರಿ ಮಾಡಿ ಯುವಜನ ಆಯೋಗ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ಶಶಿರಾಜ್, ಹರೀಶ್, ಮಣಿ, ಆಶಾ, ರಂಜಿತಾ, ಶಿಲ್ಪಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT