ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: 7 ವರ್ಷಗಳ ಪ್ರಕರಣಗಳ ತನಿಖೆ ಆರಂಭ

ಅಭಿವೃದ್ಧಿ ಕಾಣದ ಬಡಾವಣೆ ಮಾಲೀಕರಿಗೆ ದಾಖಲೆ ನೀಡಿಕೆ
Last Updated 8 ಏಪ್ರಿಲ್ 2022, 4:54 IST
ಅಕ್ಷರ ಗಾತ್ರ

ಕುಷ್ಟಗಿ: ನಿಯಮ ಉಲ್ಲಂಘಿಸಿ ನಿವೇಶನ ದಾಖಲೆ (ಫಾರ್ಮ್ ನಂ 3) ಗಳನ್ನು ನೀಡುವ ಮೂಲಕ ಇಲ್ಲಿಯ ಪುರಸಭೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರುವುದರ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಪುರಸಭೆಯ ವ್ಯಾಪ್ತಿಯಲ್ಲಿರುವ ಬಹಳಷ್ಟು ಬಡಾವಣೆಗಳು ಅಭಿವೃದ್ಧಿಗೊಂಡಿಲ್ಲ. ಅಲ್ಲಿ ಮೂಲಸೌಲಭ್ಯಗಳೂ ಇಲ್ಲ. ಆದರೂ ಮನೆಗಳು ನಿರ್ಮಾಣಗೊಂಡಿವೆ. ಕಳೆದ ಕೆಲ ವರ್ಷಗಳಿಂದ ಈ ವಿಷಯದಲ್ಲಿ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಶಾಖೆಯ ಸಿಬ್ಬಂದಿ ನಿಯಮಬಾಹಿರವಾಗಿ ಉತಾರಗಳನ್ನು ನೀಡುವ ಮೂಲಕ ಬಡಾವಣೆಗಳ ಮಾಲೀಕರಿಗೆ ನೆರವಾಗಿರುವುದು ಸ್ಪಷ್ಟವಾಗಿದೆ. ಬಡಾವಣೆ ಮಾಲೀಕರುಗಳು, ಚುನಾಯಿತ ಪ್ರತಿನಿಧಿಗಳೊಂದಿಗೆ ಶಾಮೀಲಾಗಿ ಅಕ್ರಮ ನಡೆಸುವ ಮೂಲಕ ಪುರಸಭೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ.

ಹಾಗಾಗಿ ಈ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಇಂಥಹ ತಪ್ಪುಗಳು ಮರುಕಳಿಸಬಾರದು. ಈ ಹಿಂದೆ ಯಾರ ಅವಧಿಯಲ್ಲಿ ಏನೇನು ಅವ್ಯವಹಾರಗಳು ನಡೆದಿವೆ. ನಿಯಮಗಳನ್ನು ಪಾಲಿಸಲಾಗಿದೆ ಇಲ್ಲವೆ ಎಂಬುದನ್ನು ಪತ್ತೆಹಚ್ಚಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಉದ್ದೇಶಿಸಿದೆ.

ಇದರಿಂದ ಪುರಸಭೆಗೆ ಆಗಿರುವ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಮಾಡುವ ಚಿಂತನೆ ಇದೆ. ಈ ಕಾರಣಕ್ಕೆ 2015 ರಿಂದ ಇಲ್ಲಿಯವರೆಗೆ ಈ ರೀತಿ ಅಕ್ರಮವಾಗಿ ಉತಾರ ಇತರೆ ದಾಖಲೆ ನೀಡಿಕೆಗೆ ಸಂಬಂಧಿಸಿದಂತೆ ಹಾಲಿ ಮುಖ್ಯಾಧಿಕಾರಿ ಮಂಜುನಾಥ ತಳವಾರ ಅವರಿಗೆ ಜಿಲ್ಲಾ ಅಭಿವೃದ್ಧಿ ಕೋಶದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಮುಖ್ಯಾಧಿಕಾರಿ ತಳವಾರ, ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದರು. ಇದಕ್ಕೆ ಸಂಬಂಧಿಸಿದ ಕಡತಗಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಸಿಬ್ಬಂದಿ ಹೇಳಿದರು.

ವಸತಿ ವಿನ್ಯಾಸ ನಿಯಮಗಳ ಅನುಸಾರ ಹೊಸ ಬಡಾವಣೆಗಳ ನಿರ್ಮಾಣದ ಸಂದರ್ಭದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಉದ್ಯಾನ ಮತ್ತಿತರ ಅಗತ್ಯ ಮೂಲ ಸೌಲಭ್ಯಗಳನ್ನು ಅವುಗಳ ಮಾಲಿಕರೇ ಕಲ್ಪಿಸುವುದು ಕಡ್ಡಾಯ. ಆದರೆ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಈ ಯಾವ ಅಭಿವೃದ್ಧಿಯೂ ಕಂಡುಬಂದಿಲ್ಲ.

ಕೆಲ ವರ್ಷಗಳ ನಂತರ ಈ ಎಲ್ಲ ಕೆಲಸವನ್ನು ಪುರಸಭೆಯೇ ನಿರ್ವಹಿಸಬೇಕಾದರೆ ಒಂದೊಂದು ಬಡಾವಣೆಗೆ ಕನಿಷ್ಟ ತಲಾ ₹ 35 ರಿಂದ ₹ 45 ಲಕ್ಷ ಹಣ ಬೇಕಾಗುತ್ತದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಪುರಸಭೆಗೆ ಬಹಳಷ್ಟು ನಷ್ಟವಾಗಿದೆ. ಈ ವಿಷಯದ ಅರಿವು ಇದ್ದರೂ ಹಿಂದಿನ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಉತಾರಗಳನ್ನು ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಮಂಜುನಾಥ ತಳವಾರ ಅವರು ಹೇಳಿದ್ದರೆ.

ಈ ಅಕ್ರಮಗಳಿಗೆ ಸಂಬಂಧಿಸಿದಂತೆ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಸರಣಿ ವರದಿಗಳಿಗೆ ತಕ್ಷಣ ಸ್ಪಂದಿಸಿ ಕ್ರಮಕ್ಕೆ ಮುಂದಾದ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ನಂತರ ಈ ಹಿಂದಿನ ಮುಖ್ಯಾಧಿಕಾರಿ ಉಮೇಶ ಹಿರೇಮಠ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಸಮಗ್ರ ತನಿಖೆಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT