ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮನೆಯಂಗಳದಲ್ಲಿಯೇ ತೋಟ; ಆರೋಗ್ಯಕ್ಕೆ ರಸದೂಟ

ಜನರ ಮನಸೂರೆಗೊಂಡ ತೋಟಗಾರಿಕಾ ಇಲಾಖೆಯ ಯೋಜನೆ, ತರಬೇತಿ ಪಡೆಯಲು ಆಸಕ್ತಿ
Published 5 ಫೆಬ್ರುವರಿ 2024, 6:56 IST
Last Updated 5 ಫೆಬ್ರುವರಿ 2024, 6:56 IST
ಅಕ್ಷರ ಗಾತ್ರ

ಕೊಪ್ಪಳ: ಬಳಸಿ ಬಿಸಾಡಿದ್ದ ಕುಡಿಯುವ ನೀರಿನ ಪ್ಲಾಸ್ಟಿಕ್‌ ಬಾಟಲ್‌ಗಳು ಅಲ್ಲಿ ತೂಗಾಡುತ್ತಾ ಸುಂದರವಾಗಿ ಕಂಗೊಳಿಸುತ್ತಿದ್ದವು. ಒಡೆದು ಹೋಗಿದ್ದ ಮಣ್ಣಿನ ಸಣ್ಣ ಮಡಿಕೆಗಳು ಹೊಸ ರೂಪ ಪಡೆದುಕೊಂಡಿದ್ದವು. ತುಕ್ಕು ಹಿಡಿದು ಗುಜರಿ ಸೇರಬೇಕಿದ್ದ ಕಬ್ಬಿಣದ ರಾಡು ತರಹೇವಾರಿ ಅಲಂಕಾರಿಕ ಮತ್ತು ಫಲಪುಷ್ಪದ ಮರಗಳನ್ನು ಹೊತ್ತು ಶೃಂಗಾರಗೊಂಡಿತ್ತು.

ಈ ಎಲ್ಲಾ ದೃಶ್ಯಾವಳಿಗಳು ಕಂಡು ಬಂದಿದ್ದು ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ. ಇದರ ಅಂಗವಾಗಿ ತೋಟಗಾರಿಕಾ ಇಲಾಖೆಯಿಂದ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಮತ್ತು ಮನೆಯಂಗಳದಲ್ಲಿಯೇ ಆರೋಗ್ಯ ಕಂಡುಕೊಳ್ಳಲು ಅನುಕೂಲವಾಗುವ ಮನೆಯಲ್ಲಿಯೇ ತೋಟ ಮಾಡುವ ಕಲ್ಪನೆಯನ್ನು ಜಾತ್ರೆಯಲ್ಲಿ ತೋರಿಸಲಾಗುತ್ತಿದೆ.

ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ದಿನಸಿ ಪದಾರ್ಥ, ನಿತ್ಯದ ಅಡುಗೆ ತಯಾರಿಸಲು ಬಳಸುವ ತರಕಾರಿಗಳು ವಿಷಮಯವಾಗುತ್ತಿವೆ. ಮಿತಿಮೀರಿದ ರಾಸಾಯನಿಕ ಬಳಕೆ ಎಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಜನ ತಮ್ಮ ಮನೆಯಂಗಳದಲ್ಲಿ ಇರುವ ಜಾಗದಲ್ಲಿ ಅಥವಾ ಮನೆಯ ಮೇಲಿನ ಜಾಗದಲ್ಲಿ ಕೈ ತೋಟ ಮಾಡಿಕೊಳ್ಳಬೇಕು. ಮೂರ್ನಾಲ್ಕು ಜನರಿರುವ ಒಂದು ಮನೆಯ ನಿತ್ಯದ ತರಕಾರಿಗೆ ಹೊರಗಿನ ಮಾರುಕಟ್ಟೆ ಅವಲಂಬಿಸದೇ ಮನೆಯಲ್ಲಿಯೇ ಬೆಳೆದ ತರಕಾರಿ ತಿನ್ನುವಂತೆ ಆಗಬೇಕು ಎನ್ನುವುದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶಯ. ಈ ಕಾರಣಕ್ಕಾಗಿ ತೋಟಗಾರಿಕಾ ಇಲಾಖೆ ಈ ಬಾರಿ ಅಂಗೈ ಹಾಗೂ ತಾರಸಿ ತೋಟದ ಬಗ್ಗೆ ಮೇಳ ಹಮ್ಮಿಕೊಂಡಿದೆ.     

‘ಅಂಗೈ ಅಗಲ ಕೈತೋಟ, ಆಕಾಶದಗಲ ಆರೋಗ್ಯ’ ಎನ್ನುವ ಧ್ಯೇಯವಾಕ್ಯದೊಂದಿಗೆ ಪೌಷ್ಟಿಕ ತೋಟಗಳ 50ಕ್ಕೂ ಹೆಚ್ಚು ವಿವಿಧ ತಾರಸಿ ತೋಟ ಮತ್ತು ಕೈತೋಟ ಮಾದರಿಗಳು ಮೇಳದಲ್ಲಿವೆ. ಹೈಟೆಕ್, ಮಧ್ಯಮ ಮತ್ತು ಕಡಿಮೆ ವೆಚ್ಚದ ತಾರಸಿ ಮತ್ತು ಕೈತೋಟಗಳನ್ನು ನಿರ್ಮಿಸಿದ್ದು ಎಲ್ಲಾ ವರ್ಗದ ಸಾರ್ವಜನಿಕರಿಗೆ ತಾವೇ ತಮ್ಮ ಮನೆಯಲ್ಲಿ ಲಭ್ಯವಿರುವ ಜಾಗದಲ್ಲಿ ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ತರಕಾರಿ ಬೆಳೆದುಕೊಳ್ಳಲು ಅವಕಾಶವಿದೆ.

ತಾರಸಿ ಮತ್ತು ಕೈತೋಟದಲ್ಲಿ ಮೂರು ರೀತಿಯ ಮಾದರಿಯ ತರಕಾರಿ ತೋಟಗಳನ್ನು ನಿರ್ಮಿಸಿದ್ದು, ಸಾರ್ವಜನಿಕರು ತಮ್ಮ ಮನೆಯ ಮುಂದಿನ ಜಾಗ, ಚಾವಣಿಯ ಜಾಗ, ವರಾಂಡದಲ್ಲಿರುವ ಜಾಗ, ಹಿತ್ತಲಿನಲ್ಲಿರುವ ಜಾಗದಲ್ಲಿ ಅಗತ್ಯಕ್ಕೆ ಅನುಗುಣವಾಗಿ ತರಕಾರಿ ಬೆಳೆಯಬಹುದು.

ಮನೆಯ ಸೊಬಗು ಹೆಚ್ಚಿಸುವ ತಾರಸಿ ಕೈ ತೋಟ
ಮನೆಯ ಸೊಬಗು ಹೆಚ್ಚಿಸುವ ತಾರಸಿ ಕೈ ತೋಟ

ಮಳೆಗಾಲ, ಬೇಸಿಗೆಕಾಲ, ಚಳಿಗಾಲಕ್ಕೆ ತಕ್ಕಂತೆ ತರಕಾರಿಗಳನ್ನು ಬೆಳೆಯುವ ಬಗ್ಗೆ, ತಾವೇ ತಮ್ಮ ಮನೆಯಲ್ಲಿ ಕಾಂಪೋಸ್ಟ್ ಗೊಬ್ಬರ, ಕೀಟ ಮತ್ತು ರೋಗಗಳಿಗೆ ಔಷಧಿಗಳನ್ನು ತಯಾರಿಸುವ ಬಗ್ಗೆ, ಪಾತ್ರೆ ತೊಳೆದ ಮತ್ತು ಸ್ನಾನ ಮಾಡಿದ ವಿವಿಧ ಚಟುವಟಿಕೆಗಳಿಗೆ ಉಪಯೋಗಿಸಿದ ಅನುಪಯುಕ್ತ ನೀರು ಶುದ್ದೀಕರಿಸಿ ಅದೇ ನೀರನ್ನು ತಾರಸಿ ಮತ್ತು ಕೈತೋಟಕ್ಕೆ ಉಪಯೋಗಿಸುವ ಬಗ್ಗೆಯೂ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ.

ಮನೆಯ ಮೇಲೆ ಅಂದ ಕಾಣುವ ಕೈ ತೋಟದ ಅಲಂಕಾರ
ಮನೆಯ ಮೇಲೆ ಅಂದ ಕಾಣುವ ಕೈ ತೋಟದ ಅಲಂಕಾರ

ಸ್ವಯಂಚಾಲಿತ ನೀರಾವರಿ ಹೊಂದಿರುವ ತಾರಸಿ, ಕೈತೋಟಗಳು ಇವೆ. ತೋಟದಲ್ಲಿ ವಿವಿಧ ರೀತಿಯ ದೇಶಿ ತರಕಾರಿಗಳು, ವಿದೇಶಿ ತರಕಾರಿಗಳು, ಹಣ್ಣಿನ ಗಿಡಗಳು, ಔಷಧಿ ಸಸ್ಯಗಳು ಹಾಗೂ ಹೂವಿನ ತೋಟಗಳನ್ನು ವಿವಿಧ ಸಾಮಗ್ರಿಗಳನ್ನು ಉಪಯೋಗಿಸಿ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಗುತ್ತಿದೆ.

ತಾರಸಿ ತೋಟದ ನೋಟ
ತಾರಸಿ ತೋಟದ ನೋಟ

ಹೈಟೆಕ್ ತಾರಸಿ ತೋಟದ ಮಾದರಿಯು ಆರ್ಥಿಕ ಅನುಕೂಲಗಳ ಲಭ್ಯತೆ ಮೇಲೆ ನಿರ್ಮಿಸಬಹುದು. ಈ ಮಾದರಿಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನ ಅಳವಡಿಸಿ ನಿರ್ಮಿಸಲಾಗಿದೆ. ಈ ಮಾದರಿಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹೊರಗಡೆಯಿಂದ ಖರೀದಿಸಿ ನಿರ್ಮಿಸಬೇಕು. ಕುಂಡಲ, ಪೈಪ್, ಗ್ರೋ ಕವರ್ ಹಾಗೂ ಉನ್ನತ ಗುಣಮಟ್ಟದ ಘಟಕಗಳನ್ನು ನಿರ್ಮಿಸಬೇಕು.

ಮಧ್ಯಮ ತಾರಸಿ ತೋಟದ ಮಾದರಿಯಲ್ಲಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ತರಕಾರಿ ಮತ್ತು ಹೂಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಈ ಮಾದರಿಯಲ್ಲಿ ಪ್ಲಾಸ್ಟಿಕ್ ಕುಂಡಲಗಳು, ಮಣ್ಣಿನ ಕುಂಡಲಗಳು, ಗ್ರೋ ಬ್ಯಾಗ್ ಅಳವಡಿಸಿ ತರಕಾರಿ ಬೆಳೆಯಬಹುದು. ಈ ಮಾದರಿಯಲ್ಲಿ ನೀರಾವರಿಯನ್ನು ಮಗ್ಗು ಮುಖಾಂತರ ಅಥವಾ ಬಕೆಟ್ ಮೂಲಕ ಮಾಡಬಹುದು. ಮಧ್ಯಮ ಆರ್ಥಿಕ ಹೊಂದಿರುವ ಕುಟುಂಬಗಳಿಗೆ ಸೂಕ್ತ ಹಾಗೂ ಇದರಿಂದ ತಾಜಾ ತರಕಾರಿ ಬೆಳೆದು ಆರ್ಥಿಕವಾಗಿ ಲಾಭ ಗಳಿಸಬಹುದು. ಕುಟುಂಬದ ಆರೋಗ್ಯವನ್ನೂ ಕಾಪಾಡಬಹುದು.

ಕೃಷ್ಣ ಉಕ್ಕುಂದ
ಕೃಷ್ಣ ಉಕ್ಕುಂದ
ಮಠದ ಸಹಯೋಗದಲ್ಲಿ ತರಬೇತಿಗೆ ಸಿದ್ಧತೆ
ಮೇಳದ ವೇಳೆ ತರಬೇತಿಗೆ ಆಸಕ್ತಿ ತೋರಿಸಿ ಹೆಸರು ನೋಂದಾಯಿಸಿರುವವರಿಗೆ ಗವಿಮಠದ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯೇ ತರಬೇತಿ ನೀಡಲಿದೆ ಫೆ. 6ರ ತನಕ ಮೇಳ ನಡೆಯಲಿದ್ದು ಈಗಾಗಲೇ ಸಾವಿರಾರು ಜನ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಜನ ಭೇಟಿ ನೀಡಿದ್ದಾರೆ. ‘ಗವಿಮಠದ ಸ್ವಾಮೀಜಿ ಅವರು ಆದಷ್ಟು ಕಡಿಮೆ ಸಾಮಗ್ರಿ ಬಳಕೆ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಜನಸಾಮಾನ್ಯರು ತಾರಸಿ ಅಥವಾ ಕೈ ತೋಟ ಮಾಡಿಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು. ಅದರಂದು ಸಾಮಾನ್ಯ ಜನರು ಕೂಡ ಸುಲಭವಾಗಿ ತೋಟ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾದರಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಆಸಕ್ತರಿಗೆ ತರಬೇತಿ ನೀಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT