ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಂಗಣ್ಣ ಕರಡಿ ಕಾದು ನೋಡುವ ತಂತ್ರ

ಕುತೂಹಲ ಮೂಡಿಸಿದ ಸಂಸದರ ಪತ್ರಿಕಾಗೋಷ್ಠಿ, ಏನು ಮುಂದಿನ ನಡೆ?
Published 19 ಮಾರ್ಚ್ 2024, 5:06 IST
Last Updated 19 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆ ಘೋಷಣೆಯಾಗಿ ಬಿಜೆಪಿ ಟಿಕೆಟ್‌ ಹಂಚಿಕೆಯಾದರೂ ಕ್ಷೇತ್ರದಲ್ಲಿ ಇನ್ನು ಚುನಾವಣೆಯ ಕಾವು ಕಂಡು ಬರುತ್ತಿಲ್ಲ. ಟಿಕೆಟ್ ಪ್ರಕಟವಾದ ಬಳಿಕ ಹಾಲಿ ಸಂಸದ ಸಂಗಣ್ಣ ಕರಡಿ ಬೇಸರಗೊಂಡಿದ್ದು ಅವರ ಮುಂದಿನ ನಡೆ ಏನು ಎನ್ನುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷದ ವರಿಷ್ಠರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ತಮ್ಮ ಮೂರು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೇಳಿದ್ದರು. ಇದಕ್ಕೆ ಅವರು ಕಾಲಮಿತಿ ನೀಡಿರದಿದ್ದರೂ ಉತ್ತರ ಬರುವ ತನಕ ಪಕ್ಷ ಘೋಷಿಸಿರುವ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಪರ ಪ್ರಚಾರಕ್ಕೆ ಹೋಗುವುದಿಲ್ಲವೆಂದು ಈಗಾಗಲೇ ಹೇಳಿದ್ದಾರೆ.

ಆದ್ದರಿಂದ ಬಸವರಾಜ ಅವರು ಪಕ್ಷ ಹಾಗೂ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಮುಖಂಡರ ಮನೆಮನೆಗೆ ಹೋಗಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಆನಂದ್‌ ಸಿಂಗ್‌ ಅವರ ಮನೆಗೆ ಸೋಮವಾರ ಭೇಟಿ ನೀಡಿ ಪ್ರಚಾರ ಬರುವಂತೆ ಕೋರಿದ್ದಾರೆ.

ಒಂದೆಡೆ ಪಕ್ಷದ ಅಭ್ಯರ್ಥಿ ತಮ್ಮ ಮುಖಂಡರ ಜೊತೆಗೆ ನಾಯಕರ ಭೇಟಿ ಆರಂಭಿಸಿದ್ದರೆ, ಇನ್ನೊಂದೆಡೆ ಸಂಗಣ್ಣ ಕರಡಿ ಅವರು ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ಸಂಸದರು ಪತ್ರಿಕಾಗೋಷ್ಠಿ ಕರೆದಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಬಲ್ಲ ಮೂಲಗಳ ಮಾಹಿತಿ ಪ್ರಕಾರ ಟಿಕೆಟ್‌ ಕೈ ತಪ್ಪಿದ ವಿಚಾರ, ರಾಜ್ಯ ನಾಯಕರು ತಮ್ಮೊಂದಿಗೆ ಮಾತನಾಡಿಲ್ಲವೆನ್ನುವ ಆರೋಪದ ಬಗ್ಗೆ ಹರಿದಾಡುತ್ತಿರುವ ವಿಷಯದ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಗೊತ್ತಾಗಿದೆ. ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದಿರುವ ಕೆಲ ಗೊಂದಲಗಳ ಕುರಿತು ವಿಚಾರ ಮಂಡಿಸಲು ಪತ್ರಿಕಾಗೋಷ್ಠಿ ಕರೆಯಲಾಗಿದೆ’ ಎಂದು ಅವರು ಹೇಳಿದ್ದಾರೆ.

ಆದರೆ ಅವರು ತಮ್ಮ ಮುಂದಿನ ನಡೆಯ ಗುಟ್ಟು ಬಿಟ್ಟುಕೊಡದೇ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್‌ ನಾಯಕರು ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಬಿಜೆಪಿ ಅಭ್ಯರ್ಥಿ ಜೊತೆ ಪ್ರಚಾರಕ್ಕೆ ಆರಂಭಿಸಿಲ್ಲ.

ಮೈತ್ರಿ ಪಕ್ಷದ ಜೊತೆ ಪ್ರಚಾರದ ಕುರಿತು ರಾಜ್ಯ ನಾಯಕರೊಂದಿಗೆ ಸೋಮವಾರ ಚರ್ಚಿಸಲಾಗಿದ್ದು ಎರಡು ದಿನಗಳ ಬಗ್ಗೆ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ತಿಳಿಸಲಾಗುವುದು ಎಂದು ವರಿಷ್ಠರು ಹೇಳಿದ್ದಾರೆ. ಬಳಿಕ ಪ್ರಚಾರ ಆರಂಭಿಸುತ್ತೇವೆ.

-ಸುರೇಶ ಭೂಮರೆಡ್ಡಿ ಜೆಡಿಎಸ್‌ ಜಿಲ್ಲಾಧ್ಯಕ್ಷ

ಪಕ್ಷ ಹಾಗೂ ಮೈತ್ರಿಪಕ್ಷದ ನಾಯಕರನ್ನು ಭೇಟಿಯಾಗಿ ಪ್ರಚಾರಕ್ಕೆ ಬರುವಂತೆ ಕೋರಿದ್ದೇನೆ. ಎಲ್ಲರೂ ಬರಲು ಒಪ್ಪಿದ್ದಾರೆ. ಕೆಲ ದಿನಗಳಲ್ಲಿಯೇ ಅದ್ದೂರಿಯಾಗಿ ಪ್ರಚಾರ ಆರಂಭವಾಗಲಿದೆ. ಸಂಗಣ್ಣ ಕರಡಿ ಅವರೇ ನೇತೃತ್ವ ವಹಿಸುವರು.

-ಡಾ. ಬಸವರಾಜ ಕ್ಯಾವಟರ್‌ ಬಿಜೆಪಿ ಅಭ್ಯರ್ಥಿ

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ

ಟಿಕೆಟ್‌ ಘೋಷಣೆಗೆ ಕಾಯುತ್ತಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ರಾಜಶೇಖರ ಹಿಟ್ನಾಳ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಸಿಂಧನೂರಿನ ಬಸನಗೌಡ ಬಾದರ್ಲಿ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್‌ ಖಾತ್ರಿಯಾಗುವ ಮೊದಲೇ ರಾಜಶೇಖರ ಹಿಟ್ನಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT