ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆ ಜಾಗೃತಿ

Published 28 ನವೆಂಬರ್ 2023, 15:51 IST
Last Updated 28 ನವೆಂಬರ್ 2023, 15:51 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ರೈತರಿಗೆ ಹಿಂಗಾರು ಭತ್ತಕ್ಕೆ ಬದಲು ಪರ್ಯಾಯ ಬೆಳೆ ಹಾಗೂ ಎಫ್ಐಡಿ ನೋಂದಣಿ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.

ಕೃಷಿ ಅಧಿಕಾರಿ ಪ್ರಕಾಶ ಮಾತನಾಡಿ, ‘ಗಂಗಾವತಿ ಭಾಗದಲ್ಲಿ ಭತ್ತ ಒಂದೇ ಬೆಳೆಯಲಾಗುತ್ತದೆ. ಭತ್ತಕ್ಕೆ ಹೆಚ್ಚಾಗಿ ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಣೆ ಮಾಡುತ್ತಿರುವುದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಾ ಬರುತ್ತಿದೆ. ಭೂಮಿ ರಕ್ಷಣೆಗೆ ಸಾವಯವ ಗೊಬ್ಬರದ ಬಳಕೆ ಅವಶ್ಯವಿದ್ದು, ರೈತರು ಇದರತ್ತ ಚಿತ್ತ ಹರಿಸಬೇಕು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿ, ನೀರಿನ ಅಭಾವ ಹೆಚ್ಚಾಗಿದೆ. ತುಂಗಾಭದ್ರ ಜಲಾಶಯದಲ್ಲಿ ಹಿಂಗಾರು ಬೆಳೆಗೆ ನೀರು ಇಲ್ಲದಂತಾಗಿದೆ. ಮುಂದೆ ಕುಡಿಯುವ ನೀರಿಗಾಗಿ ಸಹ ಪರದಾಡಬೇಕಾದ ಪರಿಸ್ಥಿತಿ ಇದ್ದು, ರೈತರು ಹಿಂಗಾರು ಬೆಳೆಗೆ ಅಲಸಂಧಿ, ಸೆಣಬು, ಲೈಂಚಾ, ಸಾಸಿವೆ, ಜೋಳ, ಸಜ್ಜೆ ಬೆಳೆಯಬೇಕು’ ಎಂದರು

ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಬೆಳೆನಷ್ಟ ಪರಿಹಾರ, ಪಿ.ಎಂ.ಕಿಸಾನ್, ಕೃಷಿ ಸಾಲ ಸೇರಿ ಇತರೆ ಯೋಜನೆಗಳಡಿ ಸೌಲಭ್ಯಕ್ಕೆ ಕೃಷಿ ಇಲಾಖೆ ಫ್ರೂಟ್ಸ್‌ ತಂತ್ರಾಂಶದಲ್ಲಿ ಎಫ್‌ಐಡಿ ನೋಂದಣಿ ಕಡ್ಡಾಯವಾಗಿದ್ದು, ರೈತರು ಇಲ್ಲಿ ಮಾಹಿತಿ ಭರ್ತಿ ಮಾಡಿಸಬೇಕು. ಸದ್ಯ ಗಂಗಾವತಿ ಹೋಬಳಿಯಲ್ಲಿ ಇನ್ನೂ 2803 ರೈತರು ಎಫ್ಐಡಿ ನೋಂದಣಿ ಮಾಡಿಸಬೇಕಿದೆ.

ಎಫ್ಐಡಿ ನೋಂದಣಿ ಮಾಡಿಸಬೇಕಿರುವ ರೈತರ ಪಟ್ಟಿಯನ್ನು ಗ್ರಾಮವಾರು ಎಲ್ಲ ಗ್ರಾಮ ಪಂಚಾಯಿತಿಗಳ ಸೂಚನಾ ಫಲಕದಲ್ಲಿ ಅಳವಡಿಲಾಗಿದ್ದು, ರೈತರು ತಮ್ಮ ಆಧಾರ್‌ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ ಹಾಗೂ ಇತ್ತೀಚಿನ ಪಹಣಿ ಪತ್ರಿಕೆ ಒದಗಿಸಿ ಎಫ್.ಐ.ಡಿ. ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಸಹಾಯಕ ಕೃಷಿ ಅಧಿಕಾರಿ ಡಾ.ದೀಪಾ.ಎಚ್. ಮಾತನಾಡಿ, ಕೃಷಿ ಇಲಾಖೆ ಯೋಜನೆಗಳಾದ ಕೃಷಿ ಪರಿಕರಗಳ ವಿತರಣೆ, ಸಸ್ಯ ಸಂರಕ್ಷಣೆ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ, ಕೃಷಿ ಸಂಸ್ಕರಣೆ ಮತ್ತು ಇತರೆ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಗ್ರಾ.ಪಂ ಅಧ್ಯಕ್ಷ ಕೃಷ್ಣ ಆಲೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ, ಉಪಾಧ್ಯಕ್ಷ ವಿರುಪಾಕ್ಷಯ್ಯ ಎಚ್.ಎಂ. ಮಾತನಾಡಿ ಕೃಷಿ ಇಲಾಖೆ ಯೋಜನೆಗಳ ಉಪಯೋಗ ಪಡೆಯಲು ರೈತರಿಗೆ ಕರೆ ನೀಡಿದರು.

ಆತ್ಮ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಶಾರುಫ್ ಪಾಷಾ, ನಾಗರಾಜ ಅನಾಲಿಸ್ಟ್, ಶಹಾಬುದ್ದಿನ್, ಪ್ರಾ. ಕೃ.ಪ.ಸ.ಸಂಘದ ಕಾರ್ಯದರ್ಶಿ ನವೀನ ರಾಮಸಾಗರ, ಚನ್ನಯ್ಯ ಹೀರೆಮಠ, ಕೃಷಿಸಖಿ ಶ್ರೀದೇವಿ ಸೇರಿ ಮಲ್ಲಾಪುರ, ರಾಂಪುರ, ಬಸವನದುರ್ಗಾ, ಲಕ್ಷ್ಮೀಪುರ, ಸಂಗಾಪುರ ಗ್ರಾಮದ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT