ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಸೆಳೆದ ಸೂಜಿಗಲ್ಲು ‘ರೈತ ಸಂತೆ’

ಯಶಸ್ಸಿನತ್ತ ಮೂರನೇ ವಾರ
Last Updated 14 ಫೆಬ್ರುವರಿ 2021, 3:30 IST
ಅಕ್ಷರ ಗಾತ್ರ

ಕೊಪ್ಪಳ: ‘ಮಣ್ಣಿನೊಂದಿಗೆ ಮಾತುಕತೆ’ ತಂಡ ತೋಟಗಾರಿಕೆ ಆವರಣದಲ್ಲಿ ನಡೆಸುತ್ತಿರುವ ವಾರದ ರೈತ ಸಂತೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈ ವಾರದ ಸಂತೆ ಗ್ರಾಹಕರ ಚಿಂತೆಯನ್ನು ದೂರ ಮಾಡಿದೆ. ರಾಸಾಯನಿಕ ಮುಕ್ತ, ಶುದ್ಧ, ಸಾವಯವ ಉತ್ಪನ್ನಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 20 ಪ್ರಗತಿಪರ ಮತ್ತು ಸಾವಯವ ರೈತರು ಇಲ್ಲಿ ಮಳಿಗೆಗೆಗಳನ್ನು ತೆರೆದಿದ್ದಾರೆ. ಬೆಳೆ ಬೆಳೆಯುವ ಮಾಹಿತಿ, ಪರಸ್ಪರ ವಿಶ್ವಾಸ, ಪರಿಚಯದ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ

ಈ ಮಳಿಗೆಗಳಲ್ಲಿ ತರಕಾರಿ, ಹಣ್ಣು, ಸಿರಿಧಾನ್ಯ, 10 ಸ್ವದೇಶಿ ತಳಿಯ ವಿವಿಧ ರುಚಿ, ಬಣ್ಣದ ಅಕ್ಕಿ, ಮೌಲ್ಯವರ್ಧಿತ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ದ್ರಾಕ್ಷಿ, ಸೀಬೆ, ಚಿಕ್ಕು ರುಚಿ ಗಾತ್ರದಿಂದ ಮನ ಸೆಳೆಯುತ್ತವೆ. ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ದಲ್ಲಾಳಿ, ವ್ಯಾಪಾರಿ, ತೆರಿಗೆ ಕಾಟವಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ನೇರವಾಗಿ ಹಣ ಪಡೆಯುವ ಮೂಲಕ ರೈತರು ಲಾಭಗಳಿಸಿಕೊಳ್ಳುತ್ತಿದ್ದಾರೆ.

ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಪ್ರತಿ ಗುರುವಾರ ಈ ರೈತ ಸಂತೆ ನಡೆಯುತ್ತಿದೆ. ಆಸಕ್ತ ಗ್ರಾಹಕರು ಒಮ್ಮೆ ಭೇಟಿ ನೀಡಬಹುದು.

ಆರಂಭದ ಗುರುವಾರ ಈ ಸಂತೆಯಲ್ಲಿ ₹4.50 ಲಕ್ಷ ವ್ಯಾಪಾರವಾಗಿದೆ. ಎರಡನೇ ಗುರುವಾರ ₹1.25 ಲಕ್ಷ, ಮೂರನೇ ವಾರ ₹1 ಲಕ್ಷ ವ್ಯಾಪಾರ ವಹಿವಾಟು ನಡೆದಿದೆ. ಬೆಳೆಗಾರರು ಮತ್ತು ಗ್ರಾಹಕರು ಖುಷಿಯಾಗಿದ್ದಾರೆ.

20 ಮಳಿಗೆಯಲ್ಲಿ 30ಕ್ಕೂ ಹೆಚ್ಚು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಂತೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಹಕರು ನೇರವಾಗಿ ರೈತರ ಹೊಲಗಳಿಗೆ ತೆರಳಿ ಖರೀದಿ ಮಾಡುತ್ತಿದ್ದಾರೆ. ಸಂತೆಯಲ್ಲಿ ರುಚಿಯಾದ ದ್ರಾಕ್ಷಿ, ಸೀಬೆ, ಬಾಳೆ, ಚಿಕ್ಕು ಹಣ್ಣುಗಳು, ನವಣಿ, ಅರ್ಕ ಸೇರಿದಂತೆ ಐದು ತರಹದ ಸಿರಿಧಾನ್ಯಗಳು, ಸಿರಿಧಾನ್ಯದಿಂದ ತಯಾರಿಸಿದ ದೋಸೆ ಹಿಟ್ಟು, ವಿವಿಧ ಸಿಹಿ ಲಡ್ಡುಗಳು, ಶುದ್ಧ ಜೇನುತುಪ್ಪ, ಮೆಂತೆ, ಕೊತ್ತಂಬರಿ, ಕರಿಬೇವು ಸೇರಿದಂತೆ ವಿವಿಧ ಸೊಪ್ಪುಗಳು, ಮೌಲ್ಯವರ್ಧಿತ ಉತ್ಪನ್ನಗಳಾದ ಉಪ್ಪಿನಕಾಯಿ, ಚಟ್ನಿ, ವಿವಿಧ ತರಹದ ಮಸಾಲೆ ಪದಾರ್ಥ, ಚಕ್ಕುಲಿ, ಕೋಡುಬಳೆ ಹಾಗೂ 15 ದೇಶಿ ತಳಿಯ ಅಕ್ಕಿಗಳು ಮಾರಾಟಕ್ಕೆ ಇಡಲಾಗಿತ್ತು.

ಸಂತೆಯ ಯಶಸ್ಸನ್ನು ಕಂಡು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ರೈತರನ್ನು ಭೇಟಿ ಮಾಡಿ ಗಂಗಾವತಿಯಲ್ಲಿ ಸಂತೆ ನಡೆಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಬೇಕಾದ ಸ್ಥಳ, ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಂಡದ ಸದಸ್ಯರು ಹರ್ಷದಿಂದ ಹೇಳಿದರು.

ಮಣ್ಣಿನೊಂದಿಗೆ ಮಾತುಕತೆ ತಂಡದ ಅಧ್ಯಕ್ಷ ಶಂಕರರಡ್ಡಿ ಕಾಟ್ರಳ್ಳಿ ಪತ್ರಿಕೆಯೊಂದಿಗೆ ಮಾತನಾಡಿ, ‘ರೈತ ಸಂತೆ ಕೆಲವು ರಾಜ್ಯಗಳಲ್ಲಿ ಉತ್ತಮವಾಗಿ ನಡೆಯುತ್ತಿದೆ. ಇಲ್ಲಿ ಸಮಾನ ಮನಸ್ಕ ರೈತ ಗೆಳೆಯರು ಕೂಡಿಕೊಂಡು ಹೊಸದನ್ನು ಮಾಡುವ ಉದ್ದೇಶದಿಂದ ಮಾರುಕಟ್ಟೆ ಆರಂಭಿಸಿದ್ದೇವೆ. ಸ್ವಾಭಿಮಾನ ರೈತರ, ಸ್ವಾಭಿಮಾನಿ ಮಾರುಕಟ್ಟೆ ಇದಾಗಿದ್ದು, ರೈತರು ಉತ್ಸಾಹದಿಂದ ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲು ಬರುತ್ತಿರುವುದು ಸಂತಸದ ಸಂಗತಿ’ ಎಂದರು.

ತೋಟಗಾರಿಕೆ ಇಲಾಖೆ, ಕೃಷಿಕ ಸಮಾಜದವರು ಸಹ ಸಹಕಾರ ನೀಡಿದ್ದಾರೆ. ಇದರಿಂದ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ವಾರಕ್ಕೊಮ್ಮೆ ಇಂಥ ಸಂತೆ ಆಯೋಜನೆ ಮಾಡಲು ತಂಡ ಸಿದ್ಧತೆ ನಡೆಸಿದೆ. ರೈತನ ಘನತೆಯ ಜತೆಗೆ ಆತ ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳಿಂದ ರಕ್ಷಿಸಿ ಗ್ರಾಹಕರಿಗೆ ತಲುಪಿಸುವ ಉನ್ನತ ಧ್ಯೇಯ ಕೂಡ ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT