ಗಂಗಾವತಿ: ದೇಶದಲ್ಲಿ ಜಾರಿಯಾಗುತ್ತಿರುವ ಕಾರ್ಮಿಕ ಸಂಹಿತೆ, ಖಾಸಗಿಕರಣ, ಹೊಸ ಅಪರಾಧ ಕಾನೂನುಗಳನ್ನ ವಿರೋಧಿಸಿ ಶುಕ್ರವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ಲಿಬರೇಷನ್, ಸಿಪಿಎಂ(ಎಂಎಲ್) ಲಿಬರೇಷನ್ ಪಕ್ಷದ ಸದಸ್ಯರು ಅಖಿಲ ಭಾರತ ಆಂದೋಲನ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು.
ಹೋರಾಟಗಾರ ಭಾರದ್ವಾಜ್ ಮಾತನಾಡಿ, ‘ಕಾರ್ಮಿಕರು ತಮ್ಮ ಕಾನೂನುಗಳನ್ನು ಹಲವು ಹೋರಾಟಗಳನ್ನು ನಡೆಸಿ ಪಡೆದಿದ್ದು, ಕಾರ್ಮಿಕರ ಹಿತ ಕಾಪಾಡಬೇಕಾದ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುತ್ತಿರುವುದು ಖಂಡನೀಯ. ಜಾರಿ ಮಾಡುತ್ತಿರುವ ಹೊಸ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ಸಿಪಿಐಎಂಎಲ್ ಲಿಬರೇಷನ್ ಪಕ್ಷ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಮಾತನಾಡಿ, ‘ಕಾರ್ಮಿಕ ವಿರೋಧಿ ಮತ್ತು ಹೊಸ ಅಪರಾಧ ಕಾನೂನು ಜಾರಿಗೆ ತರುವ ಮೂಲಕ ದೇಶದಲ್ಲಿ ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ತರುತ್ತಿದ್ದು, ಕಾರ್ಮಿಕರೆಲ್ಲರೂ ಜಾಗೃತರಾಗಿ ಈ ಕಾನೂನುಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು’ ಎಂದು ಮಾಹಿತಿ ನೀಡಿದರು.
ಎಐಸಿಸಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಮ, ಬಾಬರ, ಗಿಡ್ಡಪ್ಪ, ಜಿಲೇಬಿಗೌಸ, ಹನುಮಂತ ಮಲ್ಲಾಪುರ, ಹುಸೇನ ಗೋವಾ, ಮಾಯಮ್ಮ, ಪಾರ್ವತಮ್ಮ, ಇಂದ್ರಮ್ಮ, ಹನುಮಂತಪ್ಪ, ಭಿಮಣ್ಣ, ನಾಗರಾಜ, ಹುಚ್ಚಪ್ಪ, ಆಲಂಸಾಬ, ಆನಂದ ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.