ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ

ಮಂಗಳವಾರ, ಜೂಲೈ 16, 2019
28 °C
ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಡಾ.ಶಂಭು ಬಳಿಗಾರ ಅಭಿಮತ

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ

Published:
Updated:
Prajavani

ಸ್ವಾತಂತ್ರ್ಯ ಯೋಧ ಶಂಕ್ರಪ್ಪ ಸಿದ್ದಪ್ಪ ಯರಾಶಿ ವೇದಿಕೆ (ಬನ್ನಿಕೊಪ್ಪ), ಕೊಪ್ಪಳ: ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ನೀಡಬೇಕು ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಮನವಿ ಮಾಡಿದರು.

ಕುಕನೂರ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಈಶ್ವರ-ಮಾರುತೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಉದ್ಯೋಗಾಕಾಂಕ್ಷಿಗಳು ಕೇಂದ್ರ ಸರ್ಕಾರದ ಕಠಿಣ ನಿಲುವುಗಳಿಂದ ಪ್ರತಿಭೆಯಿದ್ದರೂ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅವರ, ಅವರ ಭಾಷೆಯಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಮಾತೃಭಾಷೆಯಲ್ಲಿಯೇ ನೀಡಬೇಕು. ಅನ್ಯ ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ ಆದರೆ ಅದೇ ಮಾಧ್ಯಮವಾಗಬಾರದು. ಸರ್ಕಾರ ಆರಂಭಿಸಿರುವ ಇಂಗ್ಲಿಷ್‌ ಶಾಲೆಗೆ ನಮ್ಮ ವಿರೋಧವಿದೆ ಎಂದು ವೇದಿಕೆಯ ಮೇಲೆ ಖಂಡಿಸಿದರು.

ಪ್ರಾಥಮಿಕ ಶಾಲೆ ಶಿಕ್ಷಕರು ಯಾವುದೇ ವಶೀಲಿ ಇಲ್ಲದೆ ಮೆರಿಟ್ ಆಧಾರದ ಮೇಲೆ ನೇಮಕಗೊಂಡಿರುತ್ತಾರೆ ಎಂಬುವುದು ನನ್ನ ಭಾವನೆ. ನಿಮ್ಮಲ್ಲಿ ಸಾಮರ್ಥ್ಯ ಇರುವುದರಿಂದಲೇ ಆಯ್ಕೆಯಾಗಿರುತ್ತೀರಿ. ಆ ಸಾಮರ್ಥ್ಯ ಮತ್ತು ಶಕ್ತಿಯನ್ನು ಉಪಯೋಗಿಸಿ ಕನ್ನಡ ಶಾಲೆಗೆ ಮಕ್ಕಳು ಬರುವಂತೆ ಮಾಡಬೇಕಾದ ಜವಾಬ್ದಾರಿ ನಿಮ್ಮದು. ಸಮೀಪದ ಖಾಸಗಿ ಶಾಲೆಗಳು ಮುಂಚುವ ಹಂತಕ್ಕೆ ಬರುವಂತೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಭಾಗದಲ್ಲಿ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ತಳಮೂಲದ ಸಂಸ್ಕೃತಿ ಇನ್ನಷ್ಟು ಗಟ್ಟಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ಕೂಡಾ ರಚನೆ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಪ್ರಸ್ತುತ ರಾಜಕೀಯ ಸ್ಥಿತಿ ಅತ್ಯಂತ ಖೇದನೀಯವಾಗಿದೆ. ಅವರಲ್ಲಿ ಒಂದು ಗುಂಗು ಹೊಕ್ಕಿದೆ. ಆ ಗುಂಗನ್ನು ಪ್ರಜ್ಞಾವಂತರಾದ ನಾವು ಬಿಡಿಸಿಬೇಕಾಗಿದೆ ಎಂದು ಮಂಗಗಳ ಕಥೆ ಹೇಳುವ ಮೂಲಕ ಸ್ವಾರಸ್ಯಕರವಾಗಿ ರಾಜಕೀಯ ಸ್ಥಿತಿಯನ್ನು ವಿಡಂಭಣೆ ಮಾಡಿದರು.

ಕನ್ನಡ ಮೊದಲ ಅರಸ ಕದಂಬರ ಮಯೂರ ವರ್ಮ ಸಾಮ್ರಾಜ್ಯ ಕಟ್ಟಿದ್ದೇ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ. ಕನ್ನಡಿಗರಾದ ನಾವು ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಿಡಿದು ನಿಲ್ಲಬೇಕು. ಭಾಷಾ ಮಧ್ಯಮ ಸ್ಥಿತಿ ಗೊಂದಲದಲ್ಲಿ ಇದೆ. ಗ್ರಾಮೀಣ ಭಾಗದಲ್ಲಿ ಕೂಡು ಕುಟುಂಬ, ಕೃಷಿ ನಾಶವಾಗುತ್ತಿದೆ. ಸರ್ಕಾರ ಸಾವಯವ ಕೃಷಿಯತ್ತ ನಡೆಯಿರಿ ಎಂದು ಹೇಳುತ್ತಿದೆ, ಎತ್ತು, ಕತ್ತೆ ಮಾರಿದ ಮೇಲೆ ಟ್ರಾಕ್ಟರ್ ಮೂಲಕ ಉಳಿಮೆ ಆರಂಭಿಸುವಂತೆ ಮಾಡಿದ ಆಳುವ ವರ್ಗದ ನಡೆಯಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತೆಯಾಗಿದೆ ಎಂದು ವಿಷಾದಿಸಿದರು.

ಕಾಯಕ ಮತ್ತು ಕೆಲಸಕ್ಕೆ ವ್ಯತ್ಯಾಸವಿದೆ. ಕಳ್ಳತನ ಮಾಡುವುದು ಕೆಲಸ, ಸತ್ಯ-ಶುದ್ಧವಾಗಿ ದುಡಿಯುವುದು ಕಾಯಕ. ಕಬ್ಬು ಜಗಿದು ತಿನ್ನುವುದು ಪ್ರಕೃತಿ, ಹಲ್ಲು ಇಲ್ಲದವರು ಗಾಣದಲ್ಲಿ ನುರಿಸಿ ಹಾಲು ಕುಡಿಯುವುದು ವಿಕೃತಿ. ಕಬ್ಬಿನ ರಸವನ್ನು ನೆಲದಲ್ಲಿ ಹುಗಿದು ಹೆಂಡ ತಯಾರಿಸುವುದು ವಿಕೃತಿ ಎಂದು ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಮ್ಮೇಳನದ ಅಧ್ಯಕ್ಷ ಪ್ರೊ.ಟಿ.ವಿ.ಮಾಗಳದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ಸ್ವಾಗತಿಸಿದರು. ಕೇಂದ್ರ ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಚಂದ್ರಶೇಖರಗೌಡ ಮಾಲಿಪಾಟೀಲ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹನಮಂತಗೌಡ ಪಾಟೀಲ ಚಂಡೂರ, ವೆಂಕಣ್ಣ ದೊಡ್ಡಯರಾಶಿ ಮುಂತಾದವರು ಇದ್ದರು. ಸದಾಶಿವ ಪಾಟೀಲ ಪ್ರಾರ್ಥಿಸಿದರು. ಲಿಂಗಾರೆಡ್ಡಿ ಆಲೂರ ನಿರೂಪಿಸಿದರು. ಲಕ್ಷ್ಮಣ ಹಿರೇಮನಿ ವಂದಿಸಿದರು.

 **

ಪುಸ್ತಕ ಬಿಡುಗಡೆ

ಸಮ್ಮೇಳನ ನಿಮಿತ್ತ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 

ಪತ್ರಕರ್ತ ಶರಣಪ್ಪ ಬಾಚಾಲಾಪುರ ಅವರ 'ನನ್ನ ಕಥೆಗಳು' ಕಥಾ ಸಂಕಲನ, 'ನಿಲುವು' ಲೇಖನ ಬರಹ, ಘಟ್ಟಿರಡ್ಡಿಹಾಳದ ರೂಪಾ ರಕರಡ್ಡಿ ಅವರ ಬಾಲ್ಯವಿವಾಹ ಲೇಖನ ಸಂಗ್ರಹ, ಆಂಜನೇಯ ಬಸಪ್ಪ ದೊಡ್ಡಮನಿ ಅವರ ಮೊದಲ ಹೆಜ್ಜೆ ಕವನ ಸಂಕಲನ, ಶರಣಪ್ಪ ಷಣ್ಮುಖಪ್ಪ ಆದಾಪುರ ಅವರ ಹೊನಲಸಿರಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !