ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಟಗಿ: ಅಪಾಯ ಆಹ್ವಾನಿಸುವ ಅವೈಜ್ಞಾನಿಕ ರಸ್ತೆಯುಬ್ಬು

ವಾಹನ ಸವಾರರು ಎಚ್ಚರ ತಪ್ಪಿದರೆ ಆಪತ್ತು: ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
Published 4 ಜುಲೈ 2024, 6:00 IST
Last Updated 4 ಜುಲೈ 2024, 6:00 IST
ಅಕ್ಷರ ಗಾತ್ರ

ಕಾರಟಗಿ: ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ ಗ್ರಾಮದ ಶಾಲಾ– ಕಾಲೇಜು, ಜನನಿಬಿಡ ಸ್ಥಳಗಳ ಬಳಿ ರಸ್ತೆಯುಬ್ಬು (ಹಂಪ್ಸ್‌) ನಿರ್ಮಿಸುವುದು ಸಹಜ. ಅವೈಜ್ಞಾನಿಕ, ಸೂಚನಾ ಫಲಕವಿಲ್ಲದೇ ಭಾರಿ ಗಾತ್ರದಲ್ಲಿ ಹಂಪ್ಸ್‌ ಹಾಕಿದರೆ ಅನುಕೂಲಕ್ಕಿಂತ ಅಪಘಾತಕ್ಕೆ ಅಹ್ವಾನ ನೀಡಿದಂತೆಯೇ ಸರಿ. ಇಂತಹ ಭಾರಿ ಗಾತ್ರದ ರಸ್ತೆಹುಬ್ಬುಗಳನ್ನು ಸಮೀಪದ ನಾಗನಕಲ್‌ ಮತ್ತಿತರೆಡೆ ನಿರ್ಮಿಸಲಾಗಿದೆ.

ಸುರಕ್ಷತೆಯ ಬದಲು ಇದೇ ಸ್ಥಳದಲ್ಲಿ ಅಪಘಾತಗಳು ನಿರಂತರವಾಗಿ ಆಗುತ್ತಿವೆ. ವೃದ್ಧೆಯೊಬ್ಬರು ಮೃತಪಟ್ಟ ಘಟನೆಯೂ ನಡೆದಿದೆ. ಇಲಾಖೆ, ಗುತ್ತಿಗೆದಾರರು ತಮಗೇನೂ ಸಂಬಂಧವೇ ಇಲ್ಲ ಎಂಬಂತೆ ಜಾಣಮೌನ ತಾಳಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಕಾರಟಗಿಯಿಂದ ನವಲಿವರೆಗೆ ರಸ್ತೆ ನಿರ್ಮಿಸಲಾಗಿದೆ. ನಾಗನಕಲ್‌ ಗ್ರಾಮದ ಬಳಿ ಎರಡೂ ಭಾಗದಲ್ಲಿ ಭಾರಿ ಗಾತ್ರದ ರಸ್ತೆಹುಬ್ಬು ಹಾಕಲಾಗಿದೆ. ರಾತ್ರಿ ಅಷ್ಟೇ ಅಲ್ಲ, ಹಗಲಲ್ಲೂ ವಾಹನ ಸವಾರರು ಎಚ್ಚರ ತಪ್ಪಿದರೆ, ಆಯತಪ್ಪಿ ಬಿದ್ದು ಆಸ್ಪತ್ರೆ ಸೇರಿದ ಅನೇಕ ಘಟನೆಗಳು ನಿರಂತರವಾಗಿ ಜರುಗುತ್ತಲೇ ಇವೆ. ಸರಣಿ ಅಪಘಾತಗಳು ಸಂಭವಿಸಿದಾಗ ಗುತ್ತಿಗೆದಾರ ಹುಬ್ಬುಗಳ ಮೇಲೆ ರೇಡಿಯಂ ಹಾಕಿ ಕೈತೊಳೆದುಕೊಂಡಿದ್ದಾರೆ. ಆದರೆ ಅಪಘಾತಗಳು ಮರುಕಳಿಸುತ್ತಿವೆ. ಇನ್ನು ಕಾರು, ಲಾರಿ ಮತ್ತಿತರ ವಾಹನಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ.

‘ಹಂಪ್ಸ್‌ಗಳಿಂದ ನಾಗನಕಲ್‌ ರಸ್ತೆಯು ಅಪಘಾತದ ವಲಯವಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಹುಸೇನ್‌ಸಾಬ.

‘ರಸ್ತೆಯುಬ್ಬುಗಳ ಅಳವಡಿಕೆಯ ಉದ್ದೇಶವೇ ಅಪಘಾತಗಳನ್ನು ತಪ್ಪಿಸುವುದು. ಆದರೆ ನಮ್ಮೂರಲ್ಲಿ ಮಾತ್ರ ಅಪಘಾತಗಳು ನಡೆದು, ಜನರಿಗೆ ಸಮಸ್ಯೆಯಾಗಲಿ ಎಂಬುದಕ್ಕೆ ನಿರ್ಮಿಸಲಾಗಿದೆ ಎಂಬತಾಗಿದೆ’ ಎಂದು ರಾಜಾ ಅಸಮಾಧಾನ ವ್ಯಕ್ತಪಡಿಸಿದರು.

‘ಕಾರಟಗಿ–ನವಲಿ ಮಧ್ಯೆ ವಾಹನಗಳ ಓಡಾಟ ಅಧಿಕ ಸಂಖ್ಯೆಯಲ್ಲಿರುತ್ತದೆ. ಸುರಕ್ಷತೆಯಿಲ್ಲದ ರಸ್ತೆಹುಬ್ಬು ಹಾಕಿರುವುದು ಯಾವ ಉದ್ದೇಶಕ್ಕೆ ಎಂಬುದೇ ಗೊತ್ತಾಗುತ್ತಿಲ್ಲ. ನಾಗನಕಲ್, ತುಂಗಭದ್ರ ಎಡದಂಡೆ ಮುಖ್ಯನಾಲೆ ಹತ್ತಿರ, ಗುಡೂರು, ಸೋಮನಾಳ ಬಳಿ ರಸ್ತೆಹುಬ್ಬು ಹಾಕಲಾಗಿದೆ. ಅವೈಜ್ಞಾನಿಕ ಹುಬ್ಬುಗಳಿಂದ ಸುರಕ್ಷತೆ ಮಾಯವಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.

ನಾಗನಕಲ್‌ ಬಳಿ ಯುವಕನೊಬ್ಬ ಬೈಕ್ ಮೇಲೆ ಹೋಗುವಾಗ ಬಿದ್ದು, ಪ್ರಜ್ಞೆ ತಪ್ಪಿದ್ದರು. ಕರ್ತವ್ಯ ಮುಗಿಸಿ ಮನೆಗೆ ಹೊರಟಿದ್ದ ಹೋಂಗಾರ್ಡ್‌ ಎಸ್‌.ತಿಮ್ಮಣ್ಣ ಎಂಬುವರು ಆಂಬುಲೆನ್ಸ್‌ಗೆ ಕರೆ ಮಾಡಿ, ಯುವಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು. ‘ಇಂತಹ ಘಟನೆಗಳು ಸಹಜ ಎನ್ನುವಂತೆ ನಿರಂತರವಾಗಿ ನಡೆಯುತ್ತಿವೆ’ ಎನ್ನುತ್ತಾರೆ ಎಸ್.‌ತಿಮ್ಮಣ್ಣ.

‘ಅಪಾಯಕಾರಿಯಾಗಿ ಪರಿಣಮಿಸಿರುವ ರಸ್ತೆಹುಬ್ಬುಗಳನ್ನು ವೈಜ್ಞಾನಿಕವಾಗಿ ಹಾಕಿ, ಸೂಚನಾಫಲಕ ಅಳವಡಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಾನೇನೂ ವೇಗವಾಗಿ ಬರುತ್ತಿರಲಿಲ್ಲ. ಹಂಪ್ಸ್‌ ಇರುವ ಕಲ್ಪನೆ ಬಾರದಂತೆ ಹಾಕಲಾಗಿದೆ. ಆಯತಪ್ಪಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಪುಣ್ಯಾತ್ಮರು ಆಸ್ಪತ್ರೆಗೆ ಸೇರಿಸಿ ಮರುಜನ್ಮ ನೀಡಿದರು. ಇಂಥಹ ಅಸುರಕ್ಷತೆಯ ಹಂಪ್ಸ್‌ಗಳ ಅವಶ್ಯಕತೆ ಇದೆಯೇ? ಸಂಬಂಧಿಸಿದವರು ಗಮನಹರಿಸಿ ಮುಂದೆ ಆಗುವ ಅನಾಹುತ ತಪ್ಪಿಸಬೇಕು
ಶಿವಶಂಕರ ಹರಿಜನ ಕಾರಟಗಿ
ರಸ್ತೆ ನಿರ್ಮಿಸುವಾಗ ಜನರು ಹಂಪ್ಸ್‌ ಹಾಕಲು ಒತ್ತಾಯಿಸಿ ಕಾಮಗಾರಿ ನಿಲ್ಲಿಸಿದ್ದರು. ಅವರ ಬೇಡಿಕೆಯಂತೆ ಹಂಪ್ಸ್‌ಗಳನ್ನು ಇತರೆಡೆ ಹಾಕಿಲ್ಲ. ಗ್ರಾಮದ ಆರಂಭ ಅಂತ್ಯದಲ್ಲಿ ಮಾತ್ರ ಹಾಕಿದ್ದೇವೆ. ಅವರ ಬೇಡಿಕೆ ಇನ್ನೂ ಕೆಲವು ಕಡೆ ಹಾಕಬೇಕು ಎಂಬುದಾಗಿತ್ತು. ಜನರ ಆಗ್ರಹಕ್ಕೆ ಮಣಿದು ಹಂಪ್ಸ್‌ ಹಾಕುವುದು ಅನಿವಾರ್ಯವಾಗಿತ್ತು
ದೇವೇಂದ್ರಪ್ಪ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT