ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆಗೊಂದಿ: ಅನೈತಿಕ ಚಟುವಟಿಕೆ ತಾಣವಾದ ವಿಜಯನಗರ ಕಾಲದ ಮಂಟಪಗಳು

ಎಲ್ಲೆಂದರಲ್ಲಿ ಕಂಡುಬರುವ ಪ್ಲಾಸ್ಟಿಕ್, ಮದ್ಯದ ಬಾಟಲ್
ಎನ್‌.ವಿಜಯ್
Published : 1 ಅಕ್ಟೋಬರ್ 2024, 6:52 IST
Last Updated : 1 ಅಕ್ಟೋಬರ್ 2024, 6:52 IST
ಫಾಲೋ ಮಾಡಿ
Comments

ಗಂಗಾವತಿ: ರಾಮಾಯಣ ಮತ್ತು ವಿಜಯನಗರ ಸಾಮ್ರಾಜ್ಯದ ಇತಿಹಾಸ, ಗತವೈಭವ ಸಾರುವ ಆನೆಗೊಂದಿ ಗ್ರಾಮ ಸುತ್ತಮುತ್ತಲಿನ ಮಂಟಪಗಳು, ಸ್ಮಾರಕಗಳು, ದೇವಸ್ಥಾನಗಳು ನಿರ್ವಹಣೆಯಿಲ್ಲದೆ ಬಳಲುತ್ತಿದ್ದು, ಪಡ್ಡೆಹುಡುಗರ ಪಾಲಿಗೆ ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಟ್ಟಿವೆ.

ವಿಜಯನಗರ ಸಾಮ್ರಾಜ್ಯಕ್ಕೆ ಬಹಳ ವರ್ಷಗಳ ಇತಿಹಾಸವಿದ್ದು, ಇಂದಿನ ಆನೆಗೊಂದಿ ಅಂದಿನ ಹಂಪಿಯ ಮೊದಲ ರಾಜಧಾನಿ ಆಗಿತ್ತು. ಇಲ್ಲಿನ ಆಗಿನ ಕಾಲದ ಕೋಟೆ, ಮಂಟಪ, ಗೋಪುರ, ದೇವಸ್ಥಾನ, ಅಗಸಿ ಸೇರಿ ಜೈನ ಬಸಿದಿಯಿದ್ದು, ಇವುಗಳ ವೀಕ್ಷಣೆಗೆ ವಿವಿಧ ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕುಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

ಆದರೆ, ಈ ಸ್ಥಳಗಳಲ್ಲಿ ಯುವಕರು, ವೃದ್ಧರು ಹಗಲು-ರಾತ್ರಿಯೆನ್ನದೇ ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆ ಜತೆಗೆ ಇಸ್ಪೀಟ್ ಜೂಜು ಆಡುತ್ತಿದ್ದಾರೆ. ಮಾಂಸದೂಟ ಸೇವನೆ ಮಾಡಿ, ಸ್ಮಾರಕ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಹೊಲಸು ಎಬ್ಬಿಸುತ್ತಿದ್ದಾರೆ. ಈ ದೃಶ್ಯಗಳನ್ನ ಕಂಡ ಪ್ರವಾಸಿಗರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಕೆಲ ಸ್ಥಳಗಳಲ್ಲಿ ಪ್ರೇಮಿಗಳಿಂದ ಅಸಭ್ಯ ವರ್ತನೆಯು ಸಹ ಪ್ರವಾಸಿಗರಿಗೆ ತೊಂದರೆಯಾಗಿದೆ.

ಎಲ್ಲೆಲ್ಲಿ ಮದ್ಯಪಾನ, ದೂಮಪಾನ: ಆನೆಗೊಂದಿ ನಿಸರ್ಗ ಮತ್ತು ವಿಜಯನಗರ ಕಾಲದ ಸ್ಮಾರಕಗಳ ಸವಿಯುವ ತಾಣ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರು ಸ್ಥಳಗಳ ಸೌಂದರ್ಯ ಸವಿಯದೇ, ಕುಡಿದು, ತಿಂದು ಪಾರ್ಟಿ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಇದರಿಂದ 64 ಸಾಲುಮಂಟಪ, ಕಲ್ಲು ಅಗಸಿ, ಚಿಂತಾಮಣಿ, ಆನೆಸಾಲು, ಒಂಟೆ ಸಾಲು ಕೋಟೆ, ಶಿವನ ದೇವಸ್ಥಾನ, ಮಲೆದೇವರ ಗುಡಿ ಯುವಕರಿಗೆ ಕುಡುಕರ ತಾಣವಾಗಿ ಬದಲಾಗಿವೆ.

ಇಸ್ಪೀಟ್ ಸ್ಪಾಟ್ ಆದ ಆಯುಧ ಪುರುಷ ಸುದರ್ಶನ ಚಕ್ರ ಶಿಲ್ಪ ಮಂದಿರ: ವಿಜಯನಗರ ಸಾಮ್ರಾಜ್ಯದ ವಾಸ್ತು ಮತ್ತು ಶಿಲ್ಪ ಕಲೆಯಲ್ಲಿ ಈ ಆಯುಧ ಪುರುಷ ಸುದರ್ಶನ ಚಕ್ರ ಶಿಲ್ಪ ಮಂದಿರ ನಿರ್ಮಾಣ ಅಪರೂಪವಾಗಿದ್ದು, ಹಂಪಿ ಮತ್ತು ಆನೆಗೊಂದಿಯಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದೆ. ಮೂರ್ತಿ ಶಿಲ್ಪ ಅಧ್ಯಯನದ ಪ್ರಕಾರ ಶ್ರದ್ಧಾದ ಅನುಕೂಲಕ್ಕೆ ನಿರ್ಮಿಸಿದ್ದು, ಇದು ಸ್ಥಳೀಯ ಇಸ್ಪೀಟ್ ಅಡ್ಡೆಯಾಗಿ ಬದಲಾಗಿದೆ.

ವಸ್ತುಸಂಗ್ರಹ ತಾಣವಾದ ಗೋಪುರ: ಆನೆಗೊಂದಿ ಗ್ರಾಮದ ಕುಟುಂಬವೊಂದು ವಿಜಯನಗರ ಕಾಲದ ಗೋಪುರ ಮಂಟಪವನ್ನು ಚೀಲ, ಹಾಳಾದ ಸೈಕಲ್ ಸೇರಿ ನಿರುಪಯುಕ್ತ ವಸ್ತುಗಳ ಸಂಗ್ರಹಕ್ಕೆ ಬಳಸುತ್ತಿದೆ. ತಳವಾರಗಟ್ಟದ ಬಳಿ ಮೀನುಗಾರರು ಹರಿಗೋಲು, ಮೀನಿನ ಬಲೆ ಇಟ್ಟಿರುವುದು ಕಂಡುಬಂದಿದೆ.

ಆನೆಗೊಂದಿ ಗ್ರಾಮದಲ್ಲಿ ಚಿಂತಾಮಣಿಗೆ ತೆರುಳವ ರಸ್ತೆ ಮಾರ್ಗದಲ್ಲಿರುವ ಗೋಪುರವನ್ನು ಗ್ರಾಮದ ಕುಟುಂಬವೊಂದು ನಿರುಪಯುಕ್ತ ವಸ್ತುಗಳ ಬಳಕೆಗೆ ಉಪಯೋಗಿಸಿರುವುದು
ಆನೆಗೊಂದಿ ಗ್ರಾಮದಲ್ಲಿ ಚಿಂತಾಮಣಿಗೆ ತೆರುಳವ ರಸ್ತೆ ಮಾರ್ಗದಲ್ಲಿರುವ ಗೋಪುರವನ್ನು ಗ್ರಾಮದ ಕುಟುಂಬವೊಂದು ನಿರುಪಯುಕ್ತ ವಸ್ತುಗಳ ಬಳಕೆಗೆ ಉಪಯೋಗಿಸಿರುವುದು

ಯಾರು ಏನಂತಾರೆ...

ಆನೆಗೊಂದಿ ಗ್ರಾಮದ ಸುತ್ತಲಿನ ವಿಜಯನಗರ ಕಾಲದ ಮಂಟಪ ಸ್ಮಾರಕ ಗೋಪುರಗಳಲ್ಲಿ ಎತ್ತ ನೋಡಿದರೂ ಗುಟ್ಕಾ ಮದ್ಯದ ಡಬ್ಬಿ ಬಾಟಲ್ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ ಸಂಗ್ರಹದ ಜತೆಗೆ ಗಿಡ-ಗಂಟಿ ಹುಲ್ಲು ಬೆಳೆದು ಅಸ್ವಚ್ಛತೆಯಿಂದ ಕೂಡಿವೆ. ಇವುಗಳ ರಕ್ಷಣೆಗೆ ಯಾವ ಇಲಾಖೆಯು ಹೊಣೆ ಹೊರುತ್ತಿಲ್ಲ. ಹೀಗೆ ಮುಂದುವರಿದರೆ ಇತಿಹಾಸ ಅಂತ್ಯವಾಗುತ್ತದೆ.

-ವಿಜಯಕುಮಾರ ಆನೆಗೊಂದಿ ಗ್ರಾಮದ ನಿವಾಸಿ ಆನೆಗೊಂದಿ

ಭೌಗೋಳಿಕ ಪ್ರಾಗೈತಿಹಾಸಿಕ ಪೌರಾಣಿಕ ಚಾರಿತ್ರಿಕ ಧಾರ್ಮಿಕ ಹಾಗೂ ಕಲಾತ್ಮಕವಾಗಿ ನಾಡಿನಲ್ಲೇ ಅದ್ಭುತ ಪರಂಪರೆಯ ನೆಲೆಯಾಗಿದೆ. ಆ ಪರಂಪರೆಯ ಪ್ರತೀಕಗಳಾದ ಅಲ್ಲಿಯ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿ ಮಾಡಬೇಕಿದೆ. ಶರಣಬಸಪ್ಪ ಕೋಲ್ಕಾರ ಇತಿಹಾಸ ಸಂಶೋಧಕ ಗಂಗಾವತಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಾಗೃತಿ ಮೂಡಿಸುವುದು ನಮ್ಮ ಇಲಾಖೆ ಕರ್ತವ್ಯ. ಆದರೆ ಸ್ಮಾರಕ ಮಂಟಪಗಳ ನಿರ್ವಹಣೆ ಮಾತ್ರ ಪುರಾತತ್ವ ಇಲಾಖೆ ಹೊಣೆ. ನಮ್ಮ ಇಲಾಖೆಗೆ ಸೂಕ್ತ ಸಿಬ್ಬಂದಿ ಇರದ ಕಾರಣ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿಲ್ಲ.

-ಡಿ.ನಾಗರಾಜ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT