ಮಂಗಳವಾರ, ಜೂನ್ 22, 2021
28 °C

ಹನುಮನ ಜನ್ಮಸ್ಥಳದ ಬಗ್ಗೆ ತಿರುಪತಿಗೆ ನಾನೇ ಹೋಗಿ ಸ್ಪಷ್ಟನೆ ನೀಡುವೆ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ ಎಂದು ಸಾಬೀತುಪಡಿಸಲು ನಾವು ಸ್ವತಃ ತಿರುಪತಿಗೆ ಹೋಗಿ ಸ್ಪಷ್ಟನೆ ನೀಡುತ್ತೇವೆ’ ಎಂದು ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪೀಠಾಧಿಪತಿ ಗೋವಿಂದಾ ನಂದ ಸರಸ್ವತಿ ಮಹಾರಾಜ ಸ್ವಾಮೀಜಿ ಸೋಮವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು, ‘ಆಂಧ್ರದ ಅನ್ನದಾನ ಚಿದಂಬರ ಶಾಸ್ತ್ರಿ ಎಂಬುವವರು ಸುಳ್ಳುದಾಖಲೆ ಸೃಷ್ಟಿಸಿ ತಿರುಮಲದಲ್ಲಿ ಹನುಮಂತನ ಜನನವಾಗಿದೆ ಎಂದು ಟಿಟಿಡಿ ಮೂಲಕ ಹೇಳಿಸಿದ್ದಾರೆ. ನಮ್ಮ ರಾಜ್ಯ ಸರ್ಕಾರ ಅಥವಾ ಪೇಜಾವರ ಮತ್ತಿತರ ಪ್ರಮುಖ ಮಠಾಧೀಶರು ಈ ಕುರಿತು ಮಾತನಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಆನೆಗೊಂದಿ ಭಾಗದ ಕಿಷ್ಕಿಂಧೆ ಪ್ರದೇಶವೇ ಹನುಮಂತನ ಜನ್ಮಸ್ಥಳ. ಈ ಕುರಿತು ತ್ರೇತಾಯುಗದ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆ ಹೇಗೆಯೋ ಅದೇ ರೀತಿ ಹನುಮಂತನ ಜನ್ಮಭೂಮಿ ಅಂಜನಾದ್ರಿಯೇ ಹೊರತು ಇನ್ನಾವ ಸ್ಥಳವಲ್ಲ’ ಎಂದರು.

‘ಟಿಟಿಡಿ ಈಗ ಹನುಮಂತನ ಜನ್ಮಭೂಮಿ ತಿರುಮಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ರಾಮಚಂದ್ರಾಪುರ ಮಠದ ಸ್ವಾಮಿಗಳು ಗೋಕರ್ಣದಲ್ಲಿ ಹನುಮಂತನ ಜನನವಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವು ಶುದ್ಧ ಸುಳ್ಳಿನಿಂದ ಕೂಡಿವೆ’ ಎಂದು ಹೇಳಿದರು.

‘ಅಂಜನಾದ್ರಿ ಪರ್ವತದ ಗುಹೆಯಲ್ಲಿ ವಾಯುಪುತ್ರ ಹನುಮಂತನ ಜನನವಾಗಿರುವುದು ವಾಲ್ಮೀಕಿ ರಾಮಾಯಣ ಸೇರಿದಂತೆ ಇನ್ನಿತರ ಪುರಾಣ ಮತ್ತು ಸಾವಿರಾರು ವರ್ಷಗಳ ಸಂಸ್ಕೃತ ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖಗೊಂಡಿದೆ. ಇದಕ್ಕೆ ಎಲ್ಲಾ ದಾಖಲೆಗಳು ನಮ್ಮಲ್ಲಿ ಲಭ್ಯವಿವೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.