ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಾದರೂ ಸಲಹೆ ಕೊಡಬಹುದು: ಬಿ.ಸಿ.ಪಾಟೀಲ್‌

ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅಭಿಮತ
Last Updated 5 ಜೂನ್ 2020, 16:04 IST
ಅಕ್ಷರ ಗಾತ್ರ

ಕೊಪ್ಪಳ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಅವರ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ ಎಂದು ಹೇಳಲಾಗುತ್ತಿತ್ತು. ಅವರು ಒಬ್ಬ ಮುಖ್ಯಮಂತ್ರಿ ಆಗಿದ್ದರೆ. ಅವರ ಮಗ ರಾಕೇಶ್‌ ಇನ್ನೊಬ್ಬ ಮುಖ್ಯಮಂತ್ರಿ ಎನ್ನಲಾಗುತ್ತಿತ್ತು. ಅಲ್ಲದೆ ಕೆಂಪಯ್ಯನವರು ಡಿಫ್ಯಾಕ್ಟ್‌ ಹೋಂ ಮಿನಿಸ್ಟರ್‌ ಎನ್ನಲಾಗುತ್ತಿತ್ತು‘ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಆರೋಪಿಸಿದರು.

ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶುಕ್ರವಾರ ಕೊಪ್ಪಳದಲ್ಲಿ ಕೃಷಿ ಸಚಿವರು ಪ್ರತಿಕ್ರಿಯಿಸಿದ್ದು ಹೀಗೆ.

‘ರಾಜಕೀಯದಲ್ಲಿ ಆಪಾದನೆ ಮಾಡೋದು ಸಹಜ. ಆದರೆ ಸರ್ಕಾರದಲ್ಲಿ ಅಂಥದ್ದೆಲ್ಲ ಇಲ್ಲ. ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ. ಅವರ ಪುತ್ರನ ಹಸ್ತಕ್ಷೇಪವೇನು ಇಲ್ಲ. ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದ ಮಾತು.ಚುನಾವಣೆಗಳಲ್ಲಿ ನಾವು ಎಲ್ಲರನ್ನೂ ದುಡಿಸಿಕೊಳ್ಳುತ್ತೀವಿ. ಅಧಿಕಾರ ಬಂದಮೇಲೆ ಅವರಿಗೆಲ್ಲ ಯಾರೂ ನಮ್ಮ ಹತ್ತಿರಕ್ಕೆ ಬರಬೇಡಿ ಎಂದರೆ ಹೇಗೆ?. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲಹೆ ಸೂಚನೆಗಳನ್ನು ಯಾರು ಬೇಕಾದರೂ ಕೊಡಬಹುದು. ಅದನ್ನು ಪಡೆಯುವುದು, ಬಿಡುವುದು ಅಧಿಕಾರದಲ್ಲಿ ಇರುವವರಿಗೆ ಬಿಟ್ಟ ವಿಚಾರ. ಪ್ರಸ್ತುತ ರಾಜ್ಯದಲ್ಲಿ ಆ ತರಹದ ವಾತಾವರಣ ಇಲ್ಲ‘ ಎಂದರು.

‘17 ಜನ ಶಾಸಕರನ್ನು ಬಿಜೆಪಿ ಬೀದಿಯಲ್ಲಿ ನಿಲ್ಲಿಸುತ್ತದೆ ಎಂಬ ಮಾಜಿ ಸಚಿವ ಶಿವರಾಜ್‌ ತಂಗಡಗಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ನಾನೀಗ ನಿಮ್ಮೆದುರು ಬೀದಿಯಲ್ಲೇ ನಿಂತುಕೊಂಡಿದ್ದೇನೆ. ಅದರ ಅರ್ಥ ಬೀದಿಗೆ ನಿಲ್ಲುವುದು ಅಂತಾನಾ?. ಅಲ್ಲ. ಆದರೆ ಈಗ ಮಂತ್ರಿಯಾಗಿ ನಿಂತುಕೊಂಡಿದ್ದೇನೆ. ಅಲ್ಲಿನ ಎಲ್ಲರೂ ತಮ್ಮ ಸ್ವಾರ್ಥಕ್ಕೆ ಕೆಲಸ ಮಾಡಿ ಕೆಟ್ಟಿದ್ದಾರೆ‘ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದ 17 ಜನ ಶಾಸಕರು ಈಗಲೂ ಅತಂತ್ರರಾಗಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಸರ್ಕಾರಕ್ಕೆ ಅಂದಿನ ಸಚಿವರಾಗಿದ್ದ ಆರ್‌.ಶಂಕರ್‌, ಎಂ.ಟಿ.ಬಿ ನಾಗರಾಜ್‌,ವಿಶ್ವನಾಥ ಅವರ ಕೊಡುಗೆ ಇದೆ. ಅವರೆಲ್ಲ ತಮ್ಮ ಸ್ಥಾನಗಳನ್ನು ತ್ಯಜಿಸಿ ನಮ್ಮೊಂದಿಗೆ ಬಂದಿದಕ್ಕೆ ಇಂದು ಬಿಜೆಪಿ ಸರ್ಕಾರ ನಿರ್ಮಾಣವಾಗಿದೆ. ಯಡಿಯೂರಪ್ಪನವರು ಅವರೆಲ್ಲರಿಗೂ ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತು ತಪ್ಪೊಲ್ಲ. ಶರತ್‌ ಬಚ್ಚೇಗೌಡರಿಂದ ಎಂ.ಟಿ.ಬಿ. ನಾಗರಾಜ್‌ ಅವರಿಗೆ ತೊಂದರೆ ಆಗುತ್ತಿರುವುದು ಸತ್ಯ. ಚುನಾವಣೆಗೆ ನಿಲ್ಲಬೇಡಿ ಅಂದಾಗ ಶರತ್‌ ಚುನಾವಣೆಗೆ ನಿಂತಿದ್ದರು. ಇದು ಪಕ್ಷದ ಆದೇಶದ ಉಲ್ಲಂಘನೆ ಮಾತ್ರವಲ್ಲ ಇದರಿಂದ ನಾಗರಾಜ ಅವರಿಗೆ ಅನ್ಯಾಯವಾಗಿರುವುದು ಸತ್ಯ ಎಂದರು.

ಕೇರಳದಲ್ಲಿ ಗರ್ಭಿಣಿ ಆನೆಯನ್ನು ಕೊಂದಿರುವುದು ಹೇಯ ಕೃತ್ಯ. ಅಂಥವರಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೇನೇ. ಜಿಲ್ಲೆಯ ರೈತರು ತಮ್ಮ ಹೊಲಗಳಿಗೆ ವಿದ್ಯುತ್‌ ಬೇಲಿ ಹಾಕಲು ಅವಕಾಶವಿಲ್ಲ. ಹಾಕಬೇಕಾದವರು ಎಚ್ಚರ ವಹಿಸುವುದು ಅತ್ಯಗತ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT