ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಗಳಿಗೆ ಜೀವ ತುಂಬುವ ‘ಬಾಬಣ್ಣ’

Last Updated 11 ಏಪ್ರಿಲ್ 2021, 7:13 IST
ಅಕ್ಷರ ಗಾತ್ರ

ಕುಕನೂರು: ತಲೆಮಾರುಗಳಿಂದ ಕಲೆಯನ್ನು ಪೋಷಿಸುತ್ತ ಬಂದಿರುವ ಕುಟುಂಬದಲ್ಲಿ ಜನಿಸಿ, ಜೀವನದುದ್ದಕ್ಕೂ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಇಲ್ಲಿನ ಕಲಾವಿದ ಬಾಬಣ್ಣ.

ಪ್ರಸಿದ್ಧ ಕಲಾವಿದೆ ಕುಕನೂರಿನ ರೆಹಿಮಾನವ್ವ ಅವರ ಪುತ್ರರಾಗಿರುವ ಬಾಬಣ್ಣ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ.

ದೊಡ್ಡವಾಡ, ಅರಿಶಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

ಸ್ವಲ್ಪದಿನ ತಾಯಿಯವರ ಲಲಿತ ನಾಟ್ಯ ಸಂಘವನ್ನು ಮುನ್ನಡೆಸಿದ ಅವರು ನಂತರ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ, ಹತ್ತು ವರ್ಷ ನಡೆಸಿದರು. ಕಂಪನಿ ನಿಂತ ಬಳಿಕ, ಪುನಃ ಬೇರೆ ಬೇರೆ ಕಂಪನಿಗಳ ನಾಟಕಗಳಲ್ಲಿ ನಟನೆ ಮುಂದುವರಿಸಿದರು.

‘ಹೇಮರಡ್ಡಿ ಮಲ್ಲಮ್ಮ’ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ ಮತ್ತು ವೇಮನ ಪಾತ್ರಗಳಿಗೆ ಜೀವ ತುಂಬಿದರು.

15 ವರ್ಷಗಳ ಬಳಿಕ ವೃತ್ತಿರಂಗಭೂಮಿಯ ಮತ್ತೊಬ್ಬ ನಟ ಎಂ.ಎಸ್.ಕೊಟ್ರೇಶ ಅವರೊಂದಿಗೆ ತಂಡ ಕಟ್ಟಿಕೊಂಡು, ವಿವಿಧ ಊರುಗಳಲ್ಲಿ ನಾಟಕ ಪ್ರದರ್ಶಿಸಿದರು.

87ರ ಇಳಿವಯಸ್ಸಿನಲ್ಲೂ ಬಾಬಣ್ಣ ಅವರು ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಲೂ ಮಕ್ಕಳು ಮತ್ತು ಯುವಜನರಿಗಾಗಿ ನಾಟಕಗಳನ್ನು ನಿರ್ದೇಶಿಸುತ್ತಾರೆ. ಪ್ರತಿ ತಿಂಗಳು 3 ಅಥವಾ 4 ನಾಟಕಗಳಲ್ಲಿ ಅಭಿನಯಿಸುತ್ತಾರೆ.

ಬಾಬಣ್ಣನವರಿಗೆ ಈಚೆಗೆ ಬೆಂಗಳೂರಿನಲ್ಲಿ ‘ವರದರಾಜ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಪತ್ನಿ ಮತ್ತು ಮಕ್ಕಳ ಜತೆ ಕುಕನೂರಿನಲ್ಲಿ ನೆಲೆಸಿದ್ದಾರೆ.

‘ಬಾಬಣ್ಣ ಅವರು ರಂಗಭೂಮಿಗೆ ನೀಡಿರುವ ಕೊಡುಗೆ ಮತ್ತು ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕು. ಅವರ ಕಲಾ ಸೇವೆಯನ್ನು ಪ್ರೋತ್ಸಾಹಿಸಬೇಕು’ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT