ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಯ ಸಂಪನ್ಮೂಲ ಬಳಸಿ ಉದ್ಯಮಿಯಾಗಿ: ಸಚಿವ ನಿರಾಣಿ

ಹೊಸ ಕೈಗಾರಿಕಾ ನೀತಿ: ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಚಿವ ನಿರಾಣಿ ಹೇಳಿಕೆ
Last Updated 4 ಡಿಸೆಂಬರ್ 2022, 6:01 IST
ಅಕ್ಷರ ಗಾತ್ರ

ಕೊಪ್ಪಳ: ‘ಉತ್ತರ ಕರ್ನಾಟಕದಲ್ಲಿ ಹೇರಳವಾಗಿರುವ ಪ್ರಾಕೃತಿಕ ಸಂಪನ್ಮೂಲ ಬಳಸಿಕೊಂಡು ನಮ್ಮ ರಾಜ್ಯದವರೇ ಉದ್ಯಮಿಗಳಾಗಬೇಕು. ಆಗ ಮಾತ್ರ ಕೈಗಾರಿಕೆಗಳು ವ್ಯಾಪಕವಾಗಿ ಬೆಳೆದು ಸ್ಥಳೀಯರಿಗೆ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೊಪ್ಪಳ, ವಿಜಯನಗರ ಹಾಗೂ ಗದಗ ಜಿಲ್ಲಾ ಕೈಗಾರಿಕಾ ಕೇಂದ್ರ, ಟೆಕ್ಸಾಸ್‌ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದಹೊಸ ಕೈಗಾರಿಕಾ ನೀತಿ 2020-25 ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ’ಶಿಕ್ಷಣ ಮತ್ತು ಕೈಗಾರಿಕೆಗಳ ಬೆಳವಣಿಗೆ ಆಧಾರದ ಮೇಲೆ ದೇಶದ ಅಭಿವೃದ್ಧಿ ನಿರ್ಧಾರವಾಗುತ್ತದೆ. ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೇರಳ ಅವಕಾಶಗಳು ಇವೆ’ ಎಂದರು.

‘ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹9.81 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. ಕೊಪ್ಪಳ ಜಿಲ್ಲೆಗೆ ಶೇ. 65ರಷ್ಟು, ಗದಗ ಜಿಲ್ಲೆಗೆ ಶೇ 38ರಷ್ಟು ಮತ್ತು ವಿಜಯನಗರ ಜಿಲ್ಲೆಗೆ ಶೇ 5ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಸಿಕ್ಕಿದೆ. ನಮ್ಮ ಸಂಪನ್ಮೂಲವನ್ನು ಬಳಸಿಕೊಂಡು ಹೊರರಾಜ್ಯದ ಉದ್ಯಮಿಗಳು ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಮುಂದೆ ಬಂದು ನಮ್ಮವರೇ ಹೂಡಿಕೆ ಮಾಡಿದರೆ ಖುಷಿಯಾಗುತ್ತದೆ’ ಎಂದರು.

‘ಕೈಗಾರಿಕೆಗಳನ್ನು ಆರಂಭಿಸಲು ಶೇ. 50ರಷ್ಟು ಸಬ್ಸಿಡಿ ಸಿಗುತ್ತದೆ. ಬ್ಯಾಂಕ್‌ಗಳು ಸಾಲ ನೀಡುತ್ತವೆ. ಗದಗ, ಕೊಪ್ಪಳ ಭಾಗದಲ್ಲಿ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಿದ್ದು ಇಲ್ಲಿಯೇ ಟೆಕ್ಸ್‌ಟೈಲ್ಸ್‌ ಉದ್ಯಮ ಆರಂಭಿಸಲು ಉತ್ತಮ ವಾತಾವರಣವಿದೆ. ಬ್ಯಾಂಕ್‌ಗಳಿಂದ ಸಾಲ ಪಡೆಯುವುದಷ್ಟೇ ಮುಖ್ಯವಲ್ಲ; ಮರುಪಾವತಿ, ಅಧಿಕಾರಿಗಳ ಜೊತೆ ಸಭ್ಯ ವರ್ತನೆ ಮುಖ್ಯವಾಗುತ್ತದೆ. ಕೈಗಾರಿಕೆಗಳನ್ನು ಸ್ಥಾಪಿಸಿ ಯಶಸ್ಸು ಕಂಡ ಉದ್ಯಮಿಗಳ ಸಾಹಸ ಕಥನವನ್ನು ಓದಬೇಕು’ ಎಂದು ಸಲಹೆ ನೀಡಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕಿ ಸತ್ಯಭಾಮಾ ಸಿ., ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಅಮರೇಗೌಡ ಪಾಟೀಲ ಬಯ್ಯಾಪೂರ, ಕೊಪ್ಪಳ ಕೆ.ಎಫ್.ಐ.ಎಲ್ ಆಡಳಿತ ನಿರ್ದೇಶಕ ಆರ್‌.ವಿ ಗುಮಾಸ್ತೆ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಎಚ್.ಎಂ ಶ್ರೀನಿವಾಸ್, ವಿಜಯನಗರ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಅಶ್ವಿನ್ ಕೋತಂಬರಿ, ಗದಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಧುಸೂದನ್ ಪುಣೇಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT