ಪಿಎಂ ಆವಾಸ್ ಯೋಜನೆಗೆ ಭೂಮಿಪೂಜೆ; ಶಾಸಕ ಬಯ್ಯಾಪುರ ಹೇಳಿಕೆ

ಕುಷ್ಟಗಿ: ಪಟ್ಟಣದ ವಸತಿ ರಹಿತ ಬಡ ಕುಟುಂಬಗಳಿಗೆ ₹ 45.57 ಕೋಟಿ ವೆಚ್ಚದಲ್ಲಿ 715 ಮನೆಗಳು ನಿರ್ಮಾಣಗೊಳ್ಳಲಿವೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಶುಕ್ರವಾರ ಇಲ್ಲಿ ಹೇಳಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದ ಕಂದಕೂರು ರಸ್ತೆಯ ಮಾರುತಿ ನಗರದಲ್ಲಿ ರಾಜ್ಯ ವಸತಿ ಇಲಾಖೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿನ ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ನಿಯಮಗಳ ಪ್ರಕಾರ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಲಾಗುತ್ತದೆ ಎಂದರು.
291 ಚದರ ಅಡಿಯಲ್ಲಿ ಮನೆಗಳು ನಿರ್ಮಾಣಗೊಳ್ಳಲಿದ್ದು ಪರಿಶಿಷ್ಟ ಜಾತಿಯವರಿಗೆ ₹ 65 ಸಾವಿರ ಮತ್ತು ಸಾಮಾನ್ಯ ವರ್ಗದವರಿಗೆ
₹ 97,500 ವಂತಿಗೆ ನೀಡಬೇಕಾಗುತ್ತದೆ. ಮನೆಗಳಿಗೆ ಸಹಾಯಧನ ಮತ್ತು ಬ್ಯಾಂಕ್ ಸಾಲ ಸೌಲಭ್ಯ ದೊರೆಯಲಿದೆ. ಬಳ್ಳಾರಿಯ ಶ್ರೀನಿವಾಸ ಪ್ರಾಪರ್ಟಿಸ್ ಎಂಬುವರಿಗೆ ಟೆಂಡರ್ ನೀಡಲಾಗಿದ್ದು ಸುಭಾಸ್ ಎಂಬುವವರಿಗೆ ಉಪ ಗುತ್ತಿಗೆ ನೀಡಲಾಗಿದೆ. ಒಪ್ಪಂದದ ಪ್ರಕಾರ 18 ತಿಂಗಳ ಕಾಲಮಿತಿಯೊಳಗೆ ಮನೆಗಳು ಪೂರ್ಣಪ್ರಮಾಣದಲ್ಲಿ ನಿರ್ಮಾಣಗೊಳ್ಳಬೇಕಿದೆ ಎಂದರು.
ಅಲ್ಲದೆ ಮಾರುತಿ ನಗರದಲ್ಲಿ 200 ಮನೆಗಳ ನಿರ್ಮಾಣಕ್ಕೆ ಮಾತ್ರ ಜಾಗವಿದ್ದು, ಉಳಿದ ಮನೆಗಳ ನಿರ್ಮಾಣಕ್ಕೆ ಸರ್ಕಾರದ ಜಾಗ ಲಭ್ಯವಿಲ್ಲ. ಕೆಲ ಜಮೀನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಸರ್ಕಾರದ ಮಧ್ಯೆದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಗಜೇಂದ್ರಗಡ ರಸ್ತೆ ಬಳಿ 200 ಮನೆಗಳಿಗೆ ಜಾಗ ಲಭ್ಯವಾಗಬಹುದಾಗಿದೆ. ಜಾಗದ ಕೊರತೆಯಾದರೆ ಉಳಿದ ಮನೆಗಳನ್ನು ನಿಡಶೇಸಿ ಬಳಿ ಖರೀದಿಸಿರುವ ಜಮೀನಿನಲ್ಲಿ ನಿರ್ಮಿಸಲು ಯೋಚಿಸಲಾಗುತ್ತಿದೆ. ಮಂಡಳಿ ಸೂಚಿಸಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರದು ಸ್ವಂತ ಜಾಗ ಇದ್ದವರಿಗೆ ಅಲ್ಲಿಯೇ ಮನೆ ನಿರ್ಮಿಸುವುದಕ್ಕೆ ಅವಕಾಶವಿದೆ ಎಂದು ಹೇಳಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕ ನಾಗರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ, ಸದಸ್ಯರಾದ ಗೀತಾ ಕೋಳೂರ, ಮೈನುದ್ದೀನ್ ಮುಲ್ಲಾ, ವಸಂತ ಮೇಲಿನಮನಿ, ರಾಮಣ್ಣ ಬಿನ್ನಾಳ, ಜಿ.ಜೆ. ಆಚಾರ, ಅಂಬಣ್ಣ ಭಜಂತ್ರಿ, ಮಾಜಿ ಸದಸ್ಯರಾದ ಉಮೇಶ ಮಂಗಳೂರು, ಮಹೇಶ ಕೋಳೂರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.