ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಬೇಗೆಗೆ ಬಸವಳಿದ ಅಭ್ಯರ್ಥಿ, ಬೆಂಬಲಿಗರು

ಒಲ್ಲದ ಮನಸ್ಸಿನಿಂದಲೇ ಪ್ರಚಾರಕ್ಕೆ: ಇಳಿ ಹೊತ್ತು ಸಮಾವೇಶ
Last Updated 30 ಏಪ್ರಿಲ್ 2019, 17:22 IST
ಅಕ್ಷರ ಗಾತ್ರ

ಕೊಪ್ಪಳ: ರಣ, ರಣ ಬಿಸಿಲಿಗೆ ಭೂಮಿ ಕಾದು ಕೆಂಡವಾಗುತ್ತಿದೆ. 40 ಡಿಗ್ರಿ ಬಿಸಿಲಿಗೆ ಅಭ್ಯರ್ಥಿಗಳು, ಅವರ ಬೆಂಬಲಿಗರು, ಕಾರ್ಯಕರ್ತರು ಬಳಲಿ ಬೆಂಡಾಗಿದ್ದು, ಪ್ರಚಾರಕ್ಕೆ ಬಿಸಿಲಿನ ಪ್ರಖರತೆ ಮತ್ತಷ್ಟು ಹೊಡೆತ ನೀಡುತ್ತಿದೆ.

ಬೆಳಿಗ್ಗೆ ಮನೆ ಬಿಟ್ಟರೆ, ರಾತ್ರಿ ಮನೆ ಸೇರುವ ಅಭ್ಯರ್ಥಿಗಳು ಬಿಸಿಲಿನ ಭಯದಿಂದ ಬೆಳಿಗ್ಗೆ ಮತ್ತು ಇಳಿಹೊತ್ತು ಸಮಾವೇಶ, ರೋಡ್‌ ಶೋ ನಡೆಸುತ್ತಾರೆ. ಕಷ್ಟಪಟ್ಟು ಬೆವರು ಸುರಿಸಿದರೆ ಮುಂದಿನ ಐದು ವರ್ಷ ಅಧಿಕಾರ ಅನುಭವಿಸುವ ಉಮೇದಿನಲ್ಲಿ ಬಿಸಿಲು, ಧಗೆ ಲೆಕ್ಕಿಸಿದೆ ಉಸ್ಸಪ್ಪಾ ಎಂದು ಪ್ರಚಾರದ ಗಾಡಿ ಏರಿ ಹೊರಡಲೇ ಬೇಕಾದ ಅನಿವಾರ್ಯತೆ ಇದೆ.

ಮಧ್ಯಾಹ್ನದಲ್ಲಿ ಸಮಾವೇಶ ನಡೆದರೆ, ನೆರಳಿನ ಆಶ್ರಯ ಬಯಸಿ ಚದುರಿದಂತೆ ಜನರು ಗಿಡ, ಮರ, ಕಟ್ಟಡಗಳ ಅಡಿಗೆ ಹೋಗಿ ನಿಂತುಕೊಳ್ಳುತ್ತಾರೆ. ನೀರಿನ ಪ್ಯಾಕೆಟ್, ಮಜ್ಜಿಗೆ, ಕಲ್ಲಂಗಡಿ ಹಣ್ಣು, ಲಿಂಬೆ ಪಾನಕದ ಮೊರೆ ಹೋಗುತ್ತಾರೆ. ಪ್ರಚಾರ, ಸಮಾವೇಶ ನಡೆದರೆ ವ್ಯಾಪಾರಿಗಳಿಗೆ ಭರ್ಜರಿ ಸುಗ್ಗಿಯೇ ಸುಗ್ಗಿ.

ಪ್ರಮುಖ ಅಭ್ಯರ್ಥಿಗಳ ದಿನಚರಿ: ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 70 ವಯಸ್ಸಿನಲ್ಲಿಯೂ ಉತ್ಸಾಹದಿಂದ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೆಳಿಗ್ಗೆ ಸ್ನಾನ, ಪೂಜೆ, ಉಪಹಾರ ಸೇವಿಸಿ 8 ಗಂಟೆಯಷ್ಟು ಹೊತ್ತಿಗೆ ಊರು, ಊರು ಸುತ್ತುತ್ತಾ ಪ್ರಚಾರ ಮಾಡುತ್ತಿದ್ದಾರೆ. ದಣಿವರಿಯದೇ ತಮ್ಮ ಶಿಸ್ತಿನ ಜೀವನದಿಂದ ವಿರೋಧಿಗಳು ಕೂಡಾ ನಾಚುವಷ್ಟು ಕ್ರಿಯಾಶೀಲವಾಗಿ ಓಡಾಡುತ್ತಾರೆ.

ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಅವರೇ ಹೇಳುವಂತೆ, 'ದೇವೇಗೌಡ ಜನರ ಜೊತೆ ಗುದ್ದಾಡುತ್ತಾರೆ. ನಾನು, ನನ್ನ ಮಕ್ಕಳು ಕರಡಿ ಜೊತೆ ಗುದ್ದಾಡಬೇಕಾಗಿದೆ' ಎಂದು ಹೇಳುವಾಗ ಕರಡಿ ಅವರ ಪ್ರಚಾರ ವೈಖರಿ ಹೇಗೆ ಇದೆ ಎಂಬುವುದನ್ನು ಊಹಿಸಬಹುದು.

ಕಾಂಗ್ರೆಸ್‌ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಅವರು ಬೆಳಿಗ್ಗೆ ಕಾರ್ಯಕರ್ತರನ್ನು ಭೇಟಿ ಮಾಡಿ ಪ್ರಚಾರಕ್ಕೆ ವಿವಿಧ ಹಳ್ಳಿಗಳಿಗೆ ತೆರಳುತ್ತಾರೆ. ಯುವಪಡೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಿರುಬಿಸಿಲಿನಲ್ಲಿಯೂ ರೋಡ್‌ ಶೋ, ಮನೆ, ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಸಹೋದರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಸಾಥ್‌ ನೀಡುತ್ತಿದ್ದಾರೆ.

ಕಾರ್ಯಕರ್ತರನ್ನು ಜೊತೆಗೆ ಕರೆದುಕೊಂಡು ಹೋಗಲು ಪಕ್ಷದ ಮುಖಂಡರು ಹರಸಾಹಸ ಮಾಡಬೇಕಾಗಿದೆ. ದೂರವಾಣಿ ಮೂಲಕ ಖಚಿತಪಡಿಸಿಕೊಂಡು ಬಿಸಿಲಿಗೆ ಸವಾಲ್‌ ಎಂಬಂತೆ ಎಲ್ಲೆಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಾರೆ. ಸಂಜೆಯಾಗುತ್ತಲೆ ಬಾರ್ ಮತ್ತು ರೆಸ್ಟೋರೆಂಟ್‌ಗಳು ತುಂಬಿ ತುಳುಕುತ್ತಿವೆ. ಮಾಲೀಕರಿಗೆ ಚುನಾವಣೆ ನೀತಿ ಸಂಹಿತೆ ಭಯ. ಗಿರಾಕಿಗಳಿಗೆ ರಾಜಕೀಯದ ಅಮುಲು.

ಬಿಸಲಿನ ಹೊಡೆತಕ್ಕೆ ಪ್ರಮುಖ ಪಕ್ಷಗಳ ಮುಖಂಡರ ಕಣ್ಣು ಮಂಜಾಗಿ ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವುದೇ ಒಂದು ರೀತಿಯ ಸವಾಲಾಗಿದೆ. ಪ್ರತಿಸ್ಪರ್ಧಿಗಿಂತ ಈ ಬಿಸಿಲಿನ ಪ್ರಖರತೆಯೇ ಹೆಚ್ಚಾಗಿದೆ. ಪ್ರಜಾತಂತ್ರ ಹಬ್ಬದಲ್ಲಿ ಬಿಸಿಲಿನ ಪಾತ್ರ ದೊಡ್ಡದು. ಆದರೂ ಕಾರ್ಯಕರ್ತರ ಉತ್ಸಾಹ ಕಡಿಮೆ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT