ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಸಭೆಗೆ ಶಾಸಕರ ಗೈರು

ಉಸ್ತುವಾರಿ ಸಚಿವರ ಬದಲಾವಣೆಗೆ ತೆರೆಮರೆ ಕಸರತ್ತು
Last Updated 15 ಜುಲೈ 2021, 6:13 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಸಭೆಗೆ ಜಿಲ್ಲೆಯ ಬಿಜೆಪಿ ಶಾಸಕರು ಮೇಲಿಂದ ಮೇಲೆ ಗೈರು ಆಗುವ ಮೂಲಕ ಚರ್ಚೆಗೆ ಗ್ರಾಸ ಒದಗಿಸಿದ್ದು, ಜಿಲ್ಲೆಯ ಉಸ್ತುವಾರಿಯನ್ನು ಬದಲಿಸಬೇಕು ಎಂದು ಹೈಕಮಾಂಡ್‌ ಎದುರು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಕೋವಿಡ್‌ ಸಂದರ್ಭದಲ್ಲಿಯೇ ಈ ಕುರಿತು ಒಳಜಗಳ ಬೀದಿಗೆ ಬಂದಿದ್ದು,ಸಚಿವರು ಜಿಲ್ಲೆಗೆ ಬಂದರೆ ಅವರನ್ನು ಸ್ವಾಗತಿಸಲು ಕಾರ್ಯಕರ್ತರ ಪಡೆ ಕೂಡಾ ಉತ್ಸುಕತೆಯನ್ನು ತೋರಿಸುತ್ತಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎದ್ದಿರುವಂತೆ ಇಲ್ಲಿಯೂಉಸ್ತುವಾರಿ ಸಚಿವರ ಬದಲಾವಣೆಗೆ ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಅಲ್ಲದೆ ಜಿಲ್ಲೆಯ ಉಸ್ತುವಾರಿ ಬಗ್ಗೆಯೂ ಸಚಿವರಿಗೂ ಅಷ್ಟೊಂದು ಆಸಕ್ತಿ ಇಲ್ಲ ಎಂಬುವುದು ಅನೇಕ ಸಂದರ್ಭದಲ್ಲಿಕಂಡು ಬಂದಿದೆ.

ಹೀಗಾಗಿ ಅಭಿವೃದ್ಧಿ ಕಾರ್ಯಕ್ಕೆ ವೇಗ ದೊರೆಯುತ್ತಿಲ್ಲ. ಕಾಂಗ್ರೆಸ್‌ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಸಂಪ್ರದಾಯದಂತೆ ಮುನಿರಾಬಾದಿನ ತುಂಗಭದ್ರಾ ಜಲಾಶಯದ ವೈಕುಂಠ ವಸತಿಗೃಹದಲ್ಲಿ ವಾಸ್ತವ್ಯ ಮಾಡುತ್ತಿದ್ದ ಈ ಹಿಂದಿನ ಸಚಿವರಿಗಿಂತ ಸಚಿವ ಪಾಟೀಲ ಭಿನ್ನ ಹಾದಿ ತುಳಿದಿದ್ದಾರೆ. ಕಲ್ಯಾಣಿ, ಕಿರ್ಲೋಸ್ಕರ್‌ ಕಂಪನಿಗಳ ಅತಿಥಿ ಗೃಹಗಳಲ್ಲಿ ತಂಗುವ ಮೂಲಕ ತಮ್ಮ ಆಪ್ತರೊಂದಿಗೆ ಕಾಲಕಳೆಯುತ್ತಿರುವುದು ಬಿಜೆಪಿ ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ.

ಕೋವಿಡ್‌ ನಂತರ ಮಹತ್ವದ ಸಭೆ ಬುಧವಾರ ನಡೆದರೂ ಕನಕಗಿರಿ ಶಾಸಕ ಬಸವರಾಜ ದಡೇಸಗೂರ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಇತ್ತ ಸುಳಿದಿಲ್ಲ. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಕೂಡಾ ಸಭೆಗೆ ಬಂದಿರಲಿಲ್ಲ. ಪರಣ್ಣ ಮುನವಳ್ಳಿ ಸಭೆ ಆರಂಭದ ನಂತರ ಬಂದರೂ ನಿರ್ಲಿಪ್ತರಾಗಿ ಇದ್ದದೂ ಚರ್ಚೆಗೆ ಮತ್ತಷ್ಟು ಎಡೆ ಮಾಡಿತು.

‘ಸಚಿವರ ಬಳಿ ನಮ್ಮ ಮಾತು ನಡೆಯಲ್ಲ, ತಮಗೆ ಬೇಕಾದವರ ಮಾತಿಗೆ ಕಿಮ್ಮತ್ತು ನೀಡುತ್ತಾರೆ’ ಎಂದು ಕೆಲವು ಶಾಸಕರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸಂಸದ ಸಂಗಣ್ಣ ಕರಡಿ ಅನುಭವ ಮತ್ತು ಹಿರಿತನ ಇದ್ದರೂ ಅವರದು ‘ಸ್ವೌಮ್ಯ ಸ್ವಭಾವ’ ಎಂದು ಮಾಜಿ ಪೊಲೀಸ್‌ ಅಧಿಕಾರಿ ಬಿ.ಸಿ.ಪಾಟೀಲ ನಿರ್ಲಕ್ಷ್ಯ ಮಾಡಿದ್ದಾರೆಯೇ ಎಂಬ ಅನುಮಾನ ಕೂಡಾ ಕಾರ್ಯಕರ್ತರನ್ನು ಕಾಡಿದೆ.

‘ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿರುವ ಅವರ ಮಾತಿಗೆ ಕಿಮ್ಮತ್ತು ನೀಡದಿದ್ದರೆ ಅವರಿಗೆ ತರಾಟೆಗೆ ತೆಗೆದುಕೊಳ್ಳುವುದು ಗೊತ್ತು’ ಎಂದು ಹೆಸರು ಹೇಳಲು ಇಚ್ಚಿಸದ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT