ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಪರೀಕ್ಷೆಯಲ್ಲಿ ಮಹಿಳೆಯ ತಾಳಿ ತೆಗೆಯಿಸಿ ಅವಮಾನ: ಬಿಜೆಪಿ ಮುಖಂಡರು ಗರಂ

ಪತ್ರಿಕಾಗೋಷ್ಠಿಯಲ್ಲಿ ಪ್ರಜಾವಾಣಿ ವರದಿ ಓದಿದ ಎಂಎಲ್‌ಸಿ ಹೇಮಲತಾ ನಾಯಕ
Published 8 ನವೆಂಬರ್ 2023, 16:06 IST
Last Updated 8 ನವೆಂಬರ್ 2023, 16:06 IST
ಅಕ್ಷರ ಗಾತ್ರ

ಕೊಪ್ಪಳ: ಕಲಬುರಗಿಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ತೆರೆಯಲಾಗಿದ್ದ ಕೇಂದ್ರದಲ್ಲಿ ಇತ್ತೀಚೆಗೆ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗೆ ತಾಳಿ ತೆಗೆದ ನಂತರವೇ ಹಾಜರಾಗಲು ಅವಕಾಶ ನೀಡಿದ್ದ ಕ್ರಮಕ್ಕೆ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಹೀಗೆ ಮಾಡುವ ಮೂಲಕ ರಾಜ್ಯದ ಮಹಿಳೆಯರಿಗೆ ಅವಮಾನ ಮಾಡಿದೆ’ ಎಂದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಬುಧವಾರ ದೂರಿದರು.

ಈ ಘಟನೆ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಓದಿದ ಅವರು ‘ಹಿಂದೂಗಳ ಪದ್ಧತಿಯಲ್ಲಿ ತಾಳಿ ತೆಗೆಯುವುದು ಪತಿ ಮೃತಪಟ್ಟಾಗ ಹಾಗೂ ವೈದ್ಯಕೀಯ ಪರೀಕ್ಷೆ ಸಮಯದಲ್ಲಿ ಮಾತ್ರ. ಆದರೆ, ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರ ಮುತೈದೆ ಸಂಕೇತವಾದ ತಾಳಿ ತೆಗೆಯುವಂತೆ ಮಾಡಿದೆ’ ಎಂದು ಟೀಕಿಸಿದರು.

‘ಪರೀಕ್ಷಾ ಕೇಂದ್ರಗಳಲ್ಲಿ ಮುಸ್ಲಿಮರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡುವ ಸರ್ಕಾರ, ಹಿಂದೂ ಮಹಿಳೆಯರಿಗೆ ಕೊರಳಲ್ಲಿ ತಾಳಿ ಧರಿಸಲು ಬಿಡುತ್ತಿಲ್ಲ. ಈ ಮೂಲಕ ಕಾಂಗ್ರೆಸ್‌ ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ. ಮುಂದೆ ನಡೆಯುವ ಎಲ್ಲ ಪರೀಕ್ಷೆಗಳಲ್ಲಿ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ತಾಳಿ ತೆಗೆಯಿಸಿದ ವಿಷಯವನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ. ಅವರಿಗೆ ಆದ ಅವಮಾನದ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ಪರೀಕ್ಷೆಗೆ ಬಂದ ಮಹಿಳೆಯರ ತಾಳಿ, ಕಾಲುಂಗರ ತೆಗೆಸುವುದು ನೋಡಿದರೆ ಕಾಂಗ್ರೆಸ್‌ ಸರ್ಕಾರ ಹಿಂದುತ್ವ ಹಾಗೂ ಸಂಸ್ಕೃತಿಗೆ ಬೆಲೆ ಕೊಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ’ ಎಂದರು.   

ಬಿಜೆಪಿ ಕೊಪ್ಪಳ ನಗರ ಘಟಕದ ಅಧ್ಯಕ್ಷೆ ಗೀತಾ ಪಾಟೀಲ, ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶೋಭಾ ನಗರಿ ಇದ್ದರು.

ಮಾಂಗಲ್ಯ ತೆಗೆಯುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅವಮಾನ ಮಾಡಿದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮಹಿಳೆಯರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು. ಹೇಮಲತಾ ನಾಯಕ ಎಂಎಲ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT