ಕೊಪ್ಪಳ: ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕೆಲ ದಿನಗಳಿಂದ ಬಿಜೆಪಿ ಮುಖಂಡರು ಜನರಿಗೆ ಸೀರೆ ಹಂಚುತ್ತಿದ್ದ ಪ್ರಕರಣ ಬಯಲಾಗಿದೆ. ಅಧಿಕಾರಿಗಳು ಸೀರೆಗಳನ್ನು ಜಪ್ತಿ ಮಾಡಿದ್ದಾರೆ.
ಯಲಬುರ್ಗಾ ತಾಲ್ಲೂಕಿನ ಹಿರೇವಡ್ಡರಕಲ್ಲು ಗ್ರಾಮದಲ್ಲಿ ಬುಧವಾರ ರಾತ್ರಿ ಬಿಜೆಪಿ ಮುಖಂಡರು ಸೀರೆ ಹಂಚುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೇಸರಿ ಹಾಗೂ ಕೆಂಪು ಬಣ್ಣಗಳ ಬಟ್ಟೆಯ ಕವರ್ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ, ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಭಾವಚಿತ್ರ ಹಾಗೂ ಗೌರಾ ಎಂದು ಹೆಸರು ಬರೆಯಲಾಗಿದೆ. ಒಳಗಡೆ ಸೀರೆಗಳನ್ನು ಇರಿಸಲಾಗಿದ್ದು, ಮೇಲ್ಬಾಗದಲ್ಲಿ ‘ಜಲಯಜ್ಞ’ ಎಂದು ಬರೆಯಲಾಗಿದೆ. ಬಿಜೆಪಿ ಮುಖಂಡರು ಹಳ್ಳಿಹಳ್ಳಿಗೆ ಹೋಗಿ ಟಂಟಂ ವಾಹನದಲ್ಲಿ ಸೀರೆ ಹಂಚುತ್ತಿದ್ದ ವಿಡಿಯೊಗಳು ಕೂಡ ವೈರಲ್ ಆಗಿವೆ.
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ‘ಸೀರೆ ಹಂಚುತ್ತಿದ್ದಾರೆ ಎಂದು ಹೇಳಿದರೂ ಬಿಜೆಪಿಯವರಿಗೆ ಸ್ವಲ್ವವೂ ಭಯವಿಲ್ಲದೇ ರಾಜರೋಷವಾಗಿ ಸೀರೆ ಹಂಚುತ್ತಿದ್ದಾರೆ. ಇವರ ವಿರುದ್ಧ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ನಮ್ಮ ತಾಲ್ಲೂಕಿನ ಮಾನ, ಮರ್ಯಾದೆ ಹಾಳಾಗಿ ಹೋಗುತ್ತದೆ’ ಎಂದಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಾಲಪ್ಪ ಆಚಾರ್ ‘ಜನ್ಮದಿನದ ಪ್ರಯುಕ್ತ ನನ್ನ ಅಭಿಮಾನಿಗಳು ಸೀರೆ ಹಂಚಿಕೆ ಮಾಡಿರಬಹುದು. ಇದು ಚುನಾವಣೆ ವಿಷಯವೇ ಅಲ್ಲ. ಚುನಾವಣೆ ನನ್ನ ಜನ್ಮದಿನ, ಒಳ್ಳೆಯ ದಿನ ನೋಡಿ ಬರುವುದಿಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರೆ ಅದನ್ನು ತಪ್ಪು ಅನ್ನಬಹುದಿತ್ತು. ಸರಿಯಾದ ದಾಖಲೆಗಳಿದ್ದರೆ ಅದು ಹೇಗೆ ತಪ್ಪಾಗುತ್ತದೆ. ಸೀರೆಗಳನ್ನು ಜಪ್ತಿ ಮಾಡಿದ್ದರೆ ದಾಖಲೆ ತೋರಿಸಿ ವಾಪಸ್ ಪಡೆಯುತ್ತೇವೆ’ ಎಂದರು.
ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ’ಸೀರೆಗಳನ್ನು ಜಪ್ತಿ ಮಾಡಲಾಗಿದೆ. ಚುನಾವಣಾಧಿಕಾರಿಗಳು ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಬಳಿಕ ಎಫ್‌ಐಆರ್ ದಾಖಲಿಸಲಾಗುವುದು’ ಎಂದರು.
ಇಂದು ಪ್ರತಿಭಟನೆ
ಸೀರೆ ಹಂಚಿಕೆ ಘಟನೆಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.