ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾರ್ಮಿಕರ ಬದುಕು ‘ಲಾಕ್‌’

ನಿತ್ಯದ ಜೀವನ ನಿರ್ವಹಣೆಗೆ ಹಮಾಲಿ ಕಾರ್ಮಿಕರೂ ಪರದಾಟ; ಭವಿಷ್ಯ ಅತಂತ್ರ
Last Updated 17 ಮೇ 2021, 3:30 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರವು ಲಾಕ್‌ಡೌನ್‌ ಘೋಷಿಸಿದೆ. ಇದರ ಪರಿಣಾಮ ಕೂಲಿಕಾರ್ಮಿಕರು, ಹಮಾಲರು, ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಜಿಲ್ಲೆಯಲ್ಲಿ ಬಂಡಿ ಹಮಾಲರು, ಎಪಿಎಂಸಿ ಕೆಲಸ ಮಾಡುವ ಹಮಾಲರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 11 ಸಾವಿರ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದಾರೆ. ಕೃಷಿ ಮತ್ತು ಕೂಲಿಕಾರರ ನಿಖರ ಸಂಖ್ಯೆ ದೊರೆಯದಿದ್ದರೂ1 ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ವಲಸೆ ಕಾರ್ಮಿಕರು: ಸತತ ಬರ ಮತ್ತು ಉದ್ಯೋಗ, ಹೆಚ್ಚಿನ ಕೂಲಿಗಾಗಿ ಗೋವಾ, ಮಹಾರಾಷ್ಟ್ರ, ಮಂಗಳೂರು, ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿದ್ದ ಕಾರ್ಮಿಕರು ಲಾಕ್‌ಡೌನ್‌ ಕಾರಣ ಊರುಗಳಿಗೆ ಮರಳಿದ್ದರು.

ಉದ್ಯೋಗ ಖಾತ್ರಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸು ತ್ತಿದ್ದಾರೆ. 18 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಕೆಲಸ ಇಲ್ಲದೇ ಊರಿಗೆ ಮರಳಿದ್ದು, ನಿತ್ಯದ ಜೀವನ ನಿರ್ವಹಣೆ ಕೂಡಾ ಸಮಸ್ಯೆಯಾಗಿದೆ.

ಬಂಡಿ ಹಮಾಲರು: ಒಂಟಿ ಎತ್ತಿನ ಬಂಡಿಯನ್ನು ಹೊಂದಿದ ಹಮಾಲರ ಸಂಖ್ಯೆ ಜಿಲ್ಲೆಯಲ್ಲಿ 100ರ ಗಡಿ ದಾಟುವುದಿಲ್ಲ. ಕಿರಾಣಿ ಸಾಮಗ್ರಿ, ಕೃಷಿ ಉತ್ಪನ್ನಗಳು ಹೇರಿಕೊಂಡು ನಗರದ ವಿವಿಧ ಮಾರುಕಟ್ಟೆ, ಅಂಗಡಿಗಳಿಗೆ ತಲುಪಿಸುವುದು ಇವರ ನಿತ್ಯದ ಕಾಯಕವಾಗಿದೆ. ಆದರೆ, ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದು, ಕೆಲಸವಿಲ್ಲದೆ ಚಿಂತೆಯಿಂದ ಬದುಕಿಗೆ ಆಶ್ರಯವಾದ ಬಂಡಿಗಳಲ್ಲೇ ಕಾಲಕಳೆಯುವ ಪರಿಸ್ಥಿತಿ ಇದೆ.

ಕಟ್ಟಡ ಕಾರ್ಮಿಕರು: ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಲಾಕ್‌ಡೌನ್‌ ದುಷ್ಪರಿಣಾಮ ಬೀರಿದೆ. ಸರ್ಕಾರ ಕಾಮಗಾರಿಗೆ ಅನುಮತಿ ನೀಡಿದ್ದರೂ ಅಗತ್ಯ ವಸ್ತುಗಳು ಸಕಾಲದಲ್ಲಿ ಲಭ್ಯವಾಗದೇ ನಿರ್ಮಾಣ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ.

ನಿರ್ಮಾಣ ಕ್ಷೇತ್ರದ ಅಗತ್ಯ ವಸ್ತುಗಳ ಬೆಲೆಗಳು ಸಹ ಲಾಕ್‌ಡೌನ್‌ ನೆಪದಲ್ಲಿ ದುಬಾರಿಯಾಗಿವೆ. ಕಲ್ಲು ಗಣಿಗಾರಿಕೆ ಸಮರ್ಪಕವಾಗಿ ನಡೆಯದೇ ಇರುವುದರಿಂದ ಖಡಿ (ಜಲ್ಲಿ) ಮತ್ತು ಮರಳು ಅಭಾವ ಕಾಡುತ್ತಿದೆ. ಇದರಿಂದ ಬಹುತೇಕರು ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳ್ಳಿಗಳಿಂದ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ನಗರಕ್ಕೆ ಬರುವ ಕಾರ್ಮಿಕರಿಗೂ ತೊಂದರೆಯಾಗಿದೆ. ಬಸ್‌ಗಳಿಲ್ಲದೇ ಬಾಡಿಗೆ ವಾಹನ ಪಡೆದು ಬರುವುದರಿಂದ ವೆಚ್ಚ ಅಧಿಕವಾಗುತ್ತಿದೆ.

‘ಮೊಳೆ 1 ಕೆ.ಜಿ.ಗೆ ₹70 ರಿಂದ ₹85ಕ್ಕೆ ಏರಿಕೆಯಾಗಿದೆ. ಪ್ಲೈವುಡ್‌ ₹1,800 ರಿಂದ ₹1,950ಕ್ಕೆ, ಕಬ್ಬಿಣ ಪ್ರತಿ ಕೆ.ಜಿ.ಗೆ ₹12 ಏರಿಕೆಯಾಗಿದೆ. ಟಿಪ್ಪರ್‌ ಲೋಡ್‌ ಉಸುಕು (ಮರಳು) ₹22 ಸಾವಿರದಿಂದ ₹25 ಸಾವಿರದವರೆಗೆ ಹೆಚ್ಚಾಗಿದೆ. ಇಟ್ಟಿಗೆ ₹7 ರಿಂದ ₹9ಕ್ಕೆ ಏರಿದೆ' ಎಂದು ಬಹದ್ದೂರ ಬಂಡಿಯ ಮೇಸ್ತ್ರಿ ಕಾಶೀಂ ಹೇಳಿದರು.

ಲಾಕ್‌ಡೌನ್‌ ಹೆಸರಿನಲ್ಲಿ ವರ್ತಕರು ಲಾಭ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಹಳೆಯ ಸ್ಟಾಕ್‌ ಖಾಲಿ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ಬೇಕಾದ ವಸ್ತುಗಳನ್ನು ಬೆಳಿಗ್ಗೆ 10 ಗಂಟೆಯೊಳಗೆ ಪಡೆಯಬೇಕು. ಇದರಿಂದ ಕೆಲಸ ನಿಧಾನವಾಗುತ್ತಿದೆ ಎಂದು ತಿಳಿಸಿದರು.

‘ಸಕಾಲದಲ್ಲಿ ಕಟ್ಟಡ ನಿರ್ಮಾಣಕ್ಕೆ ವಸ್ತುಗಳು ಪೂರೈಕೆಯಾಗುತ್ತಿಲ್ಲ. ಇಂಧನ ಬೆಲೆ ಹೆಚ್ಚಿರುವುದರಿಂದ ಹಾಗೂ ಲಾಕ್‌ಡೌನ್‌ ಪರಿಣಾಮ ಸಾಗಾಣಿಕೆ ವೆಚ್ಚ ಹೆಚ್ಚಾಗಿದ್ದು, ಬೆಲೆ ಕೂಡ ಹೆಚ್ಚಾಗಿದೆ’ ಎಂದು ಹಾರ್ಡ್‌ವೇರ್‌ ಅಂಗಡಿ ಮಾಲೀಕ ರಮೇಶ ತಿಳಿಸಿದರು.

ಹಮಾಲರು: ಜಿಲ್ಲೆಯ ಎಪಿಎಂಸಿಗಳಲ್ಲಿ 2 ಸಾವಿರಕ್ಕೂ ಹೆಚ್ಚಿನ ಹಮಾಲರು ಇದ್ದಾರೆ. ವಿವಿಧ ಅಂಗಡಿಗಳಲ್ಲಿ ಕಾಳು, ಕಡಿ ಒಣಗಿಸುವುದು, ಹಸನು ಮಾಡುವುದು, ಲಾರಿಗೆ ತುಂಬಿಸುವುದು, ಇಳಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಾರೆ. ಆದರೆ ಸಾಮಗ್ರಿಗಳನ್ನು ತುಂಬಿಕೊಂಡು ಲಾರಿ ಕೂಡಾ ಬರುವುದಿಲ್ಲ. ಬಂದ ಒಂದೇ ಲಾರಿಗೆ ಮುಗಿಬಿದ್ದು, ನಾ ಮುಂದು, ತಾ ಮುಂದೆ ಎಂದು ಅನ್ಲೋಡ್‌ ಮಾಡುವ ದುಸ್ಥಿತಿ ಇದೆ.

ನಿತ್ಯ ಕೂಲಿಗೆ ಬರುವವರ ಕಷ್ಟ

ಕೂಲಿಗಾಗಿ ನಗರದ ಲೇವರ್‌ ಸರ್ಕಲ್ ಮತ್ತು ಗಡಿಯಾರ ಕಂಬದ ಬಳಿ ನೂರಾರು ಜನರು ಕೆಲಸಕ್ಕೆ ನಿಂತಿರುತ್ತಾರೆ. ಆದರೆ ಎಲ್ಲರಿಗೂ ಕೆಲಸ ದೊರೆಯುವ ಖಾತ್ರಿ ಇಲ್ಲ. ಅಂದೇ ದುಡಿದು, ಅಂದೇ ಸಂಬಳ ಪಡೆಯುವ ಇವರು ಬೆಳಿಗ್ಗೆ 6ರಿಂದ 10ರವರೆಗೆ ಕೆಲಸಕ್ಕೆ ಕರೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಾರೆ. ಸಮಯದ ಅಭಾವದಿಂದ 10ರ ನಂತರ ಬರುವ ಪೊಲೀಸರು ಇವರನ್ನು ಎಲ್ಲಿಯೂ ನಿಲ್ಲಗೊಡುವುದಿಲ್ಲ. ಜನ ಸಂಚಾರ ಕಡಿಮೆ ಇರುವ ರೈಲ್ವೆ ಹಳಿ, ಗುಡ್ಡಗಳತ್ತ ಹೋಗಿ ಮಲಗಿ ಹೊತ್ತಾದ ನಂತರ ತಮ್ಮ ಊರು ಸೇರುತ್ತಾರೆ. ಅಶಕ್ತ ಕಾರ್ಮಿಕರನ್ನು ಯಾರೂ ಕರೆಯುವುದೇ ಇಲ್ಲ. ತಂದ ಬುತ್ತಿಯನ್ನು ತಿಂದು, ಸಿಕ್ಕ ನೀರು ಕುಡಿದು ಮನೆಗೆ ಹೋದರೆ ಅಂದಿನ ಜೀವನದ ಯುದ್ಧ ಮುಗಿದಂತೆ ಲೆಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT