ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ‍ಕ್ಷಗಳಿಂದ ಸಿಎಎ ಕುರಿತು ಅಪಪ್ರಚಾರ

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೂತ್‌ಮಟ್ಟದ ಜಾಗೃತಿ ಸಭೆ
Last Updated 6 ಜನವರಿ 2020, 10:23 IST
ಅಕ್ಷರ ಗಾತ್ರ

ಕೊಪ್ಪಳ:ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಕಾಯ್ದೆ ಕುರಿತು ಅಪಪ್ರಚಾರ ಮಾಡುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ನಗರದ ರಾಘವೇಂದ್ರ ಮಠದಲ್ಲಿ ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೂತ್ ಮಟ್ಟದ ಜನಜಾಗೃತಿ ಸಭೆ, ಪತ್ರ ಚಳವಳಿ ಹಾಗೂ ಮನೆಮನೆ ಪ್ರಚಾರಕ್ಕೆ ರಾಘವೇಂದ್ರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.

ದೇಶದ ಹಿತದೃಷ್ಠಿ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರನ್ನು ರಕ್ಷಿಸಲು ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಿದ ನಂತರವೇ ಜಾರಿಗೊಳಿಸಲಾಗುತ್ತಿದೆ. ಜನತೆಯಲ್ಲಿ ಮೂಡಿರುವ ಆತಂಕ ದೂರ ಮಾಡಲು ಇಡೀ ದೇಶದಲ್ಲಿ ಬಿಜೆಪಿ ಈ ಪತ್ರ ಚಳುವಳಿ, ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚುವ ಕಾರ್ಯಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಾನೂ ಸೇರಿದಂತೆ ಕುಡುಚಿ ಶಾಸಕ ಪಿ. ರಾಜೀವ್, ಸಂಸದ ಕರಡಿ ಸಂಗಣ್ಣ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ಯ, ಪಕ್ಷದ ಜಿಲ್ಲಾಧ್ಯಕ್ಷರು ಮುಖಂಡರು, ಕಾರ್ಯಕರ್ತರು ಜನಜಾಗೃತಿ ಕಾರ್ಯ ಮಾಡುತ್ತಿದ್ದೇವೆ ಎಂದರು.

ಪಕ್ಕದ ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಅಲ್ಲಿನ ಅಲ್ಪಸಂಖ್ಯಾತ ಹಿಂದೂ, ಸಿಖ್, ಬೌದ್ಧ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದವರ ರಕ್ಷಣೆ ಅಗತ್ಯವಾಗಿದೆ. ಆದರೆ ಅಲ್ಲಿನ ಬಹುಸಂಖ್ಯಾತರಿಂದ ಅತಿಯಾದ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಆ ಮೂರೂ ದೇಶಗಳಲ್ಲಿನ ಮುಸ್ಲಿಂ ಸಮುದಾಯದವರನ್ನು ನಮ್ಮ ದೇಶಕ್ಕೆ ಕರೆತರದಿರಲು ಸಂಸತ್ತು ಒಪ್ಪಿದೆ. ಸಂಸತ್‌ನಲ್ಲಿ ಸುದೀರ್ಘ ಚರ್ಚೆ ಬಳಿಕವಷ್ಟೆ ಈ ಕಾಯ್ದೆ ಜಾರಿಗೊಂಡಿದೆ.

ಬದಲಾಗಿ ಕೇಂದ್ರ ಸರ್ಕಾರ ಒತ್ತಾಯ ಪೂರ್ವಕವಾಗಿ ಜಾರಿಗೊಳಿಸುತ್ತಿಲ್ಲ. ಆದರೆ ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಇಲ್ಲಿ ಮೊದಲಿನಿಂದಲೂ ವಾಸಿಸುತ್ತಿರುವ ನಾಗರಿಕರಲ್ಲಿ ಗೊಂದಲ ಸೃಷ್ಟಿ ಮಾಡಿ, ಕೋಮು ಸೌಹಾರ್ದತೆ ಹೆಚ್ಚಿಸುತ್ತಿವೆ. ಪ್ರತಿಭಟನೆ ಹೆಸರಿನಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕೋಮುಗಲಭೆ ಮಾಡುತ್ತಿದೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಇದರಿಂದ ದೇಶವಾಸಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ತೋರ್ಪಡಿಸಲು ಬಿಜೆಪಿ ಜಾಗೃತಿ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ, ಶಾಸಕರಾದ ಪಿ.ರಾಜೀವ್, ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮುಖಂಡ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ್, ಕುಡಾ ಅಧ್ಯಕ್ಷ ಮಹಾಂತೇಶ ಪಾಟೀಲ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಪಾಟೀಲ್, ಸುನೀಲ್ ಹೇಸರೂರು, ಪ್ರದೀಪ್ ಹಿಟ್ನಾಳ್, ಮಧುರಾ ಕರ್ಣಂ, ಹೇಮಲತಾ ನಾಯಕ, ವೀಣಾ ಬನ್ನಿಗೊಳ, ವಾಣಿಶ್ರೀ ಮಠದ, ಶೋಭಾ ನಗರಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮೋದಿಗೆ ಪತ್ರ ಬರೆದ ಯಲ್ಲಮ್ಮ

ಸಿಎಎ ಕಾಯ್ದೆ ಬೆಂಬಲಿಸಿ ತಾಲೂಕಿನ ಕಲಕೇರಿ ಗ್ರಾಮದ ಸುಡಗಾಡು ಸಿದ್ಧರ ಸಮುದಾಯದ ಯಲ್ಲಮ್ಮ ಕಲಕೇರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಮಾತನಾಡಿದ ಯಲ್ಲಮ್ಮ, ಮೋದಿಯವರು ಒಳ್ಳೆಯ ಕಾಯ್ದೆ ಜಾರಿಗೆ ತಂದಿದ್ದಾರೆ. ನಾವು ಸುಡುಗಾಡು ಸಿದ್ಧರು, ನನ್ನ ಮಗ ಈ ಕಾಯ್ದೆ ಬಗ್ಗೆ ಎಲ್ಲವನ್ನೂ ತಿಳಿಸಿದಾನೆ. ಹೀಗಾಗಿ ಮೋದಿಯವರ ಕಾರ್ಯಕ್ಕೆ ಮನಸೋತು ಪತ್ರ ಬರೆದಿರುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT