ಮಂಗಳವಾರ, ಸೆಪ್ಟೆಂಬರ್ 28, 2021
25 °C
ಕಾರ್ಯಾಗಾರ

ಆನ್‌ಲೈನ್ ವಂಚನೆ ಜಾಗೃತಿ ಅವಶ್ಯ: ಪೊಲೀಸ್ ಅಧಿಕಾರಿ ಸೋಮಶೇಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯಂತ ಅವಶ್ಯ ಎಂದು ಸೈಬರ್, ಅರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಸೋಮಶೇಖರ ಜುಟ್ಟಲ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವತಿಯಿಂದ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಕುರಿತು ಬ್ಯಾಂಕ್ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬ್ಯಾಂಕ್‌ ಅಧಿಕಾರಿಗಳ ಹೆಸರಿನಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್‌ ಬಳಸಿ ಎಟಿಎಂ ವಿತ್‌ ಡ್ರಾ, ಒಟಿಪಿ ಪಡೆದು ಕಳ್ಳತನ ಮಾಡುವಂತಹ ವಂಚನೆ ಪ್ರಕರಣ ಜರುಗುತ್ತಿವೆ. ಬ್ಯಾಂಕುಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಂತಹ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಇದ್ದರೂ, ಸಹ ಈ ರೀತಿಯ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಆನ್‌ಲೈನ್ ಶಾಪಿಂಗ್ ವಂಚನೆ, ಆನ್‌ಲೈನ್ ಸಾಲ, ಒಎಲ್‌ಎಕ್ಸ್‌ನಲ್ಲಿ ವಾಹನ ಮಾರಾಟ, ದೊಡ್ಡ ಮೊತ್ತದ ಹಣ ಹಾಗೂ ಕಾರುಗಳ ಬಹುಮಾನಗಳ ಆಮಿಷ ಇವುಗಳಿಗೆ ಜನರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ಎಲ್ಲ ದಾಖಲೆ ನೀಡಿ ಲೋನ್ ಕೇಳಿದರೆ ಬ್ಯಾಂಕುಗಳೇ ಕೊಡುವುದು ಕಷ್ಟ. ಅಂತಹದರಲ್ಲಿ ಆನ್‌ಲೈನ್ ಮೂಲಕ ನೀವು ಇಷ್ಟು ಮೊತ್ತದ ಸಾಲಕ್ಕೆ ಆಯ್ಕೆಯಾಗಿದ್ದಿರಿ. ಸ್ಪರ್ಧೆಯೇ ಇಲ್ಲದೇ ನೀವು ಇಷ್ಟು ಮೊತ್ತ ಮೊಬೈಲ್, ಬೈಕ್, ಕಾರು ಗೆದ್ದಿದ್ದಿರಿ ಎಂದು ನಿಮ್ಮ ಸಂಖ್ಯೆಗಳಿಗೆ ಕರೆ ಬರುವುದೆಲ್ಲವೂ ಸುಳ್ಳು. ಇಂತಹ ಕರೆಗಳು ಬಂದರೆ ಅದಕ್ಕೆ ಸ್ಪಂದಿಸದಿರಿ ಎಂದು ಸಲಹೆ ನೀಡಿದರು.

ನಿಮ್ಮ ಖಾತೆ ಸಂಖ್ಯೆ, ಪಿನ್, ಒಟಿಪಿಗಳಂತಹ ಯಾವುದೇ ಸಂಖ್ಯೆಗಳನ್ನು ಬ್ಯಾಂಕ್ ಕೇಳುವುದಿಲ್ಲ. ಅಲ್ಲದೇ ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದರು.

ಸಿಬ್ಬಂದಿ ರಂಗನಾಥ ಸೇರಿದಂತೆ ವಿವಿಧ ಬ್ಯಾಂಕ್ ಹಾಗೂ ವಿವಿಧ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು