ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸವೇ ಗೊತ್ತಿಲ್ಲವಾದರೆ ಭವಿಷ್ಯ ಹೇಗೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಕನಕಗಿರಿ ಉತ್ಸವಕ್ಕೆ ಅದ್ದೂರಿ ಚಾಲನೆ..
Published 3 ಮಾರ್ಚ್ 2024, 5:20 IST
Last Updated 3 ಮಾರ್ಚ್ 2024, 5:20 IST
ಅಕ್ಷರ ಗಾತ್ರ

ಕನಕಗಿರಿ: ‘ಸಮಸಮಾಜ ನಿರ್ಮಾಣ ಮಾಡುವುದೇ ನನ್ನ ಸಂಕಲ್ಪವಾಗಿದ್ದು, ಇದಕ್ಕೆ ಪೂರಕವಾಗಿ ಯುವಜನತೆಗೆ ಇತಿಹಾಸದ ಸತ್ಯದ ಕಥನವನ್ನು ತಿಳಿಸುವುದು ಅಗತ್ಯ. ಇತಿಹಾಸವೇ ಸರಿಯಾಗಿ ತಿಳಿಯದಿದ್ದರೆ ಭವಿಷ್ಯ ರೂಪಿಸಿಕೊಳ್ಳುವುದಾದರೂ ಹೇಗೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಕನಕಗಿರಿ ಉತ್ಸವದ ಅಂಗವಾಗಿ ಇಲ್ಲಿನ ರಾಜಾ ಉಡಚಪ್ಪ ನಾಯಕ ವೇದಿಕೆಯಲ್ಲಿ ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಸರಿಯಾಗಿ ಇತಿಹಾಸ ತಿಳಿಯದವರು ರಾಮನನ್ನು ಮಾತ್ರ ಪೂಜಿಸುತ್ತಾರೆ. ಸಂಪೂರ್ಣವಾಗಿ ಅರಿತುಕೊಂಡವರು ರಾಮ, ಹನುಮಂತ, ಸೀತೆ ಹಾಗೂ ಲಕ್ಷ್ಮಣನನ್ನು ಪೂಜಿಸುತ್ತಾರೆ. ಇವರೆಲ್ಲರನ್ನು ಬಿಟ್ಟು ರಾಮನನ್ನು ಬಿಟ್ಟು ಪೂಜಿಸುವುದು ಅವಿಭಕ್ತ ಕುಟುಂಬದ ಕಲ್ಪನೆಗೆ ವಿರೋಧವಾದದ್ದು. ಆದ್ದರಿಂದ ಜೈಶ್ರೀರಾಮ್‌ ಎನ್ನುವುದಿಲ್ಲ. ಸೀತಾರಾಮ್‌ ಎನ್ನುತ್ತೇನೆ’ ಎಂದು ಪ್ರತಿಪಾದಿಸಿದರು.

‘ರಾಮನನ್ನು ಮಾತ್ರವಲ್ಲ, ಹನುಮನನ್ನೂ ನಾವು ಪೂಜಿಸುತ್ತೇವೆ ಎನ್ನುವ ಕಾರಣಕ್ಕೆ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ನೀಡಿದ್ದೇವೆ. ಎಲ್ಲರಿಂದ ಬೇರ್ಪಡಿಸಿ ರಾಮನನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ್ಲ. ದೇವಸ್ಥಾನಗಳಲ್ಲಿ ರಾಮನ ಮೂರ್ತಿ ಜೊತೆಗೆ ಸೀತೆ, ಹನುಮಂತ ಮತ್ತು ಲಕ್ಷ್ಮಣ ಅವರ ಮೂರ್ತಿಗಳೂ ಇರುತ್ತವೆಯಲ್ಲವೇ’ ಎಂದು ಪ್ರಶ್ನಿಸಿದರು.

‘ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ಚೆನ್ನಾಗಿ ಅರಿತುಕೊಳ್ಳಲು ಈ ರೀತಿಯ ಉತ್ಸವಗಳು ಸಹಕಾರಿಯಾಗುತ್ತವೆ. ಅಸಮಾನತೆಯನ್ನು ತೊಡೆದು ಹಾಕಬೇಕು ಎನ್ನುವ ಕಾರಣಕ್ಕೆ ಬಸವಣ್ಣನವರು ಹೋರಾಡಿದರು. ಆದ್ದರಿಂದಲೇ ಅವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದೆ. ನಮ್ಮ ದೇಶದಲ್ಲಿ ಚತುವರ್ಣ ವ್ಯವಸ್ಥೆಯಿಂದ ಕೆಲವರಷ್ಟೇ ಶ್ರೇಷ್ಠರು, ಉಳಿದವರು ಕನಿಷ್ಠ ಎಂಬ ಭಾವನೆಯಿದೆ. ಶ್ರೇಷ್ಠರು ಎಂದು ಹೇಳುವವರು ಮನುಷ್ಯರೇ ಅಲ್ಲ’ ಎಂದು ಹೇಳಿದರು. 

ಸಂಸದ ಸಂಗಣ್ಣ ಕರಡಿ ಮಾತನಾಡಿ ‘ನೀರಾವರಿ ಸೌಲಭ್ಯಕ್ಕಾಗಿ ನವಲಿ ಸಮಾನಾಂತರ ಜಲಾಶಯ ಕಾಮಗಾರಿ ಆರಂಭಿಸಬೇಕು, ಸಿಂಗಟಾಲೂರು ಯೋಜನೆ ಅನುಷ್ಠಾನಕ್ಕೆ ಬರಬೇಕು, ಆಲಮಟ್ಟಿಯಿಂದ ತುಂಗಭದ್ರಾ ನದಿಗೆ ನೀರು ತರಬೇಕು, ಕೊಪ್ಪಳದಲ್ಲಿ ವಿಮಾನ ನಿಲ್ದಾಣಕ್ಕೆ, ಕನಕಗಿರಿಯಲ್ಲಿರುವ ರೈಸ್ ಟೆಕ್ನಾಲಜಿ ಪಾರ್ಕ್ ಹಾಗೂ ತೋಟಗಾರಿಕಾ ಪಾರ್ಕ್ ಆರಂಭಿಸಲು ಆದ್ಯತೆ ನೀಡಬೇಕು’ ಎಂದರು.

ಶಾಸಕರಾದ ಜನಾರ್ದನ ರೆಡ್ಡಿ, ರಾಘವೇಂದ್ರ ಹಿಟ್ನಾಳ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಹೇಮಲತಾ ನಾಯಕ, ಶರಣಗೌಡ ಪಾಟೀಲ ಬಯ್ಯಾಪುರ, ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಚನ್ನಮಲ್ಲ ಸ್ವಾಮೀಜಿ, ಸುಳೇಕಲ್‌ನ ಭುವನೇಶ್ವರ ತಾತಾ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ಮಾಜಿ ಸಂಸದ ಶಿವರಾಮೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಅಜಯ ನಾಗಭೂಷಣ, ಬಳ್ಳಾರಿ ವಲಯದ ಐಜಿಪಿ ಬಿ. ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಎಸ್‌.ಪಿ. ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಹಾಗೂ ಕನಕಗಿರಿ ರಾಜವಂಶಸ್ಥ ರಾಜ ನವೀನಚಂದ್ರ ನಾಯಕ ಹುಲಿಹೈದರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಉತ್ಸವದಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಉತ್ಸವದಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ

ಮುಂದಿನ ವರ್ಷ ಅಭಿವೃದ್ಧಿ ಪ್ರಾಧಿಕಾರ; ಸಿ.ಎಂ. ಭರವಸೆ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ ಭಾಷಣದಲ್ಲಿ ಕನಕಾಚಲಪತಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಪ್ರಗತಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಿದರು. ಕೆರೆಗೆ ನೀರು ತುಂಬಿಸುವ ಕಾರ್ಯ ನವಲಿ ಸಮಾನಾಂತರ ಜಲಾಶಯಗಳ ನಿರ್ಮಾಣ ಕೃಷ್ಣಾದಿಂದ ತುಂಗಭದ್ರಾ ನದಿ ಜೋಡಣೆ ಹಾಗೂ ತೋಟಗಾರಿಕಾ ಪಾರ್ಕ್‌ಗೆ ಅನುದಾನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಮುಂದಿನ ವರ್ಷ ಪ್ರಾಧಿಕಾರ ಘೋಷಣೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಹತ್ತು ವರ್ಷ ಸಿಎಂ ಆಗಿರಲಿ: ರಾಯರಡ್ಡಿ
ನಾನು ಸಚಿವನಾಗದಿದ್ದರೂ ಪರವಾಗಿಲ್ಲ ಸಿದ್ದರಾಮಯ್ಯ ಅವರು ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ‘ಈಗಿನ ರಾಜಕಾರಣದಲ್ಲಿ ಧರ್ಮ ಜಾತಿ ಹಾಗೂ ಹಣವೇ ಮೇಲಾಗಿದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಸಮರ್ಥ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇದು ನಮ್ಮ ಭಾಗ್ಯ’ ಎಂದರು. ‘ಜಾತ್ಯತೀತ ನಾಯಕರಾದ ಸಿದ್ದರಾಮಯ್ಯ ಅವರ ಹೃದಯ ಬಡವರ ನೊಂದವರ ಪರ ಇದೆ. ಹೀಗಾಗಿ ಅವರನ್ನು ಕಂಡರೆ ಕೆಲವರಿಗೆ ಆಗಿ ಬರುವುದಿಲ್ಲ. ಮುಖ್ಯಮಂತ್ರಿ ಹೃದಯವಂತರು ಎನ್ನುವುದನ್ನು ಅವರ ಎದುರು ಹೇಳುವ ಅಗತ್ಯವಿಲ್ಲ. ಆದರೆ ಸತ್ಯ ಹೇಳಲು ಹಿಂದೇಟು ಹಾಕುವುದಿಲ್ಲ’ ಎಂದರು.

ತಡರಾತ್ರಿ ತನಕ ಸಾಂಸ್ಕೃತಿಕ ಕಾರ್ಯಕ್ರಮ

ತಡರಾತ್ರಿ ತನಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಪ್ರೇಕ್ಷಕರ ಗಮನ ಸೆಳೆದರು. ಅರ್ಜುನ ಇಟಗಿ (ಯುಗಳ ಸಂಗೀತ) ನಟಿ ಹರ್ಷಿಕಾ ಪೂಣಚ್ಛ ರಾಜೇಶ್ ಕೃಷ್ಣನ್‌ ಮತ್ತು ಕಲಾ ತಂಡ ತನಿಷಾ ಕುಪ್ಪಂಡ ಮತ್ತು ಕಾಮಿಡಿ ಕಿಲಾಡಿಗಳು ತಂಡದಿಂದ ಜನರಿಗೆ ಸಂಗೀತದ ರಸದೌತಣ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT