ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ಬಂಡವಾಳಶಾಹಿ ಪರ: ಶಿವರಾಜ ತಂಗಡಗಿ ಅಭಿಪ್ರಾಯ

Last Updated 14 ಜೂನ್ 2021, 5:20 IST
ಅಕ್ಷರ ಗಾತ್ರ

ಮರ್ಲಾನಹಳ್ಳಿ (ಕಾರಟಗಿ): ‘ದೇಶ ಲೂಟಿ ಮಾಡಿ, ಬಂಡವಾಳಶಾಹಿಗಳ ಹಿತರಕ್ಷಣೆಗೆ ಒತ್ತು ನೀಡುವ ಕೆಲಸ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಸಂಕಷ್ಟದ ದಿನಗಳು ಎದುರಾಗಲಿವೆ’ ಎಂದು ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.

ಬೆಲೆ ಏರಿಕೆ ವಿರೋಧಿಸಿ ತಾಲ್ಲೂಕಿನ ಮರ್ಲಾನಹಳ್ಳಿ ಗ್ರಾಮದ ಬಳಿಯ ಪೆಟ್ರೋಲ್ ಬಂಕ್‍ನಲ್ಲಿ ನಡೆದ 100 ನಾಟೌಟ್ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೇಂದ್ರದ ಬಿಜೆಪಿ ಸರ್ಕಾರ ಜನತೆಗೆ ಭರವಸೆಗಳ ಗೋಪುರವನ್ನೇ ತೋರಿಸಿ ಅಧಿಕಾರಕ್ಕೆ ಬಂದಿದೆ. ಏಳು ವರ್ಷಗಳಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ. ಸಾಲದೆಂಬಂತೆ, ನೋಟು ರದ್ದತಿ, ಜಿಎಸ್‍ಟಿ ಜಾರಿ, ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ, ಆಹಾರ ಧಾನ್ಯ ಬೆಲೆ ಏರಿಕೆ ನಿಯಂತ್ರಿಸಲಾಗದೇ, ಜನವಿರೋಧಿ ನೀತಿಯ ಕೊಡುಗೆ ನೀಡಿದೆ ಎಂದರು.

ಕಾಂಗ್ರೆಸ್‍ನ 70 ವರ್ಷಗಳ ಸಾಧನೆ ಪ್ರಶ್ನಿಸುತ್ತಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್ ಅಧಿಕಾರಾವಧಿಯಲ್ಲಿದ್ದ ಸಾರ್ವಜನಿಕ ಉದ್ದಿಮೆ, ಆಸ್ತಿಗಳನ್ನು ನಿರಂತರವಾಗಿ ಮಾರಾಟ ಮಾಡುವಲ್ಲೇ ಸಾಧನೆ ಮೆರೆಯುತ್ತಿದ್ದಾರೆ. ಇದ್ಯಾವುದನ್ನು ಗಮನಿಸದ ಬಿಜೆಪಿ ವೈಫಲ್ಯಗಳನ್ನೇ ಸಾಧನೆ ಎಂಬಂತೆ ಸಮರ್ಥಿಸಿಕೊಳ್ಳುತ್ತಿದೆ ಎಂದು ತಂಗಡಗಿ ಕಿಡಿಕಾರಿದರು.

ವಕ್ತಾರ ಪ್ರಕಾಶ್ ರಾಠೋಡ ಮಾತನಾಡಿ,‘ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಿದ್ದರೂ, ಅತ್ಯಂತ ಹೆಚ್ಚು ಬೆಲೆ ದೇಶದಲ್ಲಿದೆ. ನೆರೆಯ ಪಾಕಿಸ್ತಾನ, ಶ್ರೀಲಂಕಾ ಸಹಿತ ಇತರ ರಾಷ್ಟ್ರಗಳಲ್ಲಿ ತೈಲ ಬೆಲೆ ತೀರಾ ಕಡಿಮೆ ಇದೆ. ದೇಶವನ್ನು ನಡೆಸಲಾಗದವರು, ಅಭಿವೃದ್ಧಿಯ ಬಗ್ಗೆ ಮಾತನಾಡುತ್ತ ಕಾಲಹರಣ ಮಾಡಿ, ಜನರನ್ನು ತೀವ್ರ ಸಂಕಷ್ಟದ ಕೂಪಕ್ಕೆ ತಳ್ಳುತ್ತಿದ್ದಾರೆ’ ಎಂದರು.

ಪೆಟ್ರೋಲ್ ಹಾಕಿಸಿದರು: ಪ್ರತಿಭಟನೆ ಸಂದರ್ಭದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಕೆಲ ಬೈಕ್ ಸವಾರರಿಗೆ ಮಾಜಿ ಸಚಿವ ತಂಗಡಗಿ ತಲಾ ₹ 100 ಪೆಟ್ರೋಲ್ ಹಾಕಿಸಿ, ಗುಲಾಬಿ ಹೂ ಮತ್ತು ಸಿಹಿ ನೀಡುವುದರೊಂದಿಗೆ ಪ್ರತಿಭಟನೆ ಮಾಡಿದರು.

ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಚ್.ರವಿನಂದನ್, ಪ್ರಮುಖರಾದ ಶರಣೇಗೌಡ ಮಾಲಿ ಪಾಟೀಲ, ಉಮೇಶ ಭಂಗಿ, ರಮೇಶ ಕೋಟ್ಯಾಳ, ಶರಣಪ್ಪ ಕಾಯಿಗಡ್ಡೆ ಹಾಗೂ ವೀರೇಶ ಶೆಟ್ಟರ್‌ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT