ಶನಿವಾರ, ಜನವರಿ 29, 2022
24 °C

ಕೊಪ್ಪಳ | ಗಂಗಾವತಿ: ನಿಲ್ಲದ ಜನರ ಓಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ವಾರಾಂತ್ಯದ ಕರ್ಫ್ಯೂ ಕಾರಣ ಶನಿವಾರ ಗಂಗಾವತಿ ನಗರದ ಪ್ರಮುಖ ರಸ್ತೆ, ವೃತ್ತ, ಬಸ್ ನಿಲ್ದಾಣದಲ್ಲಿ ಜನ ಸಂಚಾರ ತುಂಬ ವಿರಳವಾಗಿತ್ತು.

ಶುಕ್ರವಾರ ಸಂಜೆಯೆ ಎಲ್ಲ ಸಾರ್ವಜನಿಕರು ತರಕಾರಿ, ಕಿರಾಣಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿ, ಶನಿವಾರದ ಕರ್ಫ್ಯೂ ವೇಳೆಗೆ ಜಾಗೃತರಾದರು. ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ಇರುವ ಕಾರಣ ಶನಿವಾರ ಬೆಳಿಗ್ಗೆ 10 ಒಳಗೆ ಕೆಲವರು ಅಗತ್ಯ ವಸ್ತುಗಳನ್ನು ಖರೀದಿಸಿದರು.

ನಗರದ ಶ್ರೀ ಕೃಷ್ಣದೇವರಾಯ ವೃತ್ತ, ಗಾಂಧಿ ವೃತ್ತ, ಮಹಾವೀರ ವೃತ್ತ, ಚನ್ನಬಸವ ಸರ್ಕಲ್, ಜುಲೈನಗರ, ಲತಿಫಿಯಾ ವೃತ್ತ ಸೇರಿ ವಿವಿಧ ವೃತ್ತಗಳಲ್ಲಿ ದ್ವಿಚಕ್ರ ವಾಹನ, ಆಟೊ, ಕಾರು ಮತ್ತು ಪಾದಚಾರಿ ಮಾರ್ಗದ ಸಂಚಾರ ಸಹಜವಾಗಿತ್ತು. ಇಲ್ಲಿನ ಕೆಲ ವೃತ್ತಗಳಲ್ಲಿ ಅಂಗಡಿಗಳು ಮುಚ್ಚಿದರೆ, ಕೆಲ ವೃತ್ತಗಳಲ್ಲಿ ತೆರಯಲಾಗಿತ್ತು.

ಇಲ್ಲಿನ ಉಪವಿಭಾಗ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಾದ ಚಂದ್ರಪ್ಪ ಮಲ್ಟಿಸ್ಪೆಷಾಲಿಟಿ, ಬಳ್ಳಾರಿ ಕ್ಲಿನಿಕ್, ವಿನಾಯಕ ನರ್ಸಿಂಗ್ ಹೋಮ್‌ಗಳಲ್ಲಿ ಚಿಕಿತ್ಸೆ ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ್ದರು. ಜೊತೆಗೆ ನಗರದಲ್ಲಿ ಅಪೋಲೋ ಸೇರಿದಂತೆ ಇತರೆ ಮೆಡಿಕಲ್ ಮಳಿಗೆಗಳಲ್ಲಿ ಜನಸಂದಣಿ ಕಂಡು ಬಂತು.

ಪ್ರಯಾಣಿಕರಿಲ್ಲದೆ ಸಂಚಾರ ಸ್ಥಗಿತ: ಗಂಗಾವತಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಕಾರಣ 20 ಮಾರ್ಗದ ಬಸ್ ಸಂಚಾರ ಸ್ಥಗಿತ ಮಾಡಲಾಗಿತ್ತು. ಹತ್ತಿರದ ಹುಲಗಿ, ಹೊಸಪೇಟೆ, ಕೊಪ್ಪಳ, ಕನಕಗಿರಿ ಮಾರ್ಗಕ್ಕೆ ಬಸ್ ಸೌಲಭ್ಯ ಕಲ್ಪಿಸಿದರು. ಪ್ರಯಾಣಿಕ ಕೊರತೆಯಿಂದ 3- 4 ಗಂಟೆಗೆ ಒಂದು ಬಸ್ ಹೊರಡುತ್ತಿತ್ತು. ಆಟೊಗಳಿಗೆ ಪ್ರಯಾಣಿಕರು ಇಲ್ಲದ ಕಾರಣ, ಆಟೊಗಳು ಸ್ಟ್ಯಾಂಡಿನಲ್ಲಿಯೇ ನಿಂತಿದ್ದವು.

ಅಗತ್ಯ ವಸ್ತುಗಳ ಮಾರುಕಟ್ಟೆ ಸ್ತಬ್ಧ: ಸರ್ಕಾರ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಿದ ಕಾರಣ ಗುಂಡಮ್ಮ ಕ್ಯಾಂಪ್ ತರಕಾರಿ ಮಾರುಕಟ್ಟೆ, ಸಂಡೆ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ವ್ಯವಸ್ಥೆ ಇದ್ದರೂ ಗ್ರಾಹಕರಿಲ್ಲದೆ ಮಾರುಕಟ್ಟೆ ಬಿಕೊ ಎನ್ನುತ್ತಿತ್ತು.

ದೇವಸ್ಥಾನಗಳಿಗೆ ನಿರ್ಬಂಧ: ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ದೇವಸ್ಥಾನ, ಪಂಪಾಸರೋವರ, ದುರ್ಗಾದೇವಿ, ನವವೃಂದಾವನ ಸೇರಿದಂತೆ ಇತರೆ ದೇವಸ್ಥಾನಗಳ ಪ್ರವೇಶಕ್ಕೆ ನಿರ್ಬಂಧ ಮಾಡಿದ ಪರಿಣಾಮ ಜನ ಸಂಚಾರ ಕಡಿಮೆಯಾಗಿದೆ. ಶನಿವಾರ ಇರುವ ಅಂಜನಾದ್ರಿಗೆ ಭಕ್ತರ ಸಂಖ್ಯೆ ಹೆಚ್ಚಾಗಬಹುದು ಎಂದು ತಾಲ್ಲೂಕು ಆಡಳಿತ ಪೋಲಿಸ್ ವ್ಯವಸ್ಥೆ ಕಲ್ಪಿಸಿ, ಪ್ರವೇಶ ನಿರ್ಬಂಧಿಸಿದೆ.

*

ಗಂಗಾವತಿಯಿಂದ ಹುಲಗಿಗೆ ಒಂದು ಟ್ರಿಪ್ ಬಸ್ ಸಂಚಾರ ಮಾಡಿದರೆ ₹2 ಸಾವಿರ ಕಲೆಕ್ಷನ್ ಆಗುತ್ತಿತ್ತು.‌ ಕರ್ಫ್ಯೂ ಕಾರಣ ಇವತ್ತು ₹490 ಕಲೆಕ್ಷನ್ ಆಗಿದೆ.
-ಹುಸೇನಿ ಹನುಮನಹಳ್ಳಿ, ಬಸ್ ಚಾಲಕ

*

ಶನಿವಾರ, ಭಾನುವಾರದ ವ್ಯಾಪಾರಕ್ಕಂತ ಹಣ್ಣುಗಳನ್ನು ತಂದಿನಿ. ಇದೀಗ ಕರ್ಫ್ಯೂ ಹಾಕಿದ್ದಾರೆ. ವ್ಯಾಪಾರ ಏನೂ ಇಲ್ಲ. ಹಾಕಿದ ಬಂಡವಾಳ ಬಂದ್ರೆ ಸಾಕು ಅನ್ಸುತ್ತೆ.
-ರಾಮಣ್ಣ, ಹಣ್ಣಿನ ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.