ಸೋಮವಾರ, ಮೇ 17, 2021
23 °C
ಕೋವಿಡ್‌ ಕಾರಣ ಇತ್ತ ಮುಖಮಾಡದ ತಮಿಳುನಾಡು, ಕೇರಳದ ವ್ಯಾಪಾರಿಗಳು

ಕೊಪ್ಪಳ: ದ್ರಾಕ್ಷಿ ಬೆಳೆಗೂ ಕೊರೊನಾ ವಿಪತ್ತು

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ವಿಜಯಪುರ ಮತ್ತು ಬಾಗಲಕೋಟೆ ನಂತರ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ಕೊಪ್ಪಳ. ಗುಣಮಟ್ಟದ ದ್ರಾಕ್ಷಿ ಬೆಳೆಗೆ ಹೇಳಿ ಮಾಡಿಸಿದ ವಾತಾವರಣ ಇಲ್ಲಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟಕ್ಕೆ ದ್ರಾಕ್ಷಿ ಬೆಳೆಗಾರರು ನಲುಗಿ ಹೋಗಿದ್ದಾರೆ.

ಈ ಮುಂಚೆ ಕೆಲವೇ ಎಕರೆಗಳಲ್ಲಿ ಬೆಳೆಯುತ್ತಿದ್ದ ದ್ರಾಕ್ಷಿ ಈಗ 300 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸಿದೆ. ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಕೊರೊನಾ ಸಂಕಷ್ಟದ ಮಧ್ಯೆ ಸಾಗಾಟ, ಮಾರುಕಟ್ಟೆ ಸಮಸ್ಯೆಯಿಂದ ರೈತರು ಹೆಚ್ಚಿನ ಲಾಭ ಮಾಡಿಕೊಳ್ಳಲು ಆಗಲಿಲ್ಲ. ಹೆಚ್ಚಿನ ಮಳೆಯಾಗಿದ್ದರಿಂದ ನಿರ್ವಹಣೆಗೂ ತೊಂದರೆಯಾಯಿತು. ಮಹಾರಾಷ್ಟ್ರ ಭಾಗದಿಂದ ಸಾವಿರಾರು ಟನ್‌ ದ್ರಾಕ್ಷಿ ಆಮದು ಆಗಿದ್ದರಿಂದ ಬೆಲೆ ಸಮರದಿಂದ ತತ್ತರಿಸಿರುವ ರೈತರು ಇದ್ದ ಬದ್ಧ ಬೆಲೆಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ.

ದೊಡ್ಡ ರೈತರು ಪರ್ಯಾಯ ಉತ್ಪನ್ನಗಳತ್ತ ಗಮನ ಹರಿಸಿ ಮನೂಕಾ, ವೈನ್ ಸೇರಿದಂತೆ ವಿವಿಧ ಮೌಲ್ಯವರ್ಧಿತ  ಉತ್ಪನ್ನಗಳನ್ನು ಮಾಡಿಕೊಂಡರೆ 1ರಿಂದ 4 ಎಕರೆಯಲ್ಲಿ ಬೆಳೆದ ರೈತರು ಬಂದ ಬೆಲೆಗೆ ಮಾರಾಟ ಮಾಡಿದ್ದಾರೆ. ಜಮೀನಿನಲ್ಲಿ ₹ 30ರಿಂದ ₹ 35ಕ್ಕೆ ಖರೀದಿಸುವ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ₹50ಕ್ಕೆ ಮಾರಾಟ ಮಾಡಿದರು. ಮಲೆನಾಡು ಭಾಗದಲ್ಲಿ ₹ 70ರಿಂದ ₹ 80 ಮಾರಾಟ ಮಾಡಲಾಗುತ್ತಿದೆ. ಆದರೆ ಸಾಗಾಟ ಸಮಸ್ಯೆಯಿಂದ ಬಹುತೇಕ ರೈತರು ಹೊರಗಡೆ ಮಾರಾಟ ಮಾಡಿಲ್ಲ.

‘ವ್ಯಾಪಾರಿಗಳು ತಮಿಳುನಾಡು, ಕೇರಳದಿಂದ ಇಲ್ಲಿಗೆ ಬಂದು ಖರೀದಿಸುತ್ತಿದ್ದರು. ಕೊರೊನಾ ಕಾಟದಿಂದ ವ್ಯಾಪಾರಿಗಳು ಇತ್ತ ಮುಖ ಮಾಡಿಲ್ಲ. ಕ್ವಿಂಟಲ್‌ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದ ರೈತರು, ಇಲ್ಲಿಯೇ ಸಣ್ಣಪುಟ್ಟ ವ್ಯಾಪಾರಿಗಳಿಗೆ ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ. 2 ಹೆಕ್ಟೇರ್‌ನಲ್ಲಿ ಬೆಳೆದ ಗುಣಮಟ್ಟದ ದ್ರಾಕ್ಷಿಯಿಂದ ₹3 ಲಕ್ಷ ಆದಾಯ ಗಳಿಸುತ್ತಿದ್ದ ರೈತರು ಈ ಸಾರಿ ನಿರೀಕ್ಷೆಯಷ್ಟು ಆದಾಯ ಗಳಿಸಿಲ್ಲ’ ಎಂದು ದ್ರಾಕ್ಷಿ ಬೆಳೆಗಾರ ಮತ್ತು ಪ್ರಗತಿಪರ ರೈತ ಮಲ್ಲಿಕಾರ್ಜುನ ಗಡಗಿ ಹೇಳುತ್ತಾರೆ.

ಕುಷ್ಟಗಿ, ಕುಕನೂರು, ಯಲಬುರ್ಗಾ ಭಾಗದಲ್ಲಿ ಹೆಚ್ಚಿನ ಪ್ರಮಾಣದ ದ್ರಾಕ್ಷಿ ಬೆಳೆಯಲಾಗುತ್ತಿದೆ. ರುಚಿ, ಗಾತ್ರ, ಗುಣಮಟ್ಟದಲ್ಲಿ ಭಿನ್ನ, ಭಿನ್ನವಾದ ದ್ರಾಕ್ಷಿಯನ್ನು ಇಲ್ಲಿ ಬೆಳೆಯಲಾಗುತ್ತದೆ. ತಾವರಗೇರಾ ಬಳಿ ಇರುವ ಡಿಸ್ಟಲರಿಯೊಂದು 1 ಲೀಟರ್‌ ದ್ರಾಕ್ಷಾರಸಕ್ಕೆ ₹2500 ವರೆಗೆ ಮಾರಾಟ ಮಾಡುತ್ತಾರೆ. ಇಲ್ಲಿಗೂ ಕೂಡಾ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಕಡಿಮೆಯಾದರೂ ಸಂಗ್ರಹಿಸಿಟ್ಟುಕೊಂಡ ಈ ರಸ ದಿನಗಳದಂತೆ ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆದರೆ ಲಾಭ ಮಾತ್ರ ರೈತರಿಗೆ ಮುಟ್ಟುತ್ತಿಲ್ಲ.

ತೋಟಗಾರಿಕೆ ಕ್ಷೇತ್ರದಲ್ಲಿ ಲಾಭ ತರುವ ಪ್ರಮುಖ ಬೆಳೆ ದಾಳಿಂಬೆ ಬೆಳೆದು ಕೈಸುಟ್ಟುಕೊಂಡಿದ್ದ ರೈತರು, ದ್ರಾಕ್ಷಿಯತ್ತ ಮುಖ ಮಾಡಿದ್ದರು. ಆರಂಭದಲ್ಲಿ ಹೆಚ್ಚಿನ ಲಾಭಮಾಡಿಕೊಂಡರೂ ಕಳೆದ ಎರಡು ವರ್ಷದಿಂದ ಸಂಕಷ್ಟ ಎದುರಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು