ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಕ್ಕೆ ಸೋಂಕಿತರ ಹಿಂದೇಟು

ಕುಷ್ಟಗಿ: 17 ಕೋವಿಡ್‌ ಕಾಳಜಿ ಕೇಂದ್ರಗಳ ಸ್ಥಾಪನೆ
Last Updated 19 ಮೇ 2021, 3:47 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಹಾಸ್ಟೇಲ್ ಮತ್ತಿತರ ಕಟ್ಟಡಗಳನ್ನು ಕೋವಿಡ್‌ ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಸೋಂಕಿತರನ್ನು ಮನೆಗಳಿಂದ ಅಲ್ಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ತಾಲ್ಲೂಕಿನಲ್ಲಿ ಹೋಂ ಐಲೋಲೇಷನ್‌ದಲ್ಲಿರುವ 550 ಸೋಂಕಿತರು ಮನೆಯಲ್ಲಿ ಉಳಿದುಕೊಳ್ಳದೆ ಸಮುದಾ ಯದೊಂದಿಗೆ ಬೆರೆಯುತ್ತಿರುವುದು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ತಿರುಗಾಡುತ್ತಿರುವುದರಿಂದ ದಿನೇ ದಿನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹಾಗಾಗಿ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವ ಪ್ರಯತ್ನ ಆರಂಭಗೊಂಡಿದ್ದು, 6 ಸಾರಿಗೆ ಬಸ್‌ಗಳ ಮೂಲಕ ಅವರನ್ನು ಕೋವಿಡ್‌ ಕಾಳಜಿ ಕೇಂದ್ರಗಳಿಗೆ ಕರೆತರಲಾಗುತ್ತಿದೆ.

ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್‌ ಸೇರಿದಂತೆ ತಾಲ್ಲೂಕಿನ ನಾಲ್ಕೂ ಹೋಬಳಿ ಕೇಂದ್ರಗಳಿಗೆ ಸೇರಿದ 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 17 ಕೋವಿಡ್‌ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಅಲ್ಲಿ ಎಲ್ಲ ರೀತಿಯ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ್‌ ತಿಳಿಸಿದರು. ಸೋಂಕಿತರನ್ನು ಕಾಳಜಿ ಕೇಂದ್ರಕ್ಕೆ ಕರೆತ ರುವ ಜವಾಬ್ದಾರಿಯನ್ನು ಆಯಾ ಪಂಚಾಯಿತಿಗಳಿಗೆ ವಹಿಸಲಾಗಿದೆ.

ಹಿಂದೇಟು: ಈ ಮಧ್ಯೆ ಮನೆಯಲ್ಲಿಯೇ ಉಳಿದಿದ್ದ ಸೋಂಕಿತ ವ್ಯಕ್ತಿಗಳು ಸರ್ಕಾರದ ಕಾಳಜಿ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು, ಸಿಬ್ಬಂದಿ ವಿಳಾಸ ಹುಡುಕಿ ಮನೆ ಬಳಿ ಹೋದರೂ ಕೆಲವರು ಕೋವಿಡ್‌ ಕೇಂದ್ರಕ್ಕೆ ಬರಲು ನಿರಾಕರಿಸಿದರು. ಮನೆಯ ಇತರೆ ಸದಸ್ಯರು ಸೇರಿದಂತೆ ಸಮಾಜದ ಇತರರಿಗೂ ಸೋಂಕು ಹರಡಿ ಸಮಸ್ಯೆ ಹೆಚ್ಚಾಗುತ್ತದೆ. ಕಾಳಜಿ ಕೇಂದ್ರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸೋಂಕಿತರ ಮನ ಒಲಿಸಲಾಗುತ್ತಿದೆ. ಅಲ್ಲದೆ ಕೆಲವರು ಸ್ವಯಂ ಪ್ರೇರಣೆಯಿಂದ ಬಂದು ಬಸ್‌ ಹತ್ತಿದರು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಇಷ್ಟಾದರೂ ಬಹುತೇಕ ಸೋಂಕಿತರು ಇನ್ನೂ ಮನೆಯಲ್ಲಿಯೇ ಉಳಿದಿರುವುದು ಅಧಿಕಾರಿಗಳಿಗೆ ಪೀಕಲಾಟ ತಂದಿದೆ. ಪರಿಸ್ಥಿತಿಯನ್ನು ವಿವರಿಸುತ್ತೇವೆ, ಅವರಾಗಿಯೇ ಗೌರವಯುತವಾಗಿ ಬಂದರೆ ಸರಿ ಇಲ್ಲದಿದ್ದರೆ ಕೋವಿಡ್‌ ನಿಯಮಗಳ ಪ್ರಕಾರ ಬಲವಂತವಾಗಿ ಕರೆತರುವುದು ಅನಿವಾರ್ಯ. ಕೆಲವು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದು ಯಾರೊಂದಿಗೂ ಬೆರೆಯುತ್ತಿಲ್ಲ ಎಂದು ನೆಪ ಹೇಳುತ್ತಿದ್ದಾರೆ ಎಂದರು. ಅತಿ ಹೆಚ್ಚು ಸಕ್ರಿಯ ಸೋಂಕಿತ ಪ್ರಕರಣಗಳ ಪೈಕಿ ಕುಷ್ಟಗಿಯಲ್ಲಿ 138 ಮತ್ತು ಮುದೇನೂರು 15 ಜನ ಇದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಂಗಳವಾರದ ಮಾಹಿತಿಯ ಪ್ರಕಾರ ಪಟ್ಟಣದ 2 ಸೇರಿ ತಾಲ್ಲೂಕಿನಲ್ಲಿ 25 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಳೂಟಗಿ ಮತ್ತು ಮಿಯಾಪುರ ಗ್ರಾಮಗಳಿಗೆ ಸೇರಿದ 60 ವರ್ಷದ ಮಹಿಳೆ ಮತ್ತು ಪುರುಷ ಇಲ್ಲಿಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT