ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊ‍ಪ್ಪಳ: ಈ ಊರಿನಲ್ಲಿ ದಲಿತರು ಬಂದರೆ ಹೋಟೆಲ್‌ ಬಂದ್‌!

Published 14 ಫೆಬ್ರುವರಿ 2024, 15:59 IST
Last Updated 14 ಫೆಬ್ರುವರಿ 2024, 15:59 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಕೇಂದ್ರದಿಂದ ಐದಾರು ಕಿ.ಮೀ. ದೂರದಲ್ಲಿರುವ ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರು ಹೋಟೆಲ್‌ ಪ್ರವೇಶಿಸಿದರೆ ಹೋಟೆಲ್‌ ಬಂದ್‌ ಮಾಡಲಾಗುತ್ತದೆ. ಕ್ಷೌರದ ಅಂಗಡಿಗಳಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ.

ಗ್ರಾಮದಲ್ಲಿ ಹಲವು ದಿನಗಳಿಂದ ಹೀಗೆ ನಡೆದುಕೊಂಡು ಬರುತ್ತಿರುವುದನ್ನು ಕಂಡು ದಲಿತ ಸಮುದಾಯದ ವಿದ್ಯಾವಂತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ಹಾಗೂ ಕ್ಷೌರದ ಅಂಗಡಿಗಳ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಬುಧವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ದಲಿತರು ಹೋಟೆಲ್‌ಗೆ ಬಂದರೆ ತಿಂದು ಬೀಸಾಡುವ ಪ್ಲೇಟ್‌ನಲ್ಲಿ, ಬೇರೆಯವರಿಗೆ ಸ್ಟೀಲ್‌ ಪ್ಲೇಟ್‌ನಲ್ಲಿ ಆಹಾರ ಕೊಡಲಾಗುತ್ತದೆ. ಕ್ಷೌರಿಕರ ಅಂಗಡಿ ತೆರಳಿದರೆ ಕ್ಷೌರ ಮಾಡುವುದಿಲ್ಲ. ಪ್ರಶ್ನಿಸಿದರೆ ಬೀಗ ಹಾಕಿಕೊಂಡು ಹೋಗಿಬಿಡುತ್ತಾರೆ ಎಂದು ದಲಿತ ಸಮುದಾಯದ ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ಹಾಲವರ್ತಿ ಗ್ರಾಮದ ಪ್ರಾಣೇಶ ಗಾಳೆಪ್ಪ ಹೊಸಮನಿ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಅಪಘಾತದಲ್ಲಿ ನನ್ನ ಸಹೋದರನ ಕಾಲಿಗೆ ಪೆಟ್ಟಾಗಿದ್ದರಿಂದ ಕ್ಷೌರ ಮಾಡಿಸಿಕೊಳ್ಳಲು ಬೇರೆ ಊರಿಗೆ ಹೋಗಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಿದೆ. ಆದ್ದರಿಂದ ಕ್ಷೌರ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕೆರೆಯಿದ್ದು ಅಲ್ಲಿನ ನೀರು ದಲಿತರು ಮುಟ್ಟಬಾರದು ಎಂದು ಕೆರೆಗೆ ಕಾವಲುಗಾರನನ್ನು ನಿಯೋಜಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ‘ಕೆರೆಯ ನೀರು ಕೊಳಚೆಯಾಗಬಾರದೆಂದು ಹೀಗೆ ಮಾಡಿದ್ದೇವೆಂದು ಸಬೂಬು ಹೇಳುತ್ತಾರೆ’ ಯುವಕರ ತಂಡದವರು ಆಪಾದಿಸಿದರು.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮದ ಎಲ್ಲ ಹೋಟೆಲ್‌ಗಳ ಮಾಲೀಕರನ್ನು ವಿಚಾರಿಸಿದರು. ಗುರುವಾರ ಸಭೆ ನಡೆಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಪ್ರತಿಕ್ರಿಯಿಸಿ, ‘ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಧಾನ ಸಭೆ ನಡೆಸಲಾಗುವುದು’ ಎಂದರು.

ದಲಿತರಿಗೆ ಹೋಟೆಲ್ ಪ್ರವೇಶ ನಿಷೇಧ ಮಾಡಿದ್ದಾರೆ ಎನ್ನುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟವರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗುವುದು.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ, ಕೊಪ್ಪಳ
ಬಾಗಿಲು ಹಾಕಿರುವ ಕ್ಷೌರಿಕ ಅಂಗಡಿ

ಬಾಗಿಲು ಹಾಕಿರುವ ಕ್ಷೌರಿಕ ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT