ದೀಪಾವಳಿ: ಚೆಂಡು ಹೂವಿನದೇ ಮೆರುಗು

ಕುಷ್ಟಗಿ: ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿದ್ದು, ಚೆಂಡು ಹೂವಿಗೆ ಬೇಡಿಕೆ ಸೃಷ್ಟಿಯಾಗಿದೆ.
ಹಬ್ಬದ ಸಮಯಕ್ಕೆ ಸರಿಯಾಗಿ ಕಟಾವಿಗೆ ಬರುವ ರೀತಿಯಲ್ಲಿ ಬೇಸಾಯ ಕ್ರಮಗಳನ್ನು ಅನುಸರಿಸುವ ಮೂಲಕ ಕೊಪ್ಪಳ ಜಿಲ್ಲೆಯ ಬಹಳಷ್ಟು ರೈತರು ಚೆಂಡು ಹೂವು ಬೆಳೆದಿದ್ದು, ಉತ್ತಮ ದರ ದೊರಕುವ ವಿಶ್ವಾಸದಲ್ಲಿದ್ದಾರೆ.
ಎರಡು ವರ್ಷದ ಅವಧಿಯಲ್ಲಿ ಕೊರೊನಾ ಸಮಸ್ಯೆಯಿಂದ ತತ್ತರಿಸಿರುವ ರೈತರು ತರಕಾರಿ, ಹೂವು ಬೆಳೆದು ಕೈಸುಟ್ಟುಕೊಂಡರು. ಮಾರುಕಟ್ಟೆಗೆ ಸಾಗಿಸಲಾಗದೆ, ಒಯ್ದರೂ ಕೇಳುವವರಿಲ್ಲದೆ ತರಕಾರಿ, ಹೂವುಗಳನ್ನು ತಿಪ್ಪೆಗೆ ಎಸೆದು ಹಲವು ಉದಾಹರಣೆಗಳಿವೆ.
ಸದ್ಯಕ್ಕಂತೂ ಕೋವಿಡ್ ಸದ್ದಡಗಿದೆ. ದೀಪಾವಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಲಕ್ಷ್ಮಿ ಪೂಜೆ, ಗೋವುಗಳ ಪೂಜೆ, ಅಂಗಡಿ ಮನೆ ಮನೆಗಳಲ್ಲಿ ಮಾಡಲಾಗುತ್ತಿದ್ದು ಹೂವುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಳದಿ ಚೆಂಡು ಹೂವು ಬೆಳೆದ ಕ್ಷೇತ್ರ ಹೆಚ್ಚಾಗಿದೆ. ಸುಮಾರು 200 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಇದ್ದು ರೈತರ ಸಂಖ್ಯೆಯೂ ದ್ವಿಗುಣಗೊಂಡಿದೆ. ಚೆಂಡು ಹೂವುಗಳಲ್ಲಿ ದಟ್ಟ ಹಳದಿ, ಕಿತ್ತಳೆ, ಬಿಳಿ, ಕೇಸರಿ, ಕೆಂಪು, ಚಿನ್ನದ ಬಣ್ಣದ ತಳಿಗಳಿದ್ದು ಅತಿ ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ದರ ಇರುವ ಹಳದಿ ಬಣ್ಣದ ಚೆಂಡು ಹೂವುಗಳನ್ನೇ ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲ್ಲೂಕುಗಳಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಚೆಂಡು ಹೂವು ಬೆಳೆಯಲಾಗಿದೆ.
ಈ ಹಿಂದೆ ಚೆಂಡು ಹೂವು ಹಬ್ಬದ ಸಂದರ್ಭದಲ್ಲಿ ಮಾತ್ರ ಬಳಸಲ್ಪಡುವ ಕಾಲ ಒಂದಿತ್ತು. ಆದರೆ ಈಗ ಚೆಂಡುಹೂವು ಬಹು ಉಪಯೋಗಕ್ಕೆ ಬರುವ ಬೆಳೆಯಾಗಿ ಬಡ್ತಿ ಪಡೆದಿದೆ. ಬಟ್ಟೆಗೆ ಬಳಸುವ ಹಾಗೂ ಆಹಾರ ವಸ್ತುಗಳ ತಯಾರಿಕೆಯಲ್ಲಿ ಬಣ್ಣಕ್ಕೆ, ವಿವಿಧ ರೋಗಗಳ ಪರಿಹಾರಕ್ಕೆ ಆಯುರ್ವೇದ ಔಷಧ ತಯಾರಿಕೆಗೂ ಬಳಕೆಯಾಗುತ್ತಿದೆ.
ಹೂವಿನ ಜೊತೆಗೆ ಅದರ ಹಸಿರು ಗಿಡಗಳಿಗೂ ಬೇಡಿಕೆ ಬಂದಿದೆ. ಸಸಿಗಳನ್ನು ನಾಟಿ ಮಾಡಿದ 60-70 ದಿನಗಳಲ್ಲಿ ಚೆಂಡು ಹೂವು ಕಟಾವಿಗೆ ಬಂದು ಸುಮಾರು ಮೂರ್ನಾಲ್ಕು ತಿಂಗಳವರೆಗೂ ಕಟಾವು ಮುಂದುವರೆದಿರುತ್ತದೆ. ಎಕರೆಗೆ ಕನಿಷ್ಟ 30 ರಿಂದ 50 ಕ್ವಿಂಟಲ್‌ವರೆಗೂ ಹೂವಿನ ಇಳುವರಿ ಬರುತ್ತದೆ ಎಂದು ರೈತರು ಹೇಳುತ್ತಾರೆ.
ದಸರಾ, ದೀಪಾವಳಿಗೆಂದು ಚೆಂಡು ಹೂವು ಬೆಳೆಯುವ ಮತ್ತು ಒಪ್ಪಂದ ಕೃಷಿ ಆಧಾರದ ಮೇಲೆ ಕಾರ್ಖಾನೆಗೆ ಕೊಡುವುದಕ್ಕಾಗಿಯೂ ಬಹುತೇಕ ರೈತರು ಚೆಂಡುಹೂವಿನ ಬೇಸಾಯದಲ್ಲಿ ತೊಡಗಿದ್ದಾರೆ. ಅದೇ ರೀತಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಯಾವ ಬಣ್ಣ, ತಳಿ ಚೆಂಡುಹೂವಿಗೆ ಬೇಡಿಕೆ ಇದೆ ಎಂಬುದನ್ನು ರೈತರಿಗೆ ಪ್ರಾರಂಭದಲ್ಲಿಯೇ ತೋಟಗಾರಿಕೆ ಇಲಾಖೆ ಮಾಹಿತಿ ಒದಗಿಸಿದೆ.
‘ರೈತ, ವ್ಯಾಪಾರಸ್ಥರಿಗೆ ಇಲಾಖೆ ಸಂಪರ್ಕಕೊಂಡಿ’
ಚೆಂಡು ಹೂವು ಬೆಳೆಗಾರರು ಮತ್ತು ವ್ಯಾಪಾರಿಗಳು, ಗ್ರಾಹಕರ ಮಧ್ಯೆ ಸಂಪರ್ಕ ಇಲ್ಲದೆ ಹೂವು ಬೆಳೆದರೂ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಹಾನಿ ಅನುಭವಿಸಿದ ಉದಾಹರಣೆಗಳಿಗೆ ಕಮ್ಮಿ ಇಲ್ಲ. ಆದರೆ ಎರಡು ವರ್ಷದಿಂದ ಕೊಪ್ಪಳ ಜಿಲ್ಲೆ ತೋಟಗಾರಿಕೆ ಇಲಾಖೆ ಬೆಳೆಗಾರರು ಮತ್ತು ಕೊಳ್ಳುವವರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಬೆಳೆಗಾರರು, ಕ್ಷೇತ್ರ, ಅವರ ಮೊಬೈಲ್ ಸಂಖ್ಯೆಗಳ ಮಾಹಿತಿ ಪಡೆಯುವ ಇಲಾಖೆ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚುರಪಡಿಸುವುದು, ಸಾಮಾಜಿಕ ಜಾಲತಾಣಗಳ ಮೂಲಕ, ಇಲಾಖೆಯ ಅಧಿಕಾರಿಗಳ ಗ್ರೂಪ್‌ದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದೆ. ಇದರಿಂದ ಕಳೆದ ವರ್ಷ ರೈತರಿಗೆ ಅನುಕೂಲವಾಗಿತ್ತು. ಈ ಕಾರಣಕ್ಕೆ ಈ ವರ್ಷ ಹೆಚ್ಚಿನ ಸಂಖ್ಯೆಯ ರೈತರು ಚೆಂಡುಹೂವು ಬೆಳೆಯುವಲ್ಲಿ ಆಸಕ್ತಿ ತೋರಿಸಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಕೊಪ್ಪಳ ಜಿಲ್ಲೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ.
ಇಂಥ ಕ್ಷೇತ್ರದಲ್ಲಿ ಹೂವು ಬೆಳೆಯಲಾಗುತ್ತದೆ ಎಂಬ ಮಾಹಿತಿ ವ್ಯಾಪಾರಸ್ಥರಿಗೆ ತಿಳಿದರೆ ಖರೀದಿಗೆ ಬರುತ್ತಾರೆ. ರೈತರು ಮಾರುಕಟ್ಟೆ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ದೀಪಾವಳಿ ಹಬ್ಬದ ಕಾರಣ ಈಗಾಗಲೇ ಬೆಂಗಳೂರು, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ ರಾಜ್ಯದ ಇನ್ನೂ ಕೆಲ ಜಿಲ್ಲೆಗಳಿಂದಲೂ ವ್ಯಾಪಾರಿಗಳು ನೇರವಾಗಿ ರೈತರ ಬಳಿ ಬಂದು ಖರೀದಿಸುತ್ತಿದ್ದಾರೆ ಎಂದು ಹೇಳಿದರು.
**
ಚೆಂಡುಹೂವಿನ ಬೇಸಾಯದ ಜೊತೆಗೆ ಬೆಳೆಗಾರರ ಮತ್ತು ಖರೀದಿದಾರರ ನಡುವೆ ತೋಟಗಾರಿಕೆ ಇಲಾಖೆ ಸಂಪರ್ಕಕೊಂಡಿಯಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಬೆಳೆಗಾರರ ಮಾಹಿತಿಯನ್ನು ಭಿತ್ತಿಪತ್ರಗಳ ಮೂಲಕ ಎಲ್ಲೆಡೆ ಪ್ರಚಾರ ಪಡಿಸಲಾಗಿದೆ
ಕೃಷ್ಣ ಉಕ್ಕುಂದ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
ಮಳೆಯಾದರೆ ಹೂವಿನ ಬಣ್ಣ ಹಾಳಾಗುತ್ತದೆ. ಇದರಿಂದ ಮಾರುಕಟ್ಟೆಗೆ ಕಡಿಮೆ ಆವಕವಾಗಿ, ದರ ಹೆಚ್ಚಾಗುತ್ತದೆ. ಮಳೆಯಾಗದಿದ್ದರೆ ಬೆಲೆ ಕಡಿಮೆಯಾದರೂ ಹೆಚ್ಚಿನ ರೈತರಿಗೆ ಅನುಕೂಲವಾಗುತ್ತದೆ.
ಶಿವಪ್ಪ ಬಳಿಗಾರ, ಹೂವು ಬೆಳೆಗಾರ, ವಣಗೇರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.