ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಮೀನಮೇಷ

ಸರ್ಕಾರದ ಆದೇಶ ಕಡೆಗಣಿಸಿದ ಶಿಕ್ಷಣಾಧಿಕಾರಿಗಳಿಂದ ಅನಗತ್ಯ ವಿಳಂಬದ ಆರೋಪ
Published 8 ಸೆಪ್ಟೆಂಬರ್ 2023, 5:04 IST
Last Updated 8 ಸೆಪ್ಟೆಂಬರ್ 2023, 5:04 IST
ಅಕ್ಷರ ಗಾತ್ರ

ಕುಷ್ಟಗಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹಾಗೂ ವರ್ಗಾವಣೆಯಿಂದಾಗಿ ಖಾಲಿಯಾಗಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಜತೆಗೆ ನೇಮಕಾತಿ ಆದೇಶ ನೀಡಲು ಬಿಇಒ ಕಚೇರಿ ಸಿಬ್ಬಂದಿ, ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎಂಬ ಆರೋಪಗಳು ಕೇಳಿವೆ.

ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ವರ್ಗಾವಣೆ ನಂತರ 12 ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ದದ್ದರಿಂದ ಬೇರೆ ಶಾಲೆ ಶಿಕ್ಷಕರ ಎರವಲು ಸೇವೆ ಪಡೆಯಲಾಗುತ್ತಿದೆ. ಶಾಲೆಗಳು ಆರಂಭವಾಗಿ 3 ತಿಂಗಳು ಕಳೆದರೂ ಶಿಕ್ಷಕರಿಲ್ಲದೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಮಸುಕಾಗುತ್ತಿರುವ ಬಗ್ಗೆ ಪಾಲಕರು ಕಳವಳವ್ಯಕ್ತಪಡಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಗುಣಮಟ್ಟದ ಶಿಕ್ಷಣದ ಬಲವರ್ಧನೆಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆಗಸ್ಟ್‌ 18ರಂದು ಆದೇಶ ನೀಡಿದ್ದರು. ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ಶಿಕ್ಷಕರ ಒಟ್ಟು 1,567 ಹುದ್ದೆಗಳ ಪೈಕಿ 729 ಶಿಕ್ಷಕರ ಸ್ಥಾನಗಳು ಖಾಲಿ ಉಳಿದಿವೆ. 1ನೇ ಹಂತದಲ್ಲಿ ತಾಲ್ಲೂಕಿನಲ್ಲಿ 285 ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿತ್ತು. 2ನೇ ಹಂತದಲ್ಲಿ ಮತ್ತೆ 219 ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮತಿ ದೊರೆತಿದೆ. ಮೊದಲ ಹಂತದ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಆದರೆ 2ನೇ ಹಂತದ ನೇಮಕಕ್ಕೆ ಅನುಮತಿ ದೊರೆತಿದ್ದು, ಈವರೆಗೆ ಕೆಲವೇ ಶಾಲೆಗಳಿಗೆ ಮಾತ್ರ ಅತಿಥಿ ಶಿಕ್ಷಕರ ನೇಮಕವಾಗಿದೆ.

ಸಬೂಬು: ತಾಲ್ಲೂಕಿನಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದ ಬೇಡಿಕೆಗೆ ಅನುಗುಣವಾಗಿ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಗೆ ಬೇಡಿಕೆ ಪತ್ರ ಸಲ್ಲಿಸಿದ್ದಾರೆ. ಸಿಆರ್‌ಪಿಗಳಿಂದಲೂ ಪೂರಕ ವರದಿ ಸಲ್ಲಿಕೆಯಾಗಿದೆ. ಸರ್ಕಾರ ಅನುಮತಿ ನೀಡಿ 3 ವಾರ ಕಳೆದರೂ ನೇಮಕಕ್ಕೆ ಬಿಇಒ ಅವರು ಮುಂದಾಗಿಲ್ಲ.

ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ದಿನಾಂಕದಿಂದ ಈ ಪ್ರಕ್ರಿಯೆಯ ಕೊನೆಯ ಹಂತದವರೆಗಿನ ಎಲ್ಲ ಮಾಹಿತಿಯನ್ನೂ ಸಂಬಂಧಿಸಿದ ಶಾಲೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಆದರೆ ಎಲ್ಲಿಯೂ ಮಾಹಿತಿ ಪ್ರಕಟಿಸಿಲ್ಲ ಎಂದು ದೂರಿದ್ದಾರೆ.

ಅನೇಕ ಅರ್ಹ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು, ಅತಿಥಿ ಶಿಕ್ಷಕರ ನೇಮಕವಾಗುತ್ತದೆ ಎಂದು ಕಾದು ಕುಳಿತಿದ್ದಾರೆ. ಈಗಾಗಲೇ 3 ತಿಂಗಳು ಗತಿಸಿದ್ದು, ಮುಂದಾದರೂ ಅವಕಾಶ ಸಿಕ್ಕರೆ ಕೆಲ ತಿಂಗಳವರೆಗಾದರೂ ಕುಟುಂಬಕ್ಕೆ ಅರ್ಥಿಕ ನೆರವು ದೊರೆಯುತ್ತದೆ. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೂ ಅನುಕೂಲವಾಗುತ್ತದೆ. ತ್ವರಿತ ನೇಮಕಕ್ಕೆ ಅಧಿಕಾರಿಗಳಿಗೆ ಇಲಾಖೆ ಮೇಲಧಿಕಾರಿಗಳು ಸೂಚನೆ ನೀಡಬೇಕಿದೆ ಎಂದು ಅಭ್ಯರ್ಥಿಗಳಾದ ನಾಗರಾಜ ಗುಡದೂರು, ಬಾಲನಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT