ಶುಕ್ರವಾರ, ಆಗಸ್ಟ್ 19, 2022
25 °C
ದೊಡ್ಲ ಹಾಲಿನ ಡೇರಿಯ ತೆಲುಗು ಪ್ರೇಮ: ಆಕ್ರೋಶ

ಕೊಪ್ಪಳ: ಕನ್ನಡ ವಿರೋಧಿ ಕಾರ್ಖಾನೆ ಮುಚ್ಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯ ದೊಡ್ಲ ಹಾಲಿನ ಡೈರಿಯಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದನ್ನು  ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ)ದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಬೂದಗುಂಪಾ ಹತ್ತಿರವಿರುವ ದೊಡ್ಲ ಹಾಲಿನ ಡೈರಿಯಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಲಿನ ಡೈರಿಯ ಯಾವುದೇ ರಶೀದಿ, ವಾಹನಗಳ ಸಾಗಾಣಿಕೆಗೆ ಬಳಸುವ ದಾಖಲೆಗಳು ಸೇರಿ ಇತ್ಯಾದಿಗಳನ್ನು ಕನ್ನಡದಲ್ಲಿ ಬಳಸದೇ ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಬಳಸುತ್ತಿರುವುದು ಕನ್ನಡಕ್ಕೆ ಮಾಡಿದ ಮಹಾದ್ರೋಹವಾಗಿದೆ ಎಂದು ಸಂಘಟನೆಯ ಮುಖಂಡರು ದೂರಿದ್ದಾರೆ.

ಕನ್ನಡನಾಡಿನ ನೆಲ, ಜಲವನ್ನು ಬಳಸಿಕೊಂಡು ನಿರ್ಮಾಣವಾಗಿರುವ ಡೈರಿಯು ಸ್ಥಳೀಯ ಕನ್ನಡಿಗರಿಗೆ ಉದ್ಯೋಗವಕಾಶಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದೇ ಅನ್ಯರಾಜ್ಯದವರಿಗೆ ಉನ್ನತ ಹುದ್ದೆಗಳನ್ನು ನೀಡಿ, ಸ್ಥಳೀಯ ಕನ್ನಡಿಗರನ್ನು ಕೂಲಿ ಕೆಲಸಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಈ ಕುರಿತು ಅನೇಕ ಹೋರಾಟ ಮಾಡಿದರೂ ಅವರು ಕ್ಯಾರೆ ಅನ್ನುತ್ತಿಲ್ಲ. ಅಲ್ಲದೆ ಜಿಲ್ಲಾಡಳಿತ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಅರಣ್ಯ ಇಲಾಖೆಯ ಜಾಗೆಯನ್ನು ಒತ್ತುವರಿ ಮಾಡಿಕೊಂಡು ಡೈರಿ ನಿರ್ಮಿಸಿದ್ದಾರೆ. ಡೈರಿಯ ಸುತ್ತಮುತ್ತಲೂ ಬೆಳೆದಿರುವ ಮರಗಳನ್ನು ಕಟ್ಟಿಗೆಗಳಿಗಾಗಿ ಕಡಿಯುವ ಮೂಲಕ ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪಂಪಣ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಈ ಡೈರಿಯಲ್ಲಿ ತಯಾರಾಗುವ ಹಾಲಿನಲ್ಲಿ ಕೆಮಿಕಲ್‌ ಸೇರ್ಪಡೆಗೊಳಿಸುತ್ತಿದ್ದಾರೆ ಎಂಬ ಅನುಮಾನ ಇದೆ. ಇದರ ಬಗ್ಗೆ ತನಿಖೆಯಾಗಬೇಕಾಗಿದೆ ಎಂದು ಆಗ್ರಹಿಸಿದರು.

ಡೈರಿಯಲ್ಲಿ ಕನ್ನಡ ಬಳಕೆ ಮಾಡಬೇಕು, ಸ್ಥಳೀಯರಿಗೆ ಉದ್ಯೋಗ ನೀಡಬೇಕು, ಮರಗಳ ಮಾರಣಹೋಮ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲಾಧಿಕಾರಿ ಕೂಡಲೇ ಈ ದೊಡ್ಲ ಹಾಲಿನ ಡೈರಿಯ ಬಗ್ಗೆ ತನಿಖೆ ನಡೆಸಿ, ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು