ಕೊಪ್ಪಳ: ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ರಾಜ್ಯ ಸರ್ಕಾರ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಸಾವಿರಾರು ಜನ ಮಾನವ ಸರಪಳಿ ನಿರ್ಮಿಸಿದರು. ಆದರೆ ಜಿಲ್ಲೆಯ ಗಡಿಭಾಗ ಅಳವಂಡಿ ವ್ಯಾಪ್ತಿಯ ಬೆಳಗಟ್ಟಿಯಿಂದ ಮುನಿರಾಬಾದ್ ಡ್ಯಾಂ ತನಕ ಪೂರ್ಣವಾಗಿ ಸರಪಳಿ ಬೆಸೆಯಲು ಸಾಧ್ಯವಾಗಲಿಲ್ಲ.
ಅನೇಕರಿಗೆ ಕಾರ್ಯಕ್ರಮ ಏನು ಎನ್ನುವುದು ಅರ್ಥವಾಗುವಷ್ಟರಲ್ಲಿಯೇ ಮುಗಿದು ಹೋಗಿತ್ತು. ಮಾನವ ಸರಪಳಿ 53 ಸಾವಿರಕ್ಕೂ ಹೆಚ್ಚು ಜನರಿಂದ ಜಿಲ್ಲೆಯನ್ನು ಬೆಸೆಯಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿ ಅನೇಕ ಅಧಿಕಾರಿಗಳು ವಿವಿಧ ಹಂತಗಳಲ್ಲಿ ಸಭೆಗಳನ್ನು ನಡೆಸಿದ್ದರು.
ಬೆಳಗಟ್ಟಿ ಗ್ರಾಮದಿಂದ ಪ್ರಾರಂಭವಾದ ಜಿಲ್ಲೆಯ ಮಾನವ ಸರಪಳಿ ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಕೊಪ್ಪಳ ನಗರ, ಗಿಣಿಗೇರಾ, ಹೊಸಳ್ಳಿ ಮಾರ್ಗವಾಗಿ ಕೊಪ್ಪಳ ಭೌಗೋಳಿಕ ಸರಹದ್ದಾದ ಮುನಿರಾಬಾದ್ ಜಲಾಶಯ ತನಕ ಜರುಗಬೇಕಿತ್ತು. ಆದರೆ ಕೆಲವು ಕಡೆ ಮಾತ್ರ ಪ್ರಜಾಪ್ರಭುತ್ವ ದಿನದ ಸಂಭ್ರಮ ಕಂಡುಬಂದರೆ, ಬಹುತೇಕ ಕಡೆ ನೀರಸವಾಗಿತ್ತು. ಬಹಳಷ್ಟು ಕಡೆ ಜನ ಒಂದೇ ಕಡೆ ಗುಂಪುಗುಂಪಾಗಿ ನಿಂತುಕೊಂಡಿದ್ದರು. ಬೆಳಗಟ್ಟಿ, ಹಟ್ಟಿ- ರಘುನಾಥನಹಳ್ಳಿ , ಕಂಪ್ಲಿ ಕ್ರಾಸ್‌ನಿಂದ ಮೈನಳ್ಳಿ ನಡುವಿನ ರಸ್ತೆಯ ಕೆಲವೆಡೆ ಜನರ ಸಂದಣಿ ಇಲ್ಲದಂತಾಗಿತ್ತು.
ಇಲ್ಲಿನ ಅಶೋಕ ವೃತ್ತದಲ್ಲಿ ನಡೆದ ಕಾರ್ಯಕ್ರಮ ಸಂಭ್ರಮದಿಂದ ಕೂಡಿತ್ತು. ವಿವಿಧ ಕಲಾ ತಂಡಗಳು ವೇಷಭೂಷಣ ತೊಟ್ಟು ಕಾರ್ಯಕ್ರಮಕ್ಕೆ ರಂಗು ತುಂಬಿದವು. ಮೊದಲು ನಾಡಗೀತೆ ಹಾಡಿ ಸಂವಿಧಾನದ ಪೀಠಿಕೆ ಓದಲಾಯಿತು. ಗ್ಯಾರಂಟಿ ಯೋಜನೆ ಫಲಾನುಭವಿಗಳು, ವಿದ್ಯಾರ್ಥಿಗಳು, ಎನ್‌ಜಿಒಗಳ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ‘ಸೆಪ್ಟೆಂಬರ್ 15ರ ವಿಶೇಷ ಎನೆಂಬುದು ರಾಜ್ಯದ ಜನರಿಗೆ ಗೊತ್ತಾಗುವಂತೆ ಮಾಡಲು ಮಾನವ ಸರಪಳಿ ನಡೆಸಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು ನಮ್ಮ ಉದ್ದೇಶವಾಗಿದೆ' ಎಂದರು. ಈ ಕಾರ್ಯಕ್ರಮ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಬುನಾದಿಯಾಗಿದೆ ಎಂದರು. ವಿದ್ಯಾರ್ಥಿಗಳ ಜೊತೆ ಕೈ ಜೋಡಿಸಿ ಮಾನವ ಸರಪಳಿ ನಿರ್ಮಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೆಚ್ಚುವರಿ ಎಸ್. ಪಿ. ಹೇಮಂತ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕೊಪ್ಪಳದ ಅಶೋಕ ಸರ್ಕಲ್‌ನಲ್ಲಿ ಕಲಾ ತಂಡಗಳ ರಂಗು ಜಿಲ್ಲಾಡಳಿತ ಭವನದ ಆವರಣದಲ್ಲಿ ಸಸಿನೆಟ್ಟ ಜನಪ್ರತಿನಿಧಿಗಳು ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪನಮನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.