ಕುಷ್ಟಗಿ: ಹಣ್ಣು ಬೆಳೆಗಾರರಿಗೆ ತಾಂತ್ರಿಕ, ಆರ್ಥಿಕ ಅನುಕೂಲಗಳನ್ನು ಒದಗಿಸಿಕೊಡುವ ಮಹತ್ವದ ಉದ್ದೇಶದಿಂದ ಎರಡು ದಶಕಗಳ ಹಿಂದೆ ಸ್ಥಾಪನೆಗೊಂಡ ಇಲ್ಲಿಯ ತಾಲ್ಲೂಕು ತೋಟದ ಬೆಳೆಗಾರರ ಮಾರಾಟ, ಸಂಸ್ಕರಣೆ ಮತ್ತು ಸಹಕಾರ ಸಂಘ ನಿಷ್ಕ್ರಿಯಗೊಂಡಿದ್ದು ಸಂಘದ ಕಟ್ಟಡ ಪಾಳುಬಿದ್ದಿದೆ.
ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಕಚೇರಿ ಕಟ್ಟಡ ಸದ್ಯ ಭೂತದ ಬಂಗಲೆಯಂತಾಗಿದೆ. ಸಂಘದ ರಚನೆ, ಕಟ್ಟಡ ನಿರ್ಮಾಣದ ವಿಷಯದಲ್ಲಿ ಆಗ ಮುತುವರ್ಜಿ ವಹಿಸಿದ್ದ ಪ್ರಮುಖರು ನಂತರ ನಿಷ್ಕಾಳಜಿ ವಹಿಸಿದ್ದರಿಂದ ಸಂಘ ರಚನೆಯ ಉದ್ದೇಶ ಮತ್ತು ಸರ್ಕಾರದ ಜೊತೆಗೆ ಅನುದಾನ ವ್ಯರ್ಥವಾಗಿದೆ. ಸಮಿತಿ ನೀಡಿದ ಬೆಲೆಬಾಳುವ ನಿವೇಶನವೂ ಪ್ರಯೋಜನಕ್ಕಿಲ್ಲದಂತಾಗಿದೆ ಎಂಬ ಆರೋಪ ಸಾರ್ವಜನಿಕರದು.
2000ನೇ ಇಸ್ವಿ ಆಸುಪಾಸಿನಲ್ಲಿ ದಾಳಿಂಬೆ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣು ಬೆಳೆಗಳ ಬೇಸಾಯ ಮತ್ತು ಉತ್ಪಾದನೆಯಲ್ಲಿ ಈ ತಾಲ್ಲೂಕು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅಷ್ಟೇ ಅಲ್ಲ ದಾಳಿಂಬೆ ಉತ್ಪಾದನೆಯಲ್ಲಿ ಕುಷ್ಟಗಿಯ ಹೆಸರು ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಚಿರಪರಿಚಿತವಾಗುವಷ್ಟರ ಮಟ್ಟಿಗೆ ತಾಲ್ಲೂಕು ಹೆಸರಾಗಿತ್ತು.
ಈ ಕಾರಣಕ್ಕೆ ಹಣ್ಣು ಬೆಳೆಗಾರರನ್ನು ಸಂಘಟನೆಯ ವ್ಯಾಪ್ತಿಗೆ ಒಳಪಡಿಸುವುದು, ಹಣ್ಣುಗಳ ದಾಸ್ತಾನಿಗೆ ಮತ್ತು ಮೌಲ್ಯವರ್ಧನೆಗಾಗಿ ಸಂಸ್ಕರಣೆ ಮಾಡುವುದಕ್ಕೆ ಅನುಕೂಲಕ ಕಲ್ಪಿಸಿ ಬೆಳೆಗಾರರ ಅರ್ಥಿಕ ಸದೃಢತೆಯ ಆಶಯದಿಂದ ಸಂಘ ರಚನೆಗೊಂಡಿತ್ತು.
ಸಂಘದ ಕಚೇರಿ ಕಟ್ಟಡದ ಅಗತ್ಯ ಇದ್ದುದರಿಂದ ಇಲ್ಲಿಯ ಎಪಿಎಂಸಿ ನಿವೇಶನ ಮಂಜೂರು ಮಾಡಿತ್ತು. ಸಂಘದ ಕೋರಿಕೆಯಂತೆ 2005-06ರಲ್ಲಿ ಆಗಿನ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಈಗ ಕೆಕೆಆರ್‌ಡಿಬಿ) ₹ 2 ಲಕ್ಷ ಅನುದಾನ ಒದಗಿಸಿದ್ದರಿಂದ 2008ರಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿತ್ತು. ಆದರೆ ಸದ್ಯ ಈ ಕಟ್ಟಡದ ಸ್ಥಿತಿ ಶೋಚನಿಯವಾಗಿದೆ.
ಇಪ್ಪತ್ತು ವರ್ಷಗಳಿಂದ ಚಟುವಟಿಕೆಯಿಲ್ಲ. ಮುಳ್ಳುಕಂಟಿಗಳು ಇಡೀ ಕಟ್ಟಡವನ್ನು ಆವರಿಸಿವೆ. ಜನ ಇಲ್ಲಿಯೇ ಮಲಮೂತ್ರ ವಿಸರ್ಜಿಸುತ್ತಿದ್ದು ಮೂಗು ಮುಚ್ಚಿಕೊಂಡು ಹೋಗುವಷ್ಟರ ಮಟ್ಟಿಗೆ ಹೊಲಸು ಆವರಿಸಿದೆ. ನಾಯಿ, ಹಂದಿಗಳ ತಾಣ ಅಷ್ಟೇ ಅಲ್ಲ ಮದ್ಯ ವ್ಯಸನಿಗಳು ಸೇರಿದಂತೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಕಟ್ಟಡ ಅನಾಥವಾಗಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಎಪಿಎಂಸಿ ವರ್ತಕರು ವಿವರಿಸಿದರು. ಸಂಘದ ಅಧ್ಯಕ್ಷರಾಗಿರುವ ಎಸ್.ಎಚ್. ಹಿರೇಮಠ ಅವರನ್ನು ಮಾಹಿತಿಗಾಗಿ ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.
ಎರಡು ಬಾರಿ ಅನುದಾನ: ಈ ಬಗ್ಗೆ ಮಾಹಿತಿ ನೀಡಿದ ಸಂಘದ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ದಾಳಿಂಬೆ ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ 2005-06ರಲ್ಲಿ ತಾವು ಅಧ್ಯಕ್ಷರಾಗಿದ್ದಾಗ ₹ 2 ಲಕ್ಷ ಬಿಡುಗಡೆಯಾಗಿತ್ತು. ಆದರೆ ಕಟ್ಟಡ ಸಣ್ಣದಾಗಿದ್ದರಿಂದ 2008-09ರಲ್ಲಿ ಹೈ.ಕ ಮಂಡಳಿಯ ₹ 4 ಲಕ್ಷ ಅನುದಾನದಲ್ಲಿ ಹಳೆಯ ಕಟ್ಟಡದ ಮುಂದೆ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಯಿತು. ಆದರೆ ಆಗಿನ ಭೂಸೇನಾ ನಿಗಮದ ಎಂಜಿನಿಯರ್‌ಗಳು ಅವೈಜ್ಞಾನಿಕ ರೀತಿಯಲ್ಲಿ ಕಾಲಂ ಅಳವಡಿಸಿದ ಪರಿಣಾಮ ಕಟ್ಟಡ ಅರ್ಧಕ್ಕೆ ನಿಂತಿದೆ. ನಂತರ ಪದಾಧಿಕಾರಿಗಳೂ ಬದಲಾದರು. ಈಗ ಕೆಲಸ ಪುನರರಾಂಭಿಸಬೇಕೆಂದರೆ ಇಡೀ ಕಟ್ಟಡವನ್ನು ನೆಲಸಮಮಾಡಿ ಹೊಸದಾಗಿ ನಿರ್ಮಿಸಬೇಕು. ಈ ಬಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
‘ಸಂಘದ ಮುಖ್ಯಸ್ಥರಿಗೆ ನೋಟಿಸ್’
ಒಳ್ಳೆಯ ಉದ್ದೇಶಕ್ಕೆ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತೋಟದ ಬೆಳೆಗಾರರ ಸಂಘಕ್ಕೆ ನಿವೇಶನ ಒದಗಿಸಿತ್ತು. ಆದರೆ ಅಲ್ಲಿ ಚಟುವಟಿಕೆಗಳು ನಡೆಯುತ್ತಿಲ್ಲ. ಕಟ್ಟಡ ಹಾಳು ಬಿದ್ದಿದೆ. ಇದು ಸಮಿತಿ ಪ್ರಾಂಗಣಕ್ಕೆ ಶೋಭೆ ತರುವ ಸಂಗತಿಯಲ್ಲ. ಹಾಗಾಗಿ ಸಂಘದ ಅಧ್ಯಕ್ಷರಿಗೆ ನೋಟಿಸ್ ನೀಡಿ ಮಾಹಿತಿ ಪಡೆಯುವುದಾಗಿ ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟರ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.