ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಿರಲಿ

ದತ್ತಿ ಉಪನ್ಯಾಸದಲ್ಲಿ ಸಿದ್ರಾಮಪ್ಪ ವಂದಾಲಿ ಸಲಹೆ
Published 27 ಮಾರ್ಚ್ 2024, 16:24 IST
Last Updated 27 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ಕುಷ್ಟಗಿ: ‘ಕಲ್ಯಾಣ ಕರ್ನಾಟಕ ಭಾಗದ ಅನೇಕ ಜನರು ಈ ಭಾಗದ ವಿಮೋಚನೆ, ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಅಂಥವರನ್ನು ಭವಿಷ್ಯದ ಪೀಳಿಗೆ ಸ್ಮರಿಸಬೇಕು ಮತ್ತು ದೇಶದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಬೇಕು’ ಎಂದು ಸಿದ್ರಾಮಪ್ಪ ವಂದಾಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ವಿಜಯಚಂದ್ರಶೇಖರ ಬಿ.ಇಡಿ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸೋಮಪ್ಪ ಚಳಗೇರಿ ಅವರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ‘ಕಲ್ಯಾಣ ಕರ್ನಾಟಕದಲ್ಲಿನ ಸ್ವಾತಂತ್ರ್ಯ ಹೋರಾಟ’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ನಿಜಾಮ ಪ್ರಭುತ್ವದ ವಿರುದ್ಧ ನಡೆದ ಜನರ ಹೋರಾಟ ಅತ್ಯಂತ ಪ್ರಮುಖವಾದದ್ದು, ಜನರಲ್ಲಿ ಜಾಗೃತಿ ಮೂಡಿಸಿದ ಲೆಕ್ಕವಿಲ್ಲದಷ್ಟು ಜನ ಮನೆಯನ್ನೂ ತೊರೆದು ಹೋರಾಟದಲ್ಲಿ ಧುಮಿಕಿದ್ದು ಇತಿಹಾಸ. ಅಂಥವರಲ್ಲಿ ಸೋಮಪ್ಪ ಚಳಗೇರಿ ಅವರೂ ಒಬ್ಬರು. ಕಷ್ಟಪಟ್ಟು ನಮಗೆ ಗಳಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ಅಷ್ಟೇ ಸವಾಲಿನ ಕೆಲಸವೂ ಆಗಿದೆ. ಇಂಥ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ,‘ಕನ್ನಡ ಭಾಷೆ, ಈ ಭಾಗದ ನೆಲ, ಜಲ ವಿಷಯದಲ್ಲಿ ಕನ್ನಡಗರು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ಒಗ್ಗಟ್ಟಾಗಿರಬೇಕು. ಸಾಹಿತ್ಯ ಪರಿಷತ್ ನಡೆಸುತ್ತ ಬಂದಿರುವ ಚಟುವಟಿಕೆಗಳು ಕನ್ನಡದ ಬೆಳವಣಿಗೆಗೆ ಪೂರಕವಾಗಿವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ದತ್ತಿದಾನಿಗಳ ಸಂಖ್ಯೆ ಹೆಚ್ಚಿದರೆ ಕನ್ನಡ ಸಾಹಿತ್ಯ, ಪರಂಪರೆ, ಸಂಸ್ಕೃತಿ, ಇತಿಹಾಸ, ಸ್ವಾತಂತ್ರ್ಯ ಹೋರಾಟ ಇಂಥ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅನುಕೂಲವಾಗುತ್ತದೆ. ಕೇವಲ ₹25 ಸಾವಿರ ದತ್ತಿ ನಿಧಿ ನೀಡಿದರೆ ಸಾಹಿತ್ಯ ಪರಿಷತ್‌ ಅಸ್ತಿತ್ವದಲ್ಲಿ ಇರುವವರೆಗೂ ಪ್ರತಿ ವರ್ಷ ತಮ್ಮ ಹಿರಿಯರ ಸ್ಮರಣಾರ್ಥ ವಿವಿಧ ವಿಷಯಗಳ ಮೇಲೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಅಮೃತರಾಜ ಜ್ಞಾನಮೋಠೆ ಇತರರು ಕಾರ್ಯಕ್ರಮ ಕುರಿತು ದತ್ತಿ ದಾನಿ ವಕೀಲ ಫಕೀರಪ್ಪ ಚಳಗೇರಿ, ಪ್ರಾಚಾರ್ಯ ಶರಣಬಸಪ್ಪ ತಿಪ್ಪಾಶೆಟ್ಟಿ, ನಬಿಸಾಬ್ ಕುಷ್ಟಗಿ ಇತರರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಸದಸ್ಯ ಜೀವನಸಾಬ್ ವಾಲೀಕಾರ ಅವರನ್ನು ಸನ್ಮಾನಿಸಲಾಯಿತು. ಪ್ರಶಿಕ್ಷಣಾರ್ಥಿ ಶಿವಕುಮಾರ ನಿರೂಪಿಸಿದರು. ಪರಿಷತ್ತಿನ ದೋಟಿಹಾಳ ಹೋಬಳಿ ಘಟಕದ ಅಧ್ಯಕ್ಷ ರೆಹಮಾನ್ ಮಾರನಬಸರಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT