ನಿಯತ್ತಿನಿಂದ ಕೆಲಸ ಮಾಡಿ

ಕುಷ್ಟಗಿ: ‘ಕೈ ತುಂಬ ಸಂಬಳ ಪಡೆಯುವ ಅಧಿಕಾರಿಗಳು, ನೌಕರರು ಲಂಚಕ್ಕೆ ಆಸೆಪಡದೆ ನಿಯತ್ತಿನಿಂದ ಕೆಲಸ ಮಾಡಬೇಕು’ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಎಂ.ಸಿ.ಶಿವಕುಮಾರ ಸಲಹೆ ನೀಡಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ‘ಜನಸಂಪರ್ಕ ಸಭೆ’ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭ್ರಷ್ಟಾಚಾರಿಗಳೊಂದಿಗೆ ಜನ ಹೊಂದಾಣಿಕೆ ಮಾಡಿಕೊಂಡರೆ ಯಾವ ಇಲಾಖೆಯಿಂದಲೂ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗದು’ ಎಂದು ಹೇಳಿದರು.
‘ಲಂಚ ಎಂಬುದು ವಿಷವರ್ತುಲ ಇದ್ದಂತೆ. ಲಕ್ಷಾಂತರ ಹಣ ಕೊಟ್ಟು ಉದ್ಯೋಗ ಗಿಟ್ಟಿಸಿಕೊಳ್ಳುವವರು ಕೆಲಸಕ್ಕೆ ಸೇರಿದ ನಂತರ ಲಂಚದ ಮೂಲಕ ಹಣ ಸಂಗ್ರಹಣೆಗೆ ಮುಂದಾಗುತ್ತಾರೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಮಾಡುವ ವ್ಯಾಮೋಹಕ್ಕೆ ಸಿಲುಕಿ ಕೊನೆಗಳಿಯಲ್ಲಿ ಸಿಕ್ಕಿಹಾಕಿಕೊಂಡು ಬದುಕಿನುದ್ದಕ್ಕೂ ಪಡಬಾರದ ಕಷ್ಟ ಪಡುತ್ತಾರೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಇಂಥ ಅನೇಕ ಉದಾಹರಣೆಗಳಿವೆ. ಮಿತಿಯಲ್ಲಿ ಬದುಕಬೇಕು. ಅತಿಯಾಸೆ ಒಳ್ಳೆಯದಲ್ಲ’ ಎಂದು ಹೇಳಿದರು.
‘ಈ ಹಿಂದೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವ ನೌಕರರನ್ನು ಕರೆಯಿಸಿಕೊಳ್ಳುವ ಪರಿಪಾಠ ಇತ್ತು. ಆದರೆ ಈಗ ಕಾಲ ಬಹಳಷ್ಟು ಬದಲಾಗಿದೆ. ಯಾರೋ ವ್ಯಕ್ತಿಗಳು ತಮಗೆ ಬೇಕಾದವರನ್ನು ತಂದು ಕೂಡಿಸುತ್ತಾರೆ. ಬೇಡವಾದವರ ಎತ್ತಂಗಡಿಗೆ ಪ್ರಯತ್ನಿಸುತ್ತಾರೆ’ ಎಂದರು.
ಅಧಿಕಾರಿಗಳು ಲಂಚ ಕೇಳಿದರೆ ಸಾರ್ವಜನಿಕರು ಎಸಿಬಿಗೆ ದೂರು ನೀಡಬಹುದು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಎಂ.ಸಿದ್ದೇಶ ಮಾತನಾಡಿದರು.
ಎಸಿಬಿ ಇನ್‌ಸ್ಪೆಕ್ಟರ್ ಎಸ್.ಎಸ್.ಬೀಳಗಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ, ಎಸಿಬಿ ಠಾಣೆ ಸಿಬ್ಬಂದಿ ಶಿವಾನಂದ, ಆನಂದ ಬಸ್ತಿ, ಬಸವರಾಜ ಪಾಟೀಲ ಹಾಗೂ ಸವಿತಾ ಸಜ್ಜನ ಇದ್ದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.