ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ರಂಗ ಕಲಾವಿದರ ‘ಕಾಲುವೆ ನಾಟಕ’...

ಭಾವೈಕ್ಯತಾ ವೇದಿಕೆಯ ಕಲಾವಿದರ ವಿಭಿನ್ನ ನಡೆ, ಸಾಮಾಜಿಕ ಕಳಕಳಿಯ ಸಂದೇಶ
Published 25 ಫೆಬ್ರುವರಿ 2024, 5:19 IST
Last Updated 25 ಫೆಬ್ರುವರಿ 2024, 5:19 IST
ಅಕ್ಷರ ಗಾತ್ರ

ಕೊಪ್ಪಳ: ಅಲ್ಲಿನ ತರಕಾರಿ ಸಂತೆಯಲ್ಲಿ ತುಂಬಿದ್ದ ಜನರೆಲ್ಲ ತದೇಕ ಚಿತ್ತದಿಂದ ನೋಡುವಂತೆ ಮೊಳಗಿದ ‘ನಮ್ಮ ಕಾಲುವೆ ನಮ್ಮದೇ ಜವಾಬ್ದಾರಿ, ಸಂಘ ನಮ್ಮದು ನೀರೂ ನಮ್ಮದು’ ಎನ್ನುವ ಧ್ವನಿ ಏಕಕಾಲಕ್ಕೆ ಗಮನ ಸೆಳೆಯಿತು. ಏನಿದು? ಸಂತೆಯ ನಡುವೆ ಘೋಷಣೆ ಮೊಳಗಿಸುತ್ತಿರುವವರು ಯಾರು? ಎನ್ನುವ ಪ್ರಶ್ನೆ ಹರಿದಾಡಿತು. ಅವರಲ್ಲೊಂದು ಕುತೂಹಲವೂ ಮನೆ ಮಾಡಿತ್ತು.

ಈ ಚಿತ್ರಣ ಮೂರ್ನಾಲ್ಕು ದಿನಗಳ ಹಿಂದೆ ಕಂಡು ಬಂದಿದ್ದು ಕೊಪ್ಪಳ ತಾಲ್ಲೂಕಿನ ಬಂಡಿ ಹರ್ಲಾಪುರದಲ್ಲಿ. ಜನ ಚೌಕಾಸಿ ಮಾಡುತ್ತ ತಮಗೆ ಬೇಕಾದ ತರಕಾರಿಗಳನ್ನು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದರು. ವ್ಯಾಪಾರಿಗಳು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆಗ ಮೊಳಗಿದ ನೀರಿನ ಕುರಿತ ಜಾಗೃತಿಯ ಘೋಷಣೆಗಳು ಗಮನ ಸೆಳೆದವು.

ವಿಜಯನಗರ ಕಾಲುವೆ ಆಧುನೀಕರಣ ಯೋಜನೆ ಭಾಗವಾಗಿ ಕಾಲುವೆ ಮಹತ್ವ, ನೀರು ಬಳಕೆ ಹಾಗೂ ಉಳಿಸುವ ಅಗತ್ಯತೆ ಬಗ್ಗೆ ಹೊಸಪೇಟೆಯ ಭಾವೈಕ್ಯತಾ ವೇದಿಕೆಯ ಕಲಾವಿದರು ನಡೆಸುತ್ತಿರುವ ಸರಣಿ ಬೀದಿ ನಾಟಕ ಅಂಗವಾಗಿ ನಡೆದ ಪ್ರಚಾರದ ಕಾರ್ಯಕ್ರಮವದು. ಹುಲಿಗಿ, ಶಿವಪುರ ಮತ್ತು ಬಂಡಿ ಹರ್ಲಾಪುರ ನೀರು ಬಳಕೆದಾರರ ಸಹಕಾರ ಸಂಘದವರು ಇದಕ್ಕೆ ಜೊತೆಯಾಗಿದ್ದರು.

ನೀರು ಬಳಕೆಯ ಜಾಗೃತಿ ಮೂಡಿಸಲು ಕಾರ್ಯಾಗಾರಗಳು, ಕಾರ್ಯಕ್ರಮಗಳು ನಡೆಯವುದು ಸಾಮಾನ್ಯ. ಆದರೆ ಈ ಕಲಾವಿದರ ತಂಡ ಊರೂರು ಅಲೆದಾಡಿ ಕಡಿಮೆ ಸಮಯದಲ್ಲಿ ಜನರನ್ನು ಸೆಳೆಯುವ ರೀತಿಯಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಇನ್‌ಸಾಫ್‌, ಸಾಹಿರಾ, ದುರ್ಗಾ, ಮಹಾಂತೇಶ, ಪೂರ್ಣಿಮಾ, ಹರಿಕಥೆ ಮಂಜು, ಶೇಖಾವಲಿ, ಉಮಾ ಮಹೇಶ್ವರ, ಎಚ್. ಸಂತೋಷ್‌ ಕುಮಾರ್‌ ಅಭಿನಯಿಸುತ್ತಿದ್ದಾರೆ.

ಬೀದಿ ನಾಟಕದ ಮೂಲಕ ಮನರಂಜನೆಯ ಜೊತೆಗೆ ಜನರಲ್ಲಿ ವಿಜಯನಗರ ಕಾಲುವೆಗಳ ಸಂರಕ್ಷಣೆಯ ಅರಿವು ಮೂಡಿಸಲಾಗುತ್ತಿದೆ. ಅಭಿನಯದ ವೇಳೆ ಕಲಾವಿದರು ಬಳಸುವ ಸ್ಥಳೀಯ ಮಾತಿನ ಚೌಕಟ್ಟು, ಹಾಡು, ನೃತ್ಯ, ಕಾಲುವೆ ಇತಿಹಾಸ, ಮಹತ್ವ, ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರ, ಹೆಣ್ಣುಮಕ್ಕಳ ಪಾಲ್ಗೊಳ್ಳುವಿಕೆಯ ಮಹತ್ವ, ಸುಸ್ಥಿರ ಕೃಷಿ ಹೀಗೆ ಅನೇಕ ವಿಷಯಗಳನ್ನು ಮನದಟ್ಟಾಗುವಂತೆ ನಾಟಕದ ಮೂಲಕ ತಿಳಿಸಲಾಗುತ್ತಿದೆ.

ಕರ್ನಾಟಕ ನೀರಾವರಿ ನಿಗಮ, ಕಾಡಾ ತುಂಗಭದ್ರಾ ಯೋಜನೆ, ಇಜಿಐಎಸ್‌ ಯೋಜನಾ ಸಹಾಯಕ ಸಮಾಲೋಚಕ ತಂಡಗಳು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನೆರವಿನಲ್ಲಿ ಈ ಕಾಲುವೆ ಆಧುನೀಕರಣ ಮತ್ತು ಬೀದಿ ನಾಟಕ ಪ್ರದರ್ಶನ ನಡೆಯುತ್ತಿವೆ.

45 ನಿಮಿಷದಲ್ಲಿ ನಾಟಕ ಪ್ರದರ್ಶನ ಪೂರ್ಣಗೊಳ್ಳುತ್ತಿದ್ದು, ಸರ್ಕಾರದ ಆಶಯದಂತೆ ಸಂವಿಧಾನದ ಪೀಠಿಕೆಯ ಭಾಗವನ್ನು ಬೀದಿ ನಾಟಕದ ಆರಂಭದಲ್ಲೇ ವಿಶಿಷ್ಟವಾಗಿ ಹಾಡಿನ ಮೂಲಕ ಸಂಯೋಜಿಸಲಾಗಿದೆ. ಹಿರಿಯ ರಂಗ ಕಲಾವಿದ ಹಾಗೂ ನಿರ್ದೇಶಕ ಪಿ.ಅಬ್ದುಲ್ಲಾ ಅವರು ನಾಟಕ ನಿರ್ದೇಶಿಸಿದ್ದಾರೆ.

ರಂಗ ಕಲಾವಿದ ಹಾಗೂ ನಿರ್ದೇಶಕ ಪಿ.ಅಬ್ದುಲ್ಲಾ ಅವರು ಕೊಪ್ಪಳ ತಾಲ್ಲೂಕಿನ ಬಂಡಿಹರ್ಲಾಪುರದ ಸಂತೆಯಲ್ಲಿ ಕೈಗೊಂಡ ನಾಟಕ ಪ್ರಚಾರದ ವೈಖರಿ
ರಂಗ ಕಲಾವಿದ ಹಾಗೂ ನಿರ್ದೇಶಕ ಪಿ.ಅಬ್ದುಲ್ಲಾ ಅವರು ಕೊಪ್ಪಳ ತಾಲ್ಲೂಕಿನ ಬಂಡಿಹರ್ಲಾಪುರದ ಸಂತೆಯಲ್ಲಿ ಕೈಗೊಂಡ ನಾಟಕ ಪ್ರಚಾರದ ವೈಖರಿ

ಮಾ.1ರ ತನಕ ಪ್ರದರ್ಶನ

ಫೆ.19ರಿಂದಲೇ ನಾಟಕ ಪ್ರದರ್ಶನ ಆರಂಭವಾಗಿದ್ದು ಮಾ. 1ರ ತನಕ ಜರುಗಲಿದೆ. 26ರಂದು ಚಿತ್ತವಾಡ್ಗಿ ನರಸಾಪುರ ಕೊಂಡನಾಯಕನಹಳ್ಳಿ 27ರಂದು ಕಂಪ್ಲಿ ಬೆಳಗೋಡಹಾಳ್‌ ಸಾಣಾಪುರ 28ರಂದು ಅಂಜನಾದ್ರಿ ಆನೆಗೊಂದಿ ಸಂಗಾಪುರ 29ರಂದು ದೇಶನೂರು ಕೆಂಚನಗುಡ್ಡ ಮಾರ್ಚ್‌ 1ರಂದು ಬಿಚ್ಚಾಲಿ ಮತ್ತು ಎನ್‌.ಹನುಮಾಪುರ ಗ್ರಾಮಗಳಲ್ಲಿ ಪ್ರದರ್ಶನವಾಗಲಿದೆ.

ಜಾಗೃತಿ ಮನರಂಜನೆ

‘ಬೀದಿ ನಾಟಕ ಕೇವಲ ಸಂಭಾಷಣೆಗಳ ತುಣಕಲ್ಲ. 40 ನಿಮಿಷಗಳ ಅವಧಿಯಲ್ಲಿ ರಂಗ ಪ್ರೇಮಿಗಳಿಗೆ ಒಂದಿನಿತೂ ಬೇಸರವಾಗದ ರೀತಿಯಲ್ಲಿ ನಾಟಕ ನಿರ್ದೇಶಿಸಲಾಗಿದೆ’ ಎಂದು ಪಿ. ಅಬ್ದುಲ್ಲಾ ಹೇಳಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಬೀದಿ ನಾಟಕಗಳಲ್ಲಿ ಸಂಭಾಷಣೆ ಪ್ರಧಾನ. ಹೀಗಾದರೆ ಜನರಿಗೆ ಬೇಸರವಾಗುತ್ತದೆ. ಮೂಲ ಉದ್ದೇಶ ಅರ್ಥವಾಗುವುದು ಕ್ಲಿಷ್ಟವಾಗುತ್ತದೆ. ಆದ್ದರಿಂದ ಜಾಗೃತಿ ಮೂಡಿಸುವ ಕಾರ್ಯದ ಜೊತೆಗೆ ಮನರಂಜನೆ ಹಾಡು ಹಾಸ್ಯ ತುಣುಕು ಹೀಗೆ ಎಲ್ಲ ರಸಪಾಕ ನಾಟಕದಲ್ಲಿ ಅಳವಡಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT