ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಕಲ್ಲಗಡ: ಜನರ ದಿನಚರಿ ಬದಲಿಸಿದ ಬರಗಾಲ

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ, ‘ಹರಟೆಕಟ್ಟೆ’ಯಲ್ಲೂ ಮಳೆ ಕೊರತೆಯದ್ದೇ ಚಿಂತೆ
Published 30 ಅಕ್ಟೋಬರ್ 2023, 6:07 IST
Last Updated 30 ಅಕ್ಟೋಬರ್ 2023, 6:07 IST
ಅಕ್ಷರ ಗಾತ್ರ

ಇರಕಲ್ಲಗಡ: ಕೃಷಿ ಚಟುವಟಿಕೆಯೇ ಪ್ರಧಾನವಾಗಿರುವ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗಾದರೆ ಸಾಕು ಜೋಳದ ರೊಟ್ಟಿ ತಟ್ಟುವ ಸದ್ದು ಜೋರಾಗಿ ಕೇಳಿಸುತ್ತದೆ. ಮಹಿಳೆಯರು ತಲೆಯ ಮೇಲೊಂದು ಬುತ್ತಿ ಗಂಟು ಹೊತ್ತು, ಕೈಯಲ್ಲೊಂದು ಚೀಲ ಹಿಡಿದು ಸೂರ್ಯನ ಕಿರಣ ನೆಲಕ್ಕೆ ತಾಕುವ ಮೊದಲೇ ಹೊಲಕ್ಕೆ ಹೋಗುತ್ತಿದ್ದರು.

ಆದರೆ ಈಗ ಎಲ್ಲ ಕಡೆಯೂ ಇದೇ ರೀತಿಯ ಪರಿಸ್ಥಿತಿಯಿಲ್ಲ. ಬೆಳಿಗ್ಗೆಯೇ ಜಿಲ್ಲಾ ಕೇಂದ್ರದಿಂದ ಇರಕಲ್ಲಗಡ ತಲುಪಿದಾಗ ಅದಾಗಲೇ ಸೂರ್ಯ ನೆತ್ತಿ ಮೇಲೆ ಸುಡುತ್ತಿದ್ದ. ಆ ಗ್ರಾಮದಲ್ಲಿ ಕೃಷಿ ಚಟುವಟಿಕೆ ಸಮೃದ್ಧವಾಗಿರುವಾಗ ಇರುವಂಥ ಖುಷಿಯಾಗಲಿ, ಹೊಲದ ಕೆಲಸಕ್ಕೆ ಆಳುಗಳನ್ನು ಹೊಂದಿಸಿಕೊಳ್ಳಬೇಕು ಎನ್ನುವ ಆತುರವಾಗಲಿ ಯಾರಿಗೂ ಇರಲಿಲ್ಲ.

ಹಟ್ಟಿ, ಟಣಕನಕಲ್, ಇರಕಲ್ಲಗಡ, ಚಾಮಲಾಪುರ, ಮೆತಗಲ್‌, ಅರಿಶಿನಕೇರಿ, ಗೊಸಲದೊಡ್ಡಿ ಗ್ರಾಮಗಳಲ್ಲಿ ಯಾವ ರೈತರಲ್ಲಿಯೂ ಹುಮ್ಮಸ್ಸು ಕಾಣಲಿಲ್ಲ. ಹೊಲದಲ್ಲಿ ದಿನಪೂರ್ತಿ ದುಡಿದು, ದಣಿದು ಬೆವರು ಸುರಿಸಿದ ರೈತನಿಗೆ ‘ಹರಟೆ ಕಟ್ಟೆ’ ಎನ್ನುವುದು ಮರುದಿನದ ದುಡಿಮೆಗೆ ಚೈತನ್ಯ ಹೆಚ್ಚಿಸುವ ತಾಣ. ಊರು, ಜಿಲ್ಲೆ, ರಾಜ್ಯ, ದೇಶ, ವಿದೇಶ, ರಾಜಕಾರಣ, ಅಪರಾಧ ಜಗತ್ತು ಹೀಗೆ ಪ್ರತಿಯೊಂದು ವಿಷಯವೂ ಈ ಕಟ್ಟೆಯಲ್ಲಿ ಕುಳಿತ ಶ್ರಮಜೀವಿಗಳಿಗೆ ಚರ್ಚೆ ವಸ್ತುವಾಗುತ್ತಿತ್ತು. ಆದರೆ, ಈ ಬಾರಿ ಅವರಲ್ಲಿ ಅಂಥ ಖುಷಿ ಕಾಣಿಸಲಿಲ್ಲ. ‘ಯಾಕ್ರೀ ಯಜಮಾನ್ರ ಅರಾಮ್‌ ಕೂತೀರಲ್ಲ’ ಎಂದು ಮಾತಿಗೆ ಎಳೆದಾಗ ’ಬರಗಾಲ ಐತ್ರಿ, ಕೆಲಸ ಇಲ್ಲ. ಅದಕ್ಕೆ ಕೂತೀವಿ. ಆದರೆ ಅರಾಮವಾಗಿ ಇಲ್ಲ’ ಎಂದರು.

ಈಗ ಹರಟೆಕಟ್ಟೆ ಕೂಡ ರೈತರಲ್ಲಿಯೂ ಬರಗಾಲದ ಚಿಂತೆ ಮೂಡಿಸಿದೆ. ’ಮಳೆ ಇಲ್ಲದ ಏನೂ ಮಾಡೋಣ್ರ. ಸರಿಯಾಗಿ ಕರೆಂಟ್‌ ಕೊಡಲ್ಲ. ಮಳಿನೂ ಕೈ ಕೊಡ್ತು. ಈ ವರ್ಷ ಹೆಂಗ ಬದುಕೋದು ಅನ್ನೋದ ದೊಡ್ಡ ಚಿಂತಿ ಆಗೈತ್ರಿ. ಸಾವಿರಾರು ರೂಪಾಯಿ ಖರ್ಚು ಮಾಡಿದ್ರೂ ನೂರು ರೂಪಾಯಿ ಕೂಡ ಗಳಿಸೋಕೆ ಆಗ್ಲಿಲ್ರಿ. ಅಲ್ಲಲ್ಲಿ ರೈತ ಆತ್ಮಹತ್ಯೆ ಅನ್ನೊ ಸುದ್ದಿ ಮನಸ್ಸೊಳಗ ಸಂಕಟ ಪಡೋಂಗ ಮಾಡ್ತಾ ಐತ್ರಿ‘ ಎಂದು ಇರಕಲ್ಲಗಡ ಗ್ರಾಮದ ರೈತರು ಹೇಳುತ್ತಿದ್ದಾಗ ಬರಲಾಗದ ತೀವ್ರತೆ ಅನಾವರಣವಾಗುತ್ತಿತ್ತು.

ಮುಂಗಾರು ಹಂಗಾಮಿನಲ್ಲಿ ಬೇಕಾದಾಗ ಮಳೆಯಾಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಕಡು ಕಠಿಣದ ಬರಗಾಲದ ಅನುಭವ ಇದು ಮೊದಲೇನಲ್ಲ. ಆದರೆ, ಹಿಂದಿನ ಕೆಲವು ವರ್ಷಗಳ ಕಾಲ ಸಮೃದ್ಧ ಮಳೆಯಾಗಿತ್ತು. ಹೊಲದಲ್ಲಿ ಬೆಳೆಗಳು ನಳನಳಿಸುತ್ತಿದ್ದವು. ದುಡಿಮೆಯಿತ್ತು; ಜಮೀನುಗಳ ಮಾಲೀಕರಿಗೆ ಆಳುಗಳು ಅಗತ್ಯವಿತ್ತು. ಮಾಲೀಕನಿಗೂ ದುಡಿಮೆ. ಆಳಿಗೂ ಕೈತುಂಬಾ ಕೆಲಸ. ಆದರೆ, ಈಗ ಇಬ್ಬರಿಗೂ ಕೆಲಸವಿಲ್ಲದಂತಾಗಿದೆ. ಸಿರಿ ಬಳಿಕ ಬಂದ ಬರಗಾಲ ಅನ್ನದಾತನನ್ನು ಹೈರಾಣಾಗಿಸಿದೆ.

ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಮೆಕ್ಕೆಜೋಳವನ್ನೇ ಹೆಚ್ಚಾಗಿ ಬೆಳೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ 50,477 ರೈತರ 56,993 ಹೆಕ್ಟೇರ್‌ ಬೆಳೆ ಮಳೆ ಕೊರತೆಯಿಂದಾಗಿ ನಷ್ಟವಾಗಿದೆ. 458 ಹೆಕ್ಟೇರ್‌ ತೋಟಗಾರಿಕಾ ಬೆಳೆ ಕೈಕೊಟ್ಟಿದೆ. ಒಟ್ಟು 61,009 ಹೆಕ್ಟೇರ್‌ ಬಿತ್ತನೆ ಮಾಡಲಾಗಿದ್ದು ಮೆಕ್ಕೆಜೋಳ, ಸಜ್ಜೆ, ನವಣಿ, ತೊಗರಿ, ಶೇಂಗಾ ಪ್ರಮಾಣವೇ ಹೆಚ್ಚಿದೆ. ತೇವಾಂಶದ ಕೊರತೆಯಿಂದಾಗಿ ಮೆಕ್ಕೆ ಜೋಳ ಕಾಳು ಕಟ್ಟಿಲ್ಲ. ಇನ್ನೂ ಕೆಲ ಹೊಲಗಳಲ್ಲಿ ಬೆಳೆಗಳು ಒಣಗಿ ಹೋಗಿವೆ.

ಇರಕಲ್ಲಗಡ ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಗೋಪುರ ಬಸಪ್ಪ ಎಂಬ ರೈತರ ಹೊಲ ಕುಕನೂರು ತಾಲ್ಲೂಕಿನ ಚಂಡಿನಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿದೆ. ಮಳೆಯ ಮೇಲೆ ಭರವಸೆಯಿಟ್ಟು ಬಸಪ್ಪ ತಮ್ಮ ಮೂರು ಎಕರೆ ಹೊಲದಲ್ಲಿ ಎರಡು ಬಾರಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರೂ ಫಸಲು ಬಂದಿಲ್ಲ.

‘ಮೊದಲ ಸಲ ಮೆಕ್ಕೆಜೋಳ ಬಿತ್ತಿದಾಗ ಮಳೆ ಬರಲಿಲ್ಲ. ಒಂದಿಷ್ಟೂ ತಡಮಾಡದೇ ಎರಡನೇ ಸಲ ಬಿತ್ತಿದಾಗಲೂ ಮಳೆ ಕೈ ಹಿಡಿಯಲಿಲ್ಲ. ಈ ವರ್ಷ ದೇವರೇ ನಮ್ಮನ್ನು ಕಾಪಾಡಬೇಕು. ಮೆಕ್ಕೆಜೋಳದ ಮೇವು ಜಾನುವಾರುಗಳಿಗೆ ಕೂಡಿಟ್ಟುಕೊಳ್ಳಬೇಕು. ಹೊಲದಿಂದ ಮೇವು ತೆಗೆಯಲು ಆಳುಗಳನ್ನು ಕರೆಯಿಸಿದರೆ ಕೂಲಿ ಕೊಡಬೇಕಾದಷ್ಟು ಶಕ್ತಿಯೂ ನನಗಿಲ್ಲ. ಆದ್ದರಿಂದ ನಾನೇ ಕಿತ್ತು ಜೋಡಿಸುತ್ತೇನೆ’ ಎಂದು ಬಸಪ್ಪ ಹೇಳುತ್ತಿದ್ದರೆ ಅವರ ಹಣೆಯ ಮೇಲೆ ಚಿಂತೆಯ ಗೆರೆಗಳು ಕಾಣುತ್ತಿದ್ದವು. ಮುಂದುವರಿದ ಅವರು ‘ಈಗ ರೈತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸರ್ಕಾರ ಕೊಡುತ್ತಿರುವ ಐದು ಕೆ.ಜಿ. ಅಕ್ಕಿ ನಮ್ಮನ್ನು ಬದುಕಿಸಿದೆ’ ಎಂದರು.

ಚಾಮಲಾಪುರ ಗ್ರಾಮದಲ್ಲಿ ಬೈಕ್‌ ಮೇಲೆ ಅಣ್ಣಿಹೂವಿನ ಮೇವು ತುಂಬಿಕೊಂಡು ಹೊರಟಿದ್ದ ನಿಂಗಪ್ಪ ಕರಡಿ ಅವರನ್ನು ಮಾತಿಗೆಳೆದಾಗ ‘ಮಳೆಯಿಲ್ಲದ ಕಾರಣ ನಾವು ಬೆಂಗಳೂರಿಗೆ ಗುಳೆ ಹೋಗಿ ಬದುಕುತ್ತೇವೆ. ಜಾನುವಾರುಗಳು ಏನು ಮಾಡಬೇಕು? ಅದಕ್ಕೆ ಮೇವು ಕೂಡಿಟ್ಟುಕೊಳ್ಳುತ್ತಿದ್ದೇನೆ’ ಎಂದ ಅವರ ಮಾತುಗಳು ರೈತರ ಸಂಕಷ್ಟದ ದಿನಗಳಿಗೆ ಸಾಕ್ಷಿಯಂತಿದ್ದವು.

[object Object]
ಗೋಪುರ ಬಸಪ್ಪ ಕಾಳು ಕಟ್ಟದ ತೆರೆ ತೋರಿಸುತ್ತಿರುವುದು
[object Object]
ಕೊಪ್ಪಳ ತಾಲ್ಲೂಕಿನ ಚಾಮಲಾಪುರ ಗ್ರಾಮಕ್ಕೆ ಹೋಗುವ ಹೊರವಲಯದಲ್ಲಿ ರೈತ ಬಾಲಪ್ಪ ಕನಕಪ್ಪ ಕೈಕೊಟ್ಟ ಸಜ್ಜೆ ತೋರಿಸಿದರು
[object Object]
ಇರುವ ಮೇವು ಉಳಿಸಿಕೊಳ್ಳಲು ಚಾಮಲಾಪುರದ ರೈತ ನಿಂಗಪ್ಪ ಕರಡಿ ಪರದಾಟ
ಎರಡು ಎಕರೆ ಹೊಲದಲ್ಲಿ ಮೆಕ್ಕಜೋಳ ಬಿತ್ತಿದ್ದೆ. ಮಳೆಯಿಲ್ಲದೇ ಎಲ್ಲವೂ ಒಣಗಿ ಹೋಗಿವೆ. ಬಿತ್ತನೆ ಬೀಜ ರಸಗೊಬ್ಬರಕ್ಕಾಗಿ ಖರ್ಚು ಮಾಡಿದ ಸಾವಿರಾರು ರೂಪಾಯಿಗೆ ಪ್ರತಿಯಾಗಿ ನಯಾಪೈಸೆಯೂ ಬಂದಿಲ್ಲ.
ವೀರೇಶ ಯಲಿಗಾರ ಇರಕಲ್ಲಗಡ
ನಮ್ಮದು ಒಣ ಬೇಸಾಯದ ಭೂಮಿ. ಕೇಂದ್ರ ಅಧ್ಯಯನ ತಂಡ ಪರಿಶೀಲಿಸಿದಾಗ ಬೆಳೆ ಹಸಿರಾಗಿತ್ತು. ಈಗ ಎಲ್ಲವೂ ಒಣಗಿ ಹೋಗಿದೆ. ಪರಿಹಾರ ಲಭಿಸುತ್ತದೆಯೊ ಇಲ್ಲವೊ ಎನ್ನುವ ಆತಂಕ ಕಾಡುತ್ತಿದೆ.
ನಿಂಗಪ್ಪ ಕರಡಿ ಚಾಮಲಾಪುರ
ಎರಡು ಎಕರೆಯಲ್ಲಿ ಸಜ್ಜೆ ಹಾಕಿದರೆ ಒಂದು ಪಾಕೆಟ್‌ ಮಾತ್ರ ಫಸಲು ಬಂದಿದೆ. ಊರಿನ ಸಮೀಪದಲ್ಲಿಯೇ ಇರುವ ಕೋಳಿ ಫಾರ್ಮ್‌ಗೆ ಕೆಲವರು ಕೆಲಸಕ್ಕೆ ಹೋದರೆ ಇನ್ನೂ ಕೆಲವರು ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ.
ಬಾಲಪ್ಪ ಕನಕಪ್ಪ ಚಾಮಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT