ಗಂಗಾವತಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಎಂಟು ಜೋಡಿಗಳಿಗೆ ನ್ಯಾಯಾಧೀಶರು ಮತ್ತು ವಕೀಲರು ಮಾಡಿದ ಮನವೊಲಿಕೆಯಿಂದ ಒಂದಾದ ಘಟನೆ ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜರುಗಿದೆ.
ವೈವಾಹಿಕ ಜೀವನದಲ್ಲಿ ಸಣ್ಣ–ಪುಟ್ಟ ಜಗಳ, ವಿವಾದ, ಮನೆ ಸಮಸ್ಯೆಗಳಿಗೆ ಬೇಸತ್ತು ಮನಸ್ತಾಪದಿಂದ 8 ಜೋಡಿಗಳು ವಿಚ್ಛೇದನ ಪಡೆಯಲು ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರು ಮತ್ತು ವಕೀಲರು 8 ಜೋಡಿಗಳಿಗೆ ಬುದ್ಧಿಮಾತು ಹೇಳಿ ದಂಪತಿಗಳನ್ನು ಮತ್ತೆ ಒಂದಾಗಿಸಿದರು.
ಚಳ್ಳೂರು ಕ್ಯಾಂಪಿನ (ಕಾರಟಗಿ) ಆನಂದ ಬಾಬು–ಸತ್ಯಾವತಿ, ಕಾಟಪುರ ಗ್ರಾಮದ ಕನಕನಗೌಡ– ಪಾರ್ವತಮ್ಮ, ನವಲಿ ಗ್ರಾಮದ ವೀರೇಶ–ಸಂಗೀತಾ, ಯತ್ನಟ್ಟಿ ಗ್ರಾಮದ ಕನಕರಾಯ–ಪಾರ್ವತಿ, ಗೋಡಿನಾಳ ಗ್ರಾಮದ ಮೌನೇಶ–ಮಂಜುಳಾ, ತೊಂಡಿಹಾಳ ಗ್ರಾಮದ ಪರಶುರಾಮ–ದುರ್ಗಾ, ನವಲಿ ತಾಂಡದ ದಾನಪ್ಪ–ಬುಜ್ಜಿಬಾಯಿ, ಚೇತನಕುಮಾರ– ಅಂಬಿಕಾ ಎಂಬ ದಂಪತಿಗಳು ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮತ್ತೆ ಒಂದಾದರು.
ಗಂಗಾವತಿ ತಾಲ್ಲೂಕು ನ್ಯಾಯಾಲಯದಲ್ಲಿ ಒಟ್ಟು 9,070 ಬಾಕಿ ಪ್ರಕರಣಗಳಿದ್ದು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಮನೆಕರ, ಕೌಟುಂಬಿಕ ದೌರ್ಜನ್ಯ, ಜೀವ ನಾಂಶ, ಚೆಕ್ ಬೌನ್ಸ್, ಜನನ ಪ್ರಕರಣ, ಕ್ರಿಮಿನಲ್ ಕೇಸ್ ಸೇರಿ 1494 ಪ್ರಕರಣಗಳನ್ನ ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು. ಆದರೆ 4 ನ್ಯಾಯಾಲಯಗಳಲ್ಲಿ ಸೇರಿ 1,042 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ. 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ 26 ಪ್ರಕರಣಗಳು ಇತ್ಯರ್ಥವಾಗಿವೆ. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 51 ಮೋಟಾರು ವಾಹನ, 8 ವೈವಾಹಿಕ ಪ್ರಕರಣ, 34 ಬ್ಯಾಂಕ್ ಪ್ರಕರಣಗಳು ಇತ್ಯರ್ಥ ವಾದವು.
ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 442 ಕ್ರಿಮಿನಲ್, 14 ಚೆಕ್ ಬೌನ್ಸ್, 1 ಕೌಟುಂಬಿಕ ದೌರ್ಜನ್ಯ, 15 ಜನನ ಮತ್ತು ಮರಣ ಸೇರಿ 5 ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 222 ಕ್ರಿಮಿನಲ್, 79 ಜನನ ಮತ್ತು ಮರಣ, 7 ಚೆಕ್ ಬೌನ್ಸ್ ಪ್ರಕರಣ ಸೇರಿ ಇತರೆ 13 ಪ್ರಕರಣಗಳು ಇತ್ಯರ್ಥವಾಗಿವೆ.
ನಾಲ್ಕು ನ್ಯಾಯಾಲಯಗಳಲ್ಲಿ ಸೇರಿ ಒಟ್ಟು ₹7,00,93,608 ಹಣವನ್ನು ಸರ್ಕಾರಕ್ಕೆ ಜಮ ಮಾಡಲಾಗಿದೆ.
ಈ ವೇಳೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ರಮೇಶ್ ಎಸ್.ಗಾಣಿಗೇರಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ವಕೀಲರಾದ ನಾಗರಾಜ ಗುತ್ತೇದಾರ ಸೇರಿ ವಕೀಲರು, ಅರ್ಜಿದಾರರು, ಎಸ್‌ಬಿಐ ಬ್ಯಾಂಕ್, ಕೆನೆರಾ ಬ್ಯಾಂಕ್, ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಸಣ್ಣ–ಸಣ್ಣ ವಿಷಯಗಳಿಗೆ ಜಗಳ ಮಾಡಿಕೊಂಡು ವಿಚ್ಚೇದನ ಕೋರಿ ಎಂಟು ಜೋಡಿಗಳು ನ್ಯಾಯಾಲಯ ಮೆಟ್ಟಿಲೇರಿದ್ದವು. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯವೆಂದು ಮನವೊಲಿಕೆ ಮಾಡಿ ದಂಪತಿಗಳನ್ನು ಒಂದು ಮಾಡಿದ್ದು ತುಂಬಾ ಖುಷಿ ತಂದಿದೆ.
-ಮಲ್ಲಿಕಾರ್ಜುನ ಮುಸಾಲಿ ವಕೀಲ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.