ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಯೋಜನೆ: ಮಳೆಯಾದರೂ ಉಳಿಯಲಿಲ್ಲ ಹೆಚ್ಚುವರಿ ನೀರು

ತುಂಗಭದ್ರಾ ಯೋಜನೆ: ವ್ಯರ್ಥವಾಗಿ ಹರಿಯಿತು 440 ಟಿಎಂಸಿ ಅಡಿ ನೀರು
Last Updated 23 ನವೆಂಬರ್ 2022, 6:42 IST
ಅಕ್ಷರ ಗಾತ್ರ

ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಅಂತರರಾಜ್ಯ ನೀರಾವರಿ ಯೋಜನೆಯಾದ ಇಲ್ಲಿನ ತುಂಗಭದ್ರಾ ಜಲಾಶಯದಿಂದ ಈ ವರ್ಷ ಸುಮಾರು 400 ಟಿಎಂಸಿ ಅಡಿಗೂ ಹೆಚ್ಚು ನೀರು ರೈತರ ಬಳಕೆಗೆ ಉಪಯೋಗವಾಗದೆ ನದಿ ಸೇರಿದೆ.

ಇತ್ತೀಚೆಗಿನ ವರ್ಷಗಳಿಂದ ಪ್ರತಿ ವರ್ಷ ಮಳೆಗಾಲದಲ್ಲಿ ತುಂಬುವ 105 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಈ ವರ್ಷ ಕೂಡ ಜುಲೈ ಆರಂಭದಿಂದ ನದಿಯಲ್ಲಿ ಹರಿದ ಒಟ್ಟು ನೀರು ಪ್ರಸ್ತುತ ಸಂಗ್ರಹವಿರುವ ಪ್ರಮಾಣಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು!

ಜಲಾಶಯ ತುಂಬಿದ ಬಳಿಕ ಹರಿಯುವ ಹೆಚ್ಚುವರಿ ನೀರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅದು ಬಳಕೆಯಾಗಲು ಬರುವಂತೆ ಇರಬೇಕು ಎನ್ನುವ ಬೇಡಿಕೆ ಇಲ್ಲಿನ ರೈತರದ್ದು. ಯಾಕೆಂದರೆ ಜಿಲ್ಲೆಯಲ್ಲಿ ಮೊದಲೆಲ್ಲ ಬರಗಾಲ ಕಾಡುತ್ತಿತ್ತು. ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ರೈತರು ನೀರಿಗಾಗಿ ಅನೇಕ ಬಾರಿ ಗುದ್ದಾಡಿದ ಉದಾಹರಣೆಗಳೂ ಇವೆ.

ಆದ್ದರಿಂದ ಕನಕಗಿರಿ ತಾಲ್ಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಬೇಕು ಎನ್ನುವ ಯೋಚನೆ ಹೊಳೆಯಿತು. ಪ್ರಸ್ತಾವ ಸಲ್ಲಿಕೆಯಾಗಿ ಐದಾರು ವರ್ಷಗಳಲ್ಲಿ ಸಮೀಕ್ಷೆಗೆಂದೇ ಸರ್ಕಾರದಿಂದ ₹ 13 ಕೋಟಿ ಬಿಡುಗಡೆಯಾಯಿತು. ನಂತರ ಪ್ರಗತಿ ಕಾಣಲಿಲ್ಲ.

ಇಲ್ಲಿ ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 118ನೇ ನೀರಾವರಿ ಸಲಹಾ ಸಮಿತಿ ಸಭೆ ಬುಧವಾರ ನಡೆಯಲಿದ್ದು, ವ್ಯರ್ಥವಾಗಿ ಹರಿಯವ ನೀರನ್ನು ಉಳಿಸುವ ಬಗ್ಗೆ ಗಂಭೀರವಾದ ಚರ್ಚೆಯಾಗಬೇಕಾದ ತುರ್ತು ಅಗತ್ಯವಿದೆ ಎನ್ನುವುದು ರೈತರ ಆಗ್ರಹ.

‘ತುಂಗಭದ್ರಾ ಜಲಾಶಯದ ಪಾಲುದಾರ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ಹೊಸ ಯೋಜನೆಗೆ ಒಪ್ಪಬೇಕು. ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕೆರೆಗಳನ್ನು ತುಂಬಿಸುವ ಯೋಜನೆ ಫಲಕಾರಿಯಾಗಬಹುದು’ ಎಂದು ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳುತ್ತಾರೆ.

105 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ 40 ಟಿಎಂಸಿ ಅಡಿ ಹೂಳು ತುಂಬಿದ್ದು, ಅಷ್ಟು ಪ್ರಮಾಣದ ನೀರು ನಮ್ಮ ಕೈ ತಪ್ಪುತ್ತಿದೆ. ಮಳೆರಾಯ ಕೃಪೆ ತೋರಿದರೂ ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಶೇ. 22ರಷ್ಟು ಹೆಚ್ಚು ಮಳೆ

ಮುನಿರಾಬಾದ್‌: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತಲೂ ಶೇ. 22ರಷ್ಟು ಮಳೆ ಹೆಚ್ಚಾಗಿದೆ. ಜನವರಿಯಿಂದ ನವೆಂಬರ್ ಎರಡನೇ ವಾರದ ತನಕ ವಾಡಿಕೆ ಮಳೆ 59.21 ಸೆಂ.ಮೀ. ಇದ್ದು, 72 ಸೆಂ.ಮೀ. ನಷ್ಟು ಮಳೆಯಾಗಿದ್ದು, ವರ್ಷಪೂರ್ತಿ ನೀರು ಹರಿದಿದೆ.

ತುಂಗಭದ್ರಾ ಜಲಾಶಯದ ಪಾತ್ರದಲ್ಲಿ ಬರುವ ಕೆರೆಗಳನ್ನು ತುಂಬಿಸಿ ರೈತರ ಬಳಕೆಗೆ ನೀಡುವುದು ಉತ್ತಮ. ಇದರಿಂದ ನೀರು ಪೋಲಾಗುವುದು ತಪ್ಪುತ್ತದೆ.
ಎಂ.ಆರ್.ವೆಂಕಟೇಶ್, ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT