ಕಾರಟಗಿ: ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಹುಳಿಗಡಲೆ ಬೀಜಗಳ ವಿತರಣೆ ಆರಂಭಗೊಂಡಿದ್ದು, ಬೀಜ ಖರೀದಿಗೆ ರೈತರು ಮುಗಿಬಿದ್ದಿರುವುದು ಬುಧವಾರ ಕಂಡುಬಂತು. ಬೀಜ ಪಡೆದವರು ಖುಷಿಯಿಂದ ನಿರ್ಗಮಿಸುತ್ತಿದ್ದರೆ, ಉಳಿದವರು ತಮ್ಮ ಸರದಿಗೆ ಕಾಯುತ್ತಿರುವುದು ಕಂಡುಬಂತು.
ಕಡಲೆ ಬೀಜದ ಪ್ರತಿ ಚೀಲಕ್ಕೆ ಪರಿಶಿಷ್ಟ ಜಾತಿ, ಜನಾಂಗದವರಿಗೆ ₹950, ಇತರರಿಗೆ ₹1,250 ದರದಲ್ಲಿ ವಿತರಿಸಲಾಗುತ್ತಿದೆ. ಪ್ರತಿ ಎಕರೆಗೆ 1 ಚೀಲ ಬೀಜವನ್ನು ನೀಡಲಾಗುತ್ತಿದ್ದು, ಗರಿಷ್ಟ 5 ಎಕರೆ ಹೊಂದಿದ ಪ್ರತಿ ರೈತರಿಗೆ 5 ಚೀಲ ಬೀಜಗಳನ್ನು ವಿತರಿಸಲಾಗುತ್ತಿದೆ.
ಮಂಗಳವಾರ 1250 ಚೀಲ ಬೀಜ ಬಂದಿವೆ. ಗುರುವಾರ ಇನ್ನೂ 1 ಸಾವಿರ ಚೀಲ ಬೀಜಗಳು ಬರಲಿವೆ. ಎಲ್ಲಾ ರೈತರಿಗೂ ಟೋಕನ್ ನೀಡಿ ವಿತರಿಸಲಾಗುತ್ತಿದೆ. ರೈತರು ಧಾವಂತ ಪಡುವ ಪ್ರಮೇಯ ಬೇಡ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜ್, ಅಕ್ಷಯ್ ಭೇಟಿ ನೀಡಿದಾಗ ತಿಳಿಸಿದರು.
ಸ್ಥಳದಲ್ಲಿದ್ದ ರೈತರಾದ ಸಿದ್ದಲಿಂಗಪ್ಪ ನಾಲ್ಕೆತ್ತೀನ್, ಭೀಮಣ್ಣ ಹಂದ್ಯಾಳ, ಮಂಜುನಾಥ ತೆಕ್ಕಲಕೋಟೆ ಪ್ರತಿಕ್ರಿಯಿಸಿ, ಈಗ ಭೂಮಿ ತೇವಾಂಶದಿಂದ ಕೂಡಿದೆ. ಬಿತ್ತನೆಗೆ ಇದು ಸಕಾಲ. ವಿಳಂಬವಾದರೆ ಮಳೆಗೆ ಕಾಯಬೇಕು. ಬೀಜ ವಿತರಣೆ ತ್ವರಿತವಾಗಿ ಆಗಬೇಕು ಎಂದು ಆಗ್ರಹಿಸಿದರು.
ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಭಾಗದ ರೈತರಾದ ಸಿದ್ದನಗೌಡ ಖಂಡ್ರೆ, ಯಮನಪ್ಪ, ಪಂಪನಗೌಡ, ಪಂಪನಗೌಡ ರೈತರಿಗೆ ಸಕಾಲಕ್ಕೆ ಬೀಜ ವಿತರಿಸಿದರೆ ಅನುಕೂಲವಾಗುವುದು. ರೈತರಿಗೆ ಬೇಕಾದಷ್ಟು ಬೀಜಗಳನ್ನು ಪೂರೈಸಲು ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.