ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಸಾಮೂಹಿಕ ಜ್ವರ, ಜನ ಜರ್ಝರಿತ

ನೆರಿಬೆಂಚಿ ಗ್ರಾಮಸ್ಥರ ಪರದಾಟ: ಪತ್ತೆಯಾಗದ ಕಾಯಿಲೆ; ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ
Published 8 ಫೆಬ್ರುವರಿ 2024, 6:08 IST
Last Updated 8 ಫೆಬ್ರುವರಿ 2024, 6:08 IST
ಅಕ್ಷರ ಗಾತ್ರ

ಕುಷ್ಟಗಿ: ಕಳೆದ ಎರಡು ವಾರದಿಂದಲೂ ತಾಲ್ಲೂಕಿನ ನೆರೆಬೆಂಚಿ ಗ್ರಾಮಸ್ಥರು ಸಾಮೂಹಿಕವಾಗಿ ವಿಪರೀತ ಜ್ವರಬಾಧೆಯಿಂದ ಬಳಲುತ್ತಿದ್ದಾರೆ. ಊರಿನ ಬೀರಲಿಂಗೇಶ್ವರ ದೇವಸ್ಥಾನದಲ್ಲಿನ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ರೋಗಿಗಳಿಂದ ಭರ್ತಿಯಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಾಕಷ್ಟು ಜನ ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಗತ್ಯ ಸಿಬ್ಬಂದಿ, ಔಷಧಿಯೊಂದಿಗೆ ನೆರವಾಗುತ್ತಿದೆ. ಅನೇಕ ಜನರ ರಕ್ತದ ಮಾದರಿಗಳನ್ನೂ ಜಿಲ್ಲಾ ಕೇಂದ್ರದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅದು ಡೆಂಗಿ ಅಲ್ಲ, ಚಿಕೂನ್‌ಗುನ್ಯಾ ಬಾಧೆಯೂ ಅಲ್ಲ ಎಂಬ ವರದಿ ಬಂದಿದೆ. ಮತ್ತ್ಯಾವ ಕಾಯಿಲೆ ನಮ್ಮನ್ನು ಕಾಡುತ್ತಿದೆ? ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜನರು ಜ್ವರ ಬಾಧೆಯಿಂದ ಜರ್ಝರಿತರಾಗಿರುವುದು ಗೋಚರಿಸುತ್ತಿದೆ.

‘ಕೈಕಾಲು, ಕೀಲು ನೋವಿನಿಂದ ನೆಲಬಿಟ್ಟು ಏಳ್ದಂಗಾಗೇತಿ, ಬಹಿರ್ದೆಸೆಗೆ ಹೋಗಲೂ ಆಗುತ್ತಿಲ್ಲ, ವಿಪರೀತ ಜ್ವರ ಕಾಡಕ್ಹತ್ಯಾವ. ನಮ್ಮ ಊರಿನ ಜನರ ಗೋಳಿಗೆ ಪರಿಹಾರ ಇಲ್ದಂಗಾಗೇತ್ರಿ’ ಎಂದು ಗ್ರಾಮಸ್ಥರಾದ ಮೌನೇಶ ಮೇಟಿ, ಶರಣಪ್ಪ ಹಿರೇಬಂಡಿಹಾಳ,
ಅಜ್ಜಪ್ಪ ಕನಕೊಪ್ಪ ಅಲವತ್ತುಕೊಂಡರು.

ದೇವಸ್ಥಾನದ ಒಳ ಹೊರ ಆವರಣ ರೋಗಿಗಳಿಂದ ಭರ್ತಿಯಾಗಿದ್ದು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಬಗಳಿಗೆ ದಾರ ಕಟ್ಟಿ ಅದಕ್ಕೆ ಇಳಿಬಿಟ್ಟ ಸಲಾಯಿನ್‌ ಬಾಟಲಿಗಳ ಡ್ರಿಪ್‌ ಮೂಲಕ ಔಷಧಿ ನೀಡುತ್ತಿರುವುದು ಕಂಡುಬಂದಿತು. ಅದೇ ರೀತಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ನೆರೆಬೆಂಚಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.

ನೈರ್ಮಲ್ಯ ಕೊರತೆ: ಸಮಸ್ಯೆ ಎದುರಾದ ನಂತರ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮುಂದಾಗಿದ್ದು ಅಗತ್ಯ ಕ್ರಮ ಕೈಗೊಂಡಿದೆ. ಆದರು ಮಾಲಿನ್ಯ ಸಮಸ್ಯೆ ಹಾಗೇ ಇದೆ, ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ಪಕ್ಕದಲ್ಲಿ ಬೃಹತ್ ಕಾಲುವೆಯಲ್ಲಿ ಅನೇಕ ತಿಂಗಳುಗಳಿಂದ ಕೊಳಚೆ ನೀರು ಮಡುಗಟ್ಟಿದೆ. ಅದನ್ನು ಸ್ವಚ್ಛಗೊಳಿಸಲು ಪಂಚಾಯಿತಿ ಮುಂದಾಗಬೇಕಿದೆ ಎಂದು ಜನರು ಹೇಳಿದರು.

ನೆಲದ ಮೇಲೆಯೇ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು
ನೆಲದ ಮೇಲೆಯೇ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು
ಜನರ ರಕ್ತದ ಮಾದರಿಗಳಲ್ಲಿ ಡೆಂಗೆ ಚಿಕುನ್‌ಗುನ್ಯಾ ನೆಗೆಟಿವ್ ವರದಿ ಬಂದಿದ್ದು ವೈರಲ್‌ಫೀವರ್ ಸೋಂಕು ಉಂಟಾಗಿದೆ. ಆರೋಗ್ಯ ವ್ಯವಸ್ಥೆ ಸುಧಾರಿಸುವುದಕ್ಕೆ ಆರೋಗ್ಯ ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಿದೆ.
ಡಾ.ಆನಂದ ಗೋಟೂರು ತಾಲ್ಲೂಕು ಆರೋಗ್ಯ ಅಧಿಕಾರಿ
ಸ್ವಚ್ಛತೆಗೆ ಜನ ಸಹಕರಿಸಬೇಕಿದೆ. ಹಲವರು ಗುಂಡಿಯಲ್ಲಿ ನಳದ ಸಂಪರ್ಕ ಹೊಂದಿದ್ದು ಕೊಳಚೆ ಪುನಃ ನಲ್ಲಿಯೊಳಗೇ ಸೇರುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದೇವೆ.
ಶೇಖರಪ್ಪ ಹರಿಜನ ಕಂದಕೂರು ಗ್ರಾ.ಪಂ ಅಧ್ಯಕ್ಷ
‘ಜೆಜೆಎಂ ಅಧ್ವಾನ ಅಶುದ್ಧ ನೀರು’
ಗ್ರಾಮದಲ್ಲಿ ಜೆಜೆಎಂ ಯೋಜನೆ ಅಧ್ವಾನಗೊಂಡಿದ್ದು ಕೊಳವೆಗಳನ್ನೇ ಜೋಡಿಸಿಲ್ಲ. ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪವಿದ್ದು ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ಆರ್‌ಒ ಘಟಕ ದೂರದಲ್ಲಿದ್ದು ಮಹಿಳೆಯರು ವೃದ್ಧರಿಗೆ ಅಲ್ಲಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಘಟಕವನ್ನು ಊರಿಗೆ ಸ್ಥಳಾಂತರಿಸಬೇಕೆಂಬ ಜನರ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಹಾಗಾಗಿ ಕುಡಿಯಲು ಯೋಗ್ಯವಲ್ಲದ ಮತ್ತು ಅತ್ಯಧಿಕ ಫ್ಲೋರೈಡ್ ಅಂಶ ಹೊಂದಿರುವ ಕೊಳವೆಬಾವಿ ನೀರನ್ನೇ ಬಳಸುತ್ತಿದ್ದು ಇದೂ ಸಹ ಅನಾರೋಗ್ಯಕ್ಕೆ ಕಾರಣವಾಗಿದೆ. ಜನರಿಗೆ ಎದ್ದೇಳುವುದಕ್ಕೂ ಸಮಸ್ಯೆಯಾಗಿದ್ದು ಬಹಿರ್ದೆಸೆಗೆ ಹೊತ್ತುಕೊಂಡು ಹೋಗಬೇಕಿದೆ. ಚಿಕಿತ್ಸಾ ಕೇಂದ್ರಕ್ಕೆ ಗಾಲಿ ಕುರ್ಚಿಯ ಮೇಲೆ ಕರೆತರುತ್ತಿದ್ದೇವೆ ಎಂದು ಜನ ಹೇಳಿದರು. ಈ ಊರು ಕೊಪ್ಪಳ ಮುಖ್ಯರಸ್ತೆಗೆ ಹೊಂದಿಕೊಂಡಿದ್ದು ಒಬ್ಬ ಹಿರಿಯ ಅಧಿಕಾರಿಯೂ ಈ ಊರಿಗೆ ಭೇಟಿ ನೀಡದಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT