ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಗಾಂಧಿಗೆ ತಲೆಬಾಗಲಿಲ್ಲ: ಜಿ.‌ಜನಾರ್ದನರೆಡ್ಡಿ

Published 30 ನವೆಂಬರ್ 2023, 15:38 IST
Last Updated 30 ನವೆಂಬರ್ 2023, 15:38 IST
ಅಕ್ಷರ ಗಾತ್ರ

ಗಂಗಾವತಿ: ‘ಸಂಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಬ್ರಿಟಿಷರಿಗೆ ಹೇಗೆ ತಲೆ ಬಾಗಲಿಲ್ಲವೋ, ಈ ಜನಾರ್ದನರೆಡ್ಡಿ ಸಹ ಕಾಂಗ್ರೆಸ್ಸಿನ ಸೋನಿಯಾಗಾಂಧಿಗೆ ತಲೆಬಾಗಲಿಲ್ಲ. ನನ್ನ ವಿರುದ್ಧದ ಆರೋಪಗಳು ಇಂದಿಗೂ ಆರೋಪಗಳಾಗಿಯೇ ಉಳಿದಿವೆ ಹೊರೆತು ಸತ್ಯಗಳಾಗಿಲ್ಲ’ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.

ನಗರದ ಆನಂದ ನರ್ಸಿಂಗ್ ಸಮೀಪದ ಕನಕದಾಸ ವೃತ್ತದಲ್ಲಿ ಗುರುವಾರ ಕನಕದಾಸ ಜಯಂತಿ ನಿಮಿತ್ತ ಕನಕದಾಸರ ಪ್ರತಿಮೆಗೆ ಹೂವಿನ ಹಾರ ಆರ್ಪಿಸಿ ಮಾತನಾಡಿದರು. ‘ಸಂಗೊಳ್ಳಿರಾಯಣ್ಣ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿ ಪ್ರಾಣತೆತ್ತಿದ್ದಾರೆ. ಅವರು ಎಂದಿಗೂ ಬ್ರಿಟಿಷರ ಮುಂದೆ ತಲೆ ಬಾಗಿದವರಲ್ಲ. ನಾನು ಸಹ ಸಂಗೊಳ್ಳಿರಾಯಣ್ಣ ಅವರಂತೆ ಯಾರಿಗೂ ತಲೆಬಾಗಿದವ‌ನಲ್ಲ’ ಎಂದರು.

‘ಸಂಗೊಳ್ಳಿ ರಾಯಣ್ಣನ ಪಾದಮುಟ್ಟಿ ಹೇಳುವ ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನನ್ನ ವಿರುದ್ಧ ಪಾದಯಾತ್ರೆ ಮಾಡಿ, ಷಡ್ಯಂತ್ರದಿಂದ ಇಲ್ಲಸಲ್ಲದ ಪ್ರಕರಣಗಳನ್ನ ದಾಖಲಿಸುವಂತೆ ಮಾಡಿದ್ದಾರೆ. ಆದ್ರೆ ಅವರ ಆತ್ಮ ಸಾಕ್ಷಿಗೂ ಗೊತ್ತು ಜನಾರ್ದನರೆಡ್ಡಿ ತಪ್ಪು ಮಾಡಿಲ್ಲ ಅಂತ’ ಎಂದು ಪರೋಕ್ಷವಾಗಿ ಮುಖ್ಮಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುಟುಕಿದರು.

‘12 ವರ್ಷಗಳಾಗಿವೆ ನನ್ನ ವಿರುದ್ಧ ಆರೋಪ ಮಾಡಿದ ವ್ಯಕ್ತಿಗಳು ಪ್ರಕರಣಗಳನ್ನ ಸತ್ಯವೆಂದು ಸಾಬೀತುಪಡಿಸಲು ಆಗುತ್ತಿಲ್ಲ. ಡಿಕೆಶಿ ಹೇಳ್ತಾರೆ ಪಕ್ಷಕ್ಕೆ ದುಡಿದ ಪರಿ, ತ್ಯಾಗ ಎಲ್ಲವನ್ನೂ ಅರಿತು ಪಕ್ಷ ಸಿಬಿಐ ಪ್ರಕರಣ ವಾಪಸ್‌ ಪಡೆದಿದೆ ಎಂದು. ಇಲ್ಲಿ ಡಿಕೆಶಿ ಸೇವೆ ಪಡೆದು ಕಾಂಗ್ರೆಸ್ ಅವರನ್ನು ಕಾಪಾಡಿ ಬೆನ್ನಿಗೆ ನಿಂತಿದೆ. ಆದರೆ ಈ ಹಿಂದೆ ನನ್ನ ಸೇವೆ ಪಡೆದು, ನನ್ನ ಬಳಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾತ್ರ ನನ್ನ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಿ, ಜೈಲಿಗಟ್ಟಿಸಿ ನನ್ನ ಬೆನ್ನಿಗೆ ನಿಲ್ಲಲಿಲ್ಲ. ಆದರೆ ಆ ಭಗವಂತ ಮಾತ್ರ ಎಂದಿಗೂ ನನ್ನ ಬೆನ್ನಿಗೆ ನಿಂತಿದ್ದಾನೆ’ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಭಕ್ತಿಯ ಸಾಮ್ರಾಜ್ಯ ಕಟ್ಟಿದ ಕನಕದಾಸರು, ದಾಸ ಪರಂಪರೆಯಲ್ಲಿ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ. ದಾಸರ ತತ್ವಾದರ್ಶಗಳು ಮನುಕುಲಕ್ಕೆ ದಾರಿದೀಪ. ಕನಕ ಕೀರ್ತನೆಗಳನ್ನು ಕೇಳಿ ಅರ್ಥೈಸಿಕೊಳ್ಳಬೇಕು. ಕುಲ ಕುಲವೆಂದು ಹೊಡೆದಾಡದೇ, ಮಾನವ ಕುಲ ಒಂದೇ ಎಂಬ ತತ್ವದಡಿ ಜೀವಿಸುವ ಮಾಹಿತಿ ನೀಡಿದ್ದಾರೆ’ ಎಂದರು.

ಗಣ್ಯರೆಲ್ಲರೂ ಕನಕದಾಸ ವೃತ್ತದಲ್ಲಿನ ಪ್ರತಿಮೆಗೆ ಹೂವಿನ ಹಾರ ಹಾಕಿ, ಪುಷ್ಪನಮನ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ ಸೇರಿ ಹಾಲುಮತ ಸಮಾಜದ ಮುಖಂಡರು, ಮಹಿಳೆಯರು, ಯುವಕರು, ಮುಕ್ಕಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT