ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ವೈವಿಧ್ಯತೆಯಲ್ಲಿ ಏಕತೆ ಮೆರೆದ ಗಣೇಶೋತ್ಸವ

ಕಲಾವಿದನ ಕೈಯಲ್ಲಿ ಮೂಡಿಬಂದ ದೃಶ್ಯಕಾವ್ಯ, ಆಚರಣೆಗೆ ಐತಿಹಾಸಿಕ ಮೆರಗು
Published : 8 ಸೆಪ್ಟೆಂಬರ್ 2024, 16:01 IST
Last Updated : 8 ಸೆಪ್ಟೆಂಬರ್ 2024, 16:01 IST
ಫಾಲೋ ಮಾಡಿ
Comments

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗಣೇಶೋತ್ಸವವನ್ನು ಶ್ರದ್ಧೆ ಮತ್ತು ಸೌಹಾರ್ದತೆಯಿಂದ ಆಚರಿಸಲಾಗುತ್ತಿದ್ದು ಧಾರ್ಮಿಕ ಸಂಪ್ರದಾಯಕ್ಕೆ ಸೀಮಿತಗೊಳ್ಳದೆ ವೈವಿಧ್ಯತೆಯ ಜೊತೆಗೆ ಐತಿಹಾಸಿಕ ಮತ್ತು ನೈಸರ್ಗಿಕ ದೃಶ್ಯಕಾವ್ಯಗಳ ಮೂಲಕ ಸಾಮಾಜಿಕ ಕಳಕಳಿ ಮೂಡಿಬಂದಿದೆ.

ಪಟ್ಟಣದ 30 ಸ್ಥಳಗಳಲ್ಲಿ ಸೇರಿ ತಾಲ್ಲೂಕಿನಲ್ಲಿ 360 ಕಡೆ ಅನೇಕ ಸಂಘಟನೆಗಳ ವತಿಯಿಂದ ವಿವಿಧ ರೀತಿಯ ಪರಿಕಲ್ಪನೆಯಲ್ಲಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಸಾರ್ವಜನಿಕರ ಗಮನಸೆಳೆಯುತ್ತಿವೆ. ಅನೇಕ ಸ್ಥಳಗಳಲ್ಲಿ ಭಕ್ತರು ಸಾಲುಗಟ್ಟಿ ಗಣಪನ ದರ್ಶನ ಪಡೆಯುತ್ತಿರುವುದು ಕಂಡುಬಂದಿತು. ಅಲ್ಲದೆ ಭಕ್ತರಿಗೆ ಸಂಘಟನೆಗಳ ವತಿಯಿಂದ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕೆಲವು ಕಡೆಗಳಲ್ಲಿನ ವಿಶೇಷತೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ತೆಗ್ಗಿನ ಓಣಿಯ ದ್ಯಾಮವ್ವ ದೇವಸ್ಥಾನದ ಬಳಿಯ ಗಣೇಶೋತ್ಸವವನ್ನು ಪ್ರತಿ ವ‍ರ್ಷ ವಿಶೇಷ ರೀತಿಯಲ್ಲಿ ನೆರವೇರಿಸಲಾಗುತ್ತಿದೆ. ಕಲಾವಿದ ಹನುಮೇಶ ಕಲಭಾವಿ ಮತ್ತು ಸಂಗಡಗಿರ ಪರಿಕಲ್ಪನೆಯಲ್ಲಿ ಈ ಬಾರಿ ದೂದ್‌ಸಾಗರ್ ಜಲಾಶಯದ ಚಿತ್ರವನ್ನು ನಿರ್ಮಿಸಲಾಗಿದೆ. ಧುಮ್ಮಿಕ್ಕುವ ಜಲಧಾರೆಯ ಡಿಜಿಟಲ್ ಚಿತ್ರದ ಹಿಂಬದಿಯಲ್ಲಿ ಬೆಳಕು ಹರಿಸಲಾಗಿದ್ದು ಜುಳುಜುಳು ಶಬ್ದ ಕೇಳಿಬರುತ್ತಿದೆ. ಅದೇ ರೀತಿ ಜಲಾಶಯದ ಮುಂಬದಿಯಲ್ಲಿ ರೈಲು ಹಳಿ ಅಳವಡಿಸಿ ಚಿಕ್ಕ ಎಂಜಿನ್‌ ಮತ್ತು ಬೋಗಿಗಳು ಸ್ವಯಂ ಚಾಲಿತವಾಗಿ ಚಲಿಸುತ್ತಿರುವುದನ್ನು ರಾತ್ರಿ ವೇಳೆ ಬೆಳಕಿನ ಚಿತ್ತಾರದಲ್ಲಿ ನೋಡಿದ ಮಕ್ಕಳಷ್ಟೇ ಅಲ್ಲ ಹಿರಿಯರು ಖುಷಿಪಡುವಂತೆ ಕಲಾವಿದನ ಕೈಚಳಕದಲ್ಲಿ ದೃಶ್ಯಕಾವ್ಯ ಮೂಡಿ ಬಂದಿದೆ.

ಹಳೆ ಬಜಾರದ ಗೆಳೆಯರ ಬಳಗದ ಹಿಂದೂ ಮುಸ್ಲಿಂ ಸಮುದಾಯದವರು ಸೇರಿ ಅನೇಕ ವರ್ಷಗಳಿಂದಲೂ ಗಣೇಶಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿರುವುದು ವಿಶೇಷ. ಭಾವೈಕ್ಯತೆ, ಕೋಮು ಸೌಹಾರ್ದತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಸಂತ ಶಿಶುನಾಳ ಷರೀಫ ಗುರು ಗೋವಿಂದ ಭಟ್ಟರ ಕಥಾನಕವನ್ನು ಸೃಷ್ಟಿಸಲಾಗಿದೆ. ದ್ಯಾಮವ್ವನ ಗುಂಡಿಯ ಮುಂದೆ ‍‍ಇಬ್ಬರೂ ಕುಳಿತಿರುವುದು, ಅವರ ನಡುವಿನ ಸಂಭಾಷಣೆ, ದೇವಿಯ ಮೂರ್ತಿ ಕಳವಿನ ಆರೋಪ ಬರುವುದು, ನಂತರ ಪವಾಡದ ರೀತಿಯಲ್ಲಿ ದೇವಿಯ ಬಳಿ ಮೂಗುತಿ ಇರುವುದನ್ನು ಧ್ವನಿಯ ಮೂಲಕ ಭಕ್ತರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಷರೀಫ ಮತ್ತು ಗೋವಿಂದ ಭಟ್ಟರ ಚಿತ್ರಗಳೂ ಗಮನಸೆಳೆಯುವಂತಿವೆ.

ಇನ್ನು ಕಟ್ಟಿದುರ್ಗಾದೇವಿ ಗುಡಿಯ ಬಳಿಯ ಬೀರಲಿಂಗೇಶ್ವರ ಗಜಾನನ ಸಮಿತಿಯ ಗಣೇಶ ಐತಿಹಾಸಿಕ ಮಹತ್ವ ಸಾರುತ್ತಿದ್ದಾನೆ. ಕೈಯಲ್ಲಿ ಖಡ್ಗ ಝಳಪಿಸುವ ಕಿತ್ತೂರ ಹುಲಿ ಸಂಗೊಳ್ಳಿ ರಾಯಣ್ಣನ ಹೋಲಿಕೆಯಲ್ಲಿ ಗಣೇಶನನ್ನು ನಿರ್ಮಿಸಲಾಗಿದ್ದು ಗಣೇಶನ ಮೂಲಕ ಜನರಿಗೆ ಕ್ರಾಂತಿಕಾರಿಯ ಜೀವನ ಚರಿತ್ರೆಯನ್ನೂ ವಿವರಿಸುವಂತಿದೆ.

ಬಸವೇಶ್ವರ ವೃತ್ತದಲ್ಲಿ ಹಿಂದೂ ಮಹಾಮಂಡಲ ಸಮಿತಿಯ ಗಣೇಶೋತ್ಸವಕ್ಕೆ ಮರಾಠಾ ರಾಜ ಚತ್ರಪತಿ ಶಿವಾಜಿ ಮಹಾರಾಜ, ಅವರ ಭದ್ರ ಕೋಟೆಯ 'ಸಿಂಹ ದ್ವಾರ' ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ ಟ್ರ್ಯಾಕ್ಟರ್‌ ಟ್ರಾಲಿಯಲ್ಲಿಯೇ ಇರಿಸಿರುವ ಗಣಪ ಟನ್‌ ಭಾರ ಹೊಂದಿರುವುದು ಮತ್ತೊಂದು ವಿಶೇಷ.

ಅಲ್ಲದೆ ಪಟ್ಟಣದ ಸಾರಿಗೆ ಘಟಕ, ಜೆಸ್ಕಾಂ ಕಚೇರಿ, ಮಾರುತಿ ವೃತ್ತ, ಕಾರ್ಗಿಲ್‌ ವೃತ್ತ, ಎಪಿಎಂಸಿ ಪ್ರಾಂಗಣ ಸೇರಿದಂತೆ ಅನೇಕ ಕಡೆಗಳಲ್ಲಿಯೂ ಗಣೇಶ ಮೂರ್ತಿಯನ್ನು ವಿಶೇಷ ರೀತಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು ಭಕ್ತರ ಆಕರ್ಷಿಸುವಂತಿವೆ.

ಕುಷ್ಟಗಿ ತೆಗ್ಗಿನ ಓಣಿಯಲ್ಲಿ ಆಕರ್ಷಕವಾಗಿ ರೂಪಿಸಿರುವ ದೂದ್‌ಸಾಗರ ದೃಶ್ಯ
ಕುಷ್ಟಗಿ ತೆಗ್ಗಿನ ಓಣಿಯಲ್ಲಿ ಆಕರ್ಷಕವಾಗಿ ರೂಪಿಸಿರುವ ದೂದ್‌ಸಾಗರ ದೃಶ್ಯ
ಕುಷ್ಟಗಿ ಬಸವೇಶ್ವರ ವೃತ್ತದಲ್ಲಿ ಐತಿಹಾಸಿಕ ಮಹತ್ವ ನಿರೂಪಿಸುವ ಶಿವಾಜಿ ಕೋಟೆ ಮಾದರಿ
ಕುಷ್ಟಗಿ ಬಸವೇಶ್ವರ ವೃತ್ತದಲ್ಲಿ ಐತಿಹಾಸಿಕ ಮಹತ್ವ ನಿರೂಪಿಸುವ ಶಿವಾಜಿ ಕೋಟೆ ಮಾದರಿ
ಧಾರ್ಮಿಕ ಆಚರಣೆಯಲ್ಲಿ ಪಟ್ಟಣದಲ್ಲಿ ಜಾತಿ ಭೇದವಿಲ್ಲ ಎಲ್ಲ ಸಮುದಾಯದವರೂ ಸೌಹಾರ್ದತೆ ಮೆರೆಯುತ್ತ ಬಂದಿರುವುದು ಪಟ್ಟಣದ ಹೆಮ್ಮೆಯ ಸಂಗತಿ.
ಅಮೀನುದ್ದೀನ್‌ ಮುಲ್ಲಾ ಹಳೆಬಜಾರ ಗಣೇಶ ಸಮಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT