ಕೊಪ್ಪಳ/ಕುಕನೂರು: ಜನರ ನಡುವೆ ಬಾಂಧವ್ಯ ಬೆಸೆಯುವ ಹಾಗೂ ಸಂಭ್ರಮ ಮೂಡಿಸುವ ಗಣೇಶ ಚುತುರ್ಥಿ ಹಬ್ಬದ ಆಚರಣೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಮಣ್ಣಿನ ಮೂರ್ತಿಗಳನ್ನು ತಯಾರಿಸುವವರಿಗೆ ತಂಪನೆಯ ವಾತಾವರಣವೇ ಸವಾಲಾಗಿದೆ. ಜೊತೆಗೆ ಪಿಒಪಿಗಳ ಭರಾಟೆಯೂ ಇದೆ.
ಸೆಪ್ಟೆಂಬರ್ 7ರಂದು ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ಮೂರ್ತಿ ತಯಾರಿಕೆ ಆರಂಭವಾಗಿದೆ. ಇದಕ್ಕೆ ಬೇಕಾದ ಮಣ್ಣು ಒಣಗಿದ್ದರೆ ಅದನ್ನು ಕಲಾವಿದರು ತಮಗೆ ಬೇಕಂತೆ ನೀರಿನೊಂದಿಗೆ ಬೆರೆಸಿಕೊಂಡು ಮೂರ್ತಿ ತಯಾರಿಸುತ್ತಾರೆ. ಆದರೆ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದು ಒಂದೆಡೆಯಾದರೆ, ಸದಾ ತಂಪನೆಯ ವಾತಾವರಣ ಇರುವುದು ಕೂಡ ಮಣ್ಣಿನ ಮೂರ್ತಿಗಳು ಪೂರ್ಣವಾಗಿ ಒಣಗುತ್ತಿಲ್ಲ.
ಮಣ್ಣಿನ ಕಲಾಕೃತಿಗಳನ್ನು ತಯಾರಿಸುವ ಕಲಾವಿದರಿಗೆ ವರ್ಷಪೂರ್ತಿ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಆದರೆ ಅವರಿಗೆ ಬಹು ಆದಾಯ ತಂದುಕೊಡುವುದು ಗಣೇಶ ಮೂರ್ತಿ ತಯಾರಿಕಾ ಕೆಲಸ. ಈಗಿನ ವಾತಾವರಣವೇ ಕಲಾವಿದರಿಗೆ ಸವಾಲಾಗಿ ಪರಿಣಮಿಸಿದೆ.
ಕುಕನೂರು ಸೇರಿದಂತೆ ಅನೇಕ ಕಡೆ ಮೂರ್ತಿ ತಯಾರಕರು ಈಗಾಗಲೇ ಕೆಲವು ಗಣೇಶ ಮೂರ್ತಿಗಳನ್ನು ಸಿದ್ಧಗೊಳಿಸಿದ್ದರೆ ಇನ್ನೂ ಕೆಲವು ಮೂರ್ತಿಗಳಿಗೆ ಅಂತಿಮ ರೂಪ ನೀಡುವಲ್ಲಿ ನಿರತರಾಗಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ಮಾರಾಟ, ತಯಾರಿಕೆಗೆ ನಿಷೇಧ ಹೇರುವಂತೆ ಸರ್ಕಾರ ಸೂಚಿಸಿದೆ. ಆದರೆ ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಅವುಗಳನ್ನು ಪರಿಶೀಲಿಸಿ ಕಡಿವಾಣ ಹಾಕಬೇಕಾದ ತಂಡ ಕೂಡ ಸಕ್ರಿಯವಾಗಿಲ್ಲ.
ಸಾಂಪ್ರದಾಯಿಕವಾಗಿ ಆಚರಣೆಗೆ ಮಣ್ಣಿನ ಮೂರ್ತಿಗಳೇ ಶ್ರೇಷ್ಠ ಎನ್ನುವ ಭಾವನೆ ಜನರಲ್ಲಿರುವ ಕಾರಣ ಬಹುತೇಕರು ಮಣ್ಣಿನ ಮೂರ್ತಿಗಳತ್ತ ಒಲವು ತೋರುತ್ತಿದ್ದಾರೆ. ಹಗುರ ಹಾಗೂ ತರಹೇವಾರಿ ಬಣ್ಣಗಳಿಂದ ಆಕರ್ಷಕವಾಗಿ ಪಿಒಪಿ ಕಾಣುತ್ತವೆ. ಇನ್ನು ಕೆಲವರು ಅವುಗಳ ಖರೀದಿಗೆ ಮುಂದಾಗುತ್ತಾರೆ. ತಿಂಗಳುಗಳ ಮುಂಚೆಯೇ ಗಣೇಶನ ಮೂರ್ತಿಗಳನ್ನು ಕಾಯ್ದಿರಿಸಲಾಗಿದೆ.
ಕುಕನೂರಿನಲ್ಲಿ ತಲೆಮಾರಿನಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಅಕ್ಕಸಾಲಿಗ, ಕುಂಬಾರ ಹಾಗೂ ಇತರೆ ಕಲಾವಿದ ಕುಟುಂಬದವರು ಡಿಸೆಂಬರ್ ಹಾಗೂ ಯುಗಾದಿ ಹಬ್ಬದಿಂದಲೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಣೇಶನ ಮೂರ್ತಿಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು ಗ್ರಾಹಕರು ಮುಂಗಡ ಕೊಟ್ಟು ತಮ್ಮಿಷ್ಟದ ಮೂರ್ತಿ ಕಾಯ್ದಿರಿಸಿದ್ದಾರೆ.
ಜಿಗಿ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸುತ್ತಾರೆ. ಸಿಂಹಾಸನ ಗಣಪತಿ, ಬಲಮುರಿ ಗಣಪತಿ, ನಾಗರಹಾವು, ಇಲಿ, ತ್ರಿಶೂಲ, ಕಮಲ, ಕೈ ಹಾಗೂ ಡಮರುಗದ ಮೇಲೆ ಕುಳಿತ ಗಣಪತಿ, ನಿಂತ ಗಣಪತಿ, ಶ್ರೀಕೃಷ್ಣ, ಬಸವಣ್ಣನ ತಲೆ ಮೇಲೆ ಗಣೇಶ ಹಾಗೂ ವಿಶೇಷವಾಗಿ ಪುನೀತರಾಜ್ ಕುಮಾರ ಜೊತೆಗೆ ಗಣೇಶ ಮೂರ್ತಿ ಹೀಗೆ ವಿಶಿಷ್ಟ ರೀತಿಯ ಗಣಪತಿಗಳು ಸಿದ್ಧವಾಗಿವೆ.
ತಾತ, ಮುತ್ತಜ್ಜನ ಕಾಲದಿಂದೂ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡ ಉಮೇಶ ಪತ್ತಾರ ಅವರ ಕುಟುಂಬ ಈ ಮೊದಲು ಗಣೇಶನ ಮೂರ್ತಿ ತಯಾರಿಕೆಗೆ ಬೇಕಾಗುವ ಮಣ್ಣನ್ನು ಹುಬ್ಬಳ್ಳಿ, ಚನ್ನಾಪುರ, ಅಂಚಟಗೇರಿ ಭಾಗದಲ್ಲಿ ಖರೀದಿಸುತ್ತಿದ್ದರು. ಸದ್ಯ ಒಂದು ಟ್ರ್ಯಾಕ್ಟರ್ ಜೇಡಿ ಮಣ್ಣಿನ ಬೆಲೆ ₹10,000 ಆಗಿದ್ದರಿಂದ ಬೆಳಗಾವಿ ಜಿಲ್ಲೆ ಗೋಕಾಕ್ ಭಾಗದಿಂದ 1 ಟನ್ ಜೇಡಿ ಮಣ್ಣಿಗೆ ₹6,500 ನೀಡಿ ಖರೀದಿಸಿದ್ದಾರೆ. ಬಣ್ಣದ ಬೆಲೆ ದುಬಾರಿಯಾಗಿದೆ. ಜೆತೆಗೆ ಸಾಗಾಣಿಕೆ ವೆಚ್ಚ ದುಪ್ಪಟ್ಟಾಗಿರುವುದರಿಂದ ಗಣೇಶನ ಮೂರ್ತಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ ಎನ್ನುತ್ತಾರೆ ಮೂರ್ತಿ ತಯಾರಕ ಉಮೇಶ ಪತ್ತಾರ.
ಪೂರ್ವಿಕರ ಕಾಲದಿಂದಲೂ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಕುಟುಂಬ ಇದುವರೆಗೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದೇವೆ. ಇದುವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಂಕಷ್ಟ ಎದುರಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ ಎನ್ನುತ್ತಾರೆ ಅವರು.
ತಾತ ಮುತ್ತಾತನವರ ಕಾಲದಿಂದಲೂ ಗಣೇಶನ ಮೂರ್ತಿ ಕಾಯಕ ಮಾಡುತ್ತಾ ಬಂದಿದ್ದೇವೆ. ಇದೊಂದು ದೈವಿಕ ಕಾಯಕ. ಆದರೆ ಸರ್ಕಾರ ಕಲೆಗಾರನ ಗುರುತಿಸುವ ಕೆಲಸ ಮಾಡಬೇಕಾಗಿದೆಕುಶಾಲರಾವ್ ಸೌದಾಗರ್ ಕುಕನೂರಿನ ಕಲಾವಿದ
ಮೂರು ತಿಂಗಳು ಹಿಂದಿನಿಂದಲೇ ದೊಡ್ಡ ಗಣಪತಿ ತಯಾರಿಸುವ ಕೆಲಸ ಆರಂಭಿಸಿದ್ದೇವೆ. ವಾತಾವರಣ ತಂಪಿರುವ ಕಾರಣ ಪ್ರತಿವರ್ಷಕ್ಕಿಂತ ಈ ಸಲ ಕೆಲಸ ಹೆಚ್ಚಾಗಿದೆವಿನೋದ್ ಕುಮಾರ ಗಾಯ್ಕರ್ ಮಣ್ಣಿನ ಗಣಪತಿ ತಯಾರಕರು ಕೊಪ್ಪಳ
* ತೈಲ ಬಣ್ಣಗಳು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದ್ದು ಜೇಡಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗಿಕ ಬಣ್ಣಗಳಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ಪೂಜಿಸಬೇಕು.
* ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಗೌರಿಗಣೇಶ ಮೂರ್ತಿಗಳನ್ನು ನಗರಸಭೆ ಪುರಸಭೆ ವತಿಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ವಿಸರ್ಜಿಸಬೇಕು.
* ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ ಪ್ರತ್ಯೇಕಿಸಿ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು.
* ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು.
* ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮಗಳು-2000 ರನ್ವಯ 2022 ಮೇ 10 ರಂದು ಹೊರಡಿಸಿರುವ ಸುತ್ತೋಲೆಯಂತೆ ನಿಬಂಧನೆಗಳಿಗೆ ಅನುಸಾರವಾಗಿ ಧ್ವನಿವರ್ಧಕ ಸಾರ್ವಜನಿಕ ಗಣೇಶ ಪೆಂಡಾಲ್‌ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸಲು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.