ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ರಸ್ತೆಯಲ್ಲೇ ರಾಶಿ; ವಾಹನ ಸವಾರರಿಗೆ ಕುತ್ತು

ರಸ್ತೆ ಕಣಗಳಿಗಿಲ್ಲ ಕಡಿವಾಣ, ಕಣ್ಮುಚ್ಚಿದ ಅಧಿಕಾರಿಗಳು
Last Updated 24 ಜನವರಿ 2022, 4:20 IST
ಅಕ್ಷರ ಗಾತ್ರ

ಕುಷ್ಟಗಿ: ರೈತರು ತಮ್ಮ ವಿವಿಧ ಬೆಳೆಗಳ ರಾಶಿಯನ್ನು ರಸ್ತೆಯಲ್ಲಿ ನಡೆಸುವ ಮೂಲಕ ರಾಜ್ಯ ಹೆದ್ದಾರಿಗಳನ್ನೇ ಕಣಗಳನ್ನಾಗಿಸುವುದು ಮುಂದುವರೆದಿದ್ದು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ಸಜ್ಜೆ, ಪುಂಡಿ ಸೇರಿದಂತೆ ವಿವಿಧ ಬೆಳೆಗಳನ್ನು ತಂದು ರಸ್ತೆಯಲ್ಲಿ ಗುಡ್ಡೆಹಾಕುವುದು ಸಾಮಾನ್ಯವಾಗಿದ್ದು ಅದರಿಂದ ವಾಹನ ಸಂಚಾರಕ್ಕೆ ಪ್ರಮುಖ ಅಡ್ಡಿಯಾಗುತ್ತಿದೆ. ಕಣ ಮಾಡುವುದನ್ನು ಮರತೇ ಬಿಟ್ಟಿರುವ ರೈತರ ಒಕ್ಕಲು ಎಲ್ಲದೂ ರಸ್ತೆಯನ್ನೇ ಅವಲಂಬಿಸಿದಂತಾಗಿದೆ. ರಸ್ತೆಯಲ್ಲಿ ಒಕ್ಕಲು ನಡೆಸುವುದರಿಂದ ವಾಹನ ಸವಾರರು ಪರದಾಡುತ್ತಿದ್ದರೂ ಇದನ್ನು ಪ್ರಶ್ನಿಸಿದವರನ್ನೇ ರೈತರು ಗದರಿಸಿ ಕಳಿಸುವ ಮನೋಭಾವ ಬೆಳೆಸಿಕೊಂಡಿರುವುದು ಅಚ್ಚರಿ ತಂದಿದೆ ಎಂದು ವಾಹನ ಸವಾರರು ಹೇಳಿದರು.

ಅಪಾಯಕ್ಕೆ ಆಹ್ವಾನ: ರಸ್ತೆಯಲ್ಲಿನ ರಾಶಿ ಎರಡು ರೀತಿಯಲ್ಲಿ ತೊಂದರೆ ತರುತ್ತಿದೆ. ರಸ್ತೆ ಮಧ್ಯೆ ಮುಟೆಗಟ್ಟಲೆ ತೆನೆಗಳನ್ನು ಹಾಕುವ ರೈತರು ವಾಹನಗಳು ರಸ್ತೆ ಬಿಟ್ಟು ಕೆಳಕ್ಕೆ ಹೋಗಬಾರದು ಎಂಬ ಕಾರಣಕ್ಕೆ ರಸ್ತೆ ಪಕ್ಕದಲ್ಲಿ ಕಲ್ಲು ಕಟ್ಟಿಗೆಗಳನ್ನು ಇಟ್ಟಿರುತ್ತಾರೆ. ಇದರಿಂದ ವಾಹನ ಸವಾರರು ಅದರಲ್ಲೂ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ರಸ್ತೆ ಮೇಲೆ ರಾಶಿ ಮಾಡುವ ವೇಳೆ ವಾಹನಗಳ ಬರುವಿಕೆಯನ್ನು ಲೆಕ್ಕಿಸದೇ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ತೆನೆಗಳ ರಾಶಿಯಿಂದ ತಪ್ಪಿಸಲು ಹೋಗಿ ಸವಾರರು ಮಗುಚಿ ಬೀಳುವ ಅಪಾಯ ಒಂದೆಡೆ. ತನೆಗೆಳ ಮೇಲೆ ದೊಡ್ಡ ವಾಹನಗಳು ಹೋದಾಗ ಅದರ ಹಿಂದೆ ಬರುವವರು ಧೂಳಿನಿಂದ ರಕ್ಷಿಸಿಕೊಳ್ಳುವುದು ಅಸಾಧ್ಯ ಎನ್ನುವಂತಾಗುತ್ತದೆ. ಕಣ್ಣಿಗೆ ಧೂಳು ಸೇರಿದಾಗ ಪಡುವ ತೊಂದರೆ ಅನುಭವಿಸಿದವರಿಗೇ ಗೊತ್ತು ಎಂದೆ ಪಟ್ಟಣದ ಬೈಕ್‌ ಸವಾರ ಸಲೀಂಸಾಬ್, ಕಳಕನಗೌಡ ಪಾಟೀಲ ಇತರರು ಸಮಸ್ಯೆ ವಿವರಿಸಿದರು.

ಅಷ್ಟೇ ಅಲ್ಲ ಮುಂಗಾರು ಹಂಗಾಮಿನಲ್ಲಿ ಬೆಳೆದ ಹಸಿಯಾದ ಪುಂಡಿ ಕಟ್ಟಿಗೆಗಳನ್ನೂ ಕೂಡ ರಸ್ತೆಯಲ್ಲಿ ಬಣವೆ ಮಾದರಿಯಲ್ಲಿ ಒಟ್ಟಿ ರಾಶಿ ಮಾಡುವುದು ಸಾಮಾನ್ಯ, ಪುಂಡಿಯ ಮೊನೆ ಚೂಪಾಗಿರುತ್ತದೆ ಅದು ಕಣ್ಣಿಗೆ ಸೇರಿದರೆ ಬಹಳಷ್ಟು ನೋವು ಅನುಭವಿಸುವಂತಾಗುತ್ತದೆ. ಅಷ್ಟೇ ಅಲ್ಲ ಹಸಿ ಕಟ್ಟಿಗೆಯ ಮೇಲೆ ದ್ವಿಚಕ್ರ ವಾಹನಗಳು ಹೋದಾಗ ಜಾರಿ ಬೀಳುತ್ತವೆ. ಇನ್ನು ಹಿಂಗಾರಿಯಲ್ಲಿ ಬೆಳೆಯುವ ಕುಸುಬೆ ರಾಶಿಯೂ ರಸ್ತೆಯಲ್ಲಿಯೇ ನಡೆಯುತ್ತದೆ. ಕುಸುಬೆ ಮುಳ್ಳಂತೂ ಕಣ್ಣಿಗೆ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಇದೆಲ್ಲ ನಿತ್ಯದ ಸಂಗತಿ. ಹಗಲಿನ ಪರಿಸ್ಥಿತಿ ಒಂದು ರೀತಿಯದ್ದಾದರೆ ಇನ್ನು ರಾತ್ರಿ ವೇಳೆ ವಾಹನ ಸವಾರರ ತೊಂದರೆ ಹೇಳತೀರದಷ್ಟಾಗಿರುತ್ತದೆ ಎಂದು ಜನರು ಹೇಳಿದರು.

ಅನೇಕ ವರ್ಷಗಳಿಂದಲೂ ರೈತರು ರಸ್ತೆಯ ಮೇಲೇಯೇ ರಾಶಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು ಬಹಳಷ್ಟು ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡು ಮೂಲೆಗುಂಪಾಗಿರುವ ಅನೇಕ ಉದಾಹರಣೆಗಳಿವೆ. ಇಷ್ಟಾದರೂ ರಸ್ತೆಯ ಮೇಲಿನ ರಾಶಿ ಅನಿಷ್ಟ ಪದ್ಧತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾರೊಬ್ಬ ಅಧಿಕಾರಿಗಳು ಪ್ರಯತ್ನ ನಡೆಸಿ ಕ್ರಮಕ್ಕೆ ಮುಂದಾಗಿಲ್ಲ. ರಾಶಿ ಮುಗಿದ ನಂತರ ರೈತರು ತ್ಯಾಜ್ಯಕ್ಕೆ ಬೆಂಕಿ ಇಡುತ್ತಾರೆ. ಇದರಿಂದ ಪಕ್ಕದ ಗಿಡಮರಗಳೂ ಹಾಳಾಗುತ್ತಿವೆ ಎಂಬ ಅಸಮಾಧಾನ ಸಾರ್ವಜನಿಕರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT