ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಜ್ಜನ ಜಾತ್ರೆಗೆ ಶೃಂಗಾರಗೊಂಡ ಗವಿಮಠ

ಮಠಕ್ಕೆ ಭಕ್ತರಿಂದ ಹರಿದು ಬರುತ್ತಿರುವ ಧಾನ್ಯಗಳು, ಹಬ್ಬದ ವಾತಾವರಣ, ಸಿದ್ಧತೆ ಪರಿಶೀಲನೆ
Last Updated 3 ಜನವರಿ 2023, 7:27 IST
ಅಕ್ಷರ ಗಾತ್ರ

ಕೊಪ್ಪಳ: ಮತ್ತೊಂದು ಮಹಾರಥೋತ್ಸವಕ್ಕೆ ಇಲ್ಲಿನ ಪ್ರಸಿದ್ಧ ಗವಿಸಿದ್ದೇಶ್ವರ ಮಠ ವಿಜೃಂಭಣೆಯಿಂದ ಸಜ್ಜಾಗಿದ್ದು, ಗವಿಮಠದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ವಿದ್ಯುತ್‌ ದೀಪಗಳ ಅಲಂಕಾರದ ಹೊಳಪು ಕಂಗೊಳಿಸುತ್ತಿದೆ.

ಗವಿಮಠದ ಹೊರಭಾಗದಿಂದಲೇ ಬಣ್ಣಬಣ್ಣಗಳ ವಿದ್ಯುತ್‌ ದೀಪಗಳೇ ನಿಮ್ಮನ್ನು ಸ್ವಾಗತಿಸುತ್ತಿವೆ. ಪ್ರಕೃತಿದತ್ತವಾಗಿ ಗಿಡ ಮರಗಳ ಆಗರವಾಗಿರುವ ಮಠದ ಆವರಣದಲ್ಲಿ ಮರಗಳಿಗೆ ಹಾಕಿರುವ ವಿದ್ಯುತ್‌ ದೀಪಗಳು ಎಲ್ಲರನ್ನೂ ಗಮನ ಸೆಳೆಯುತ್ತಿವೆ.

ತೆಪ್ಪೋತ್ಸವ ನಡೆಯಲಿರುವ ಮಠದ ಕೆರೆ ಆವರಣ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಹಾಕಿರುವ ದೀಪಗಳು ಕೂಡ ಅತ್ಯಾಕರ್ಷವಾಗಿವೆ. ಮಠಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಭಕ್ತರು ವಿದ್ಯುತ್‌ ದೀಪಗಳ ಮುಂದೆ ನಿಂತುಕೊಂಡು ಸಂಭ್ರಮಿಸುವುದು ಹಾಗೂ ಫೋಟೊ ತೆಗೆಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ದಾಸೋಹದ ಕಟ್ಟಡವನ್ನಂತೂ ವಿದ್ಯುತ್‌ ದೀಪಗಳೇ ಆವರಿಸಿಕೊಂಡಿವೆ. ಬೆಟ್ಟದ ಮೇಲ್ಬಾಗದಿಂದ ಮಠದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಸೊಗಸು.

ಮಹಾರಥೋತ್ಸವ ಜ. 8ರಂದು ನಡೆಯಲಿದ್ದು, 4ರಿಂದ ಕಾರ್ಯಕ್ರಮಗಳು ಆರಂಭವಾಗಲಿವೆ. ಈಗಾಗಲೇ ಕೊಪ್ಪಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ಬೀದರ್‌, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಕೂಡ ಈ ಸೊಬಗು ಕಣ್ತುಂಬಿಕೊಂಡರು. ಮಠದಲ್ಲಿ ದಾಸೋಹ ಸವಿದರು.

ಭರಪೂರ ಧಾನ್ಯಗಳು: ಗವಿಮಠದ ಮಹಾದಾಸೋಹಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ನಿತ್ಯ ಜೋಳದ ರೊಟ್ಟಿ, ದವಸ ಹಾಗೂ ಧಾನ್ಯಗಳು ಭಕ್ತರಿಂದ ಹರಿದು ಬರುತ್ತಿವೆ.

ಗಿಣಗೇರಾ ಗ್ರಾಮದ ನವಚೇತನ ಮಹಿಳಾ ಸಂಘದ ಸದಸ್ಯರು 3,500 ಸಾವಿರ ಸಿಹಿ ಕರ್ಚಿಕಾಯಿ, 1,100 ರೊಟ್ಟಿ ಹಾಗೂ ಕುಷ್ಟಗಿ ತಾಲ್ಲೂಕಿನ ಜಹಗೀರಗೂಡದೂರ್ ಗ್ರಾಮದ ಭಕ್ತರು ಹನ್ನೊಂದು ಸಾವಿರ ರೊಟ್ಟಿ, ಕನಕಗಿರಿ ತಾಲ್ಲೂಕಿನ ಜೀರಾಳ ಕಲ್ಗುಡಿ ಗ್ರಾಮದ ಭಕ್ತರು ಹತ್ತು ವರ್ಷಗಳಿಂದ ಮಾಡಿಕೊಂಡ ಬಂದ ರೊಟ್ಟಿ ನೀಡುವ ಸೇವೆಯನ್ನು ಈ ವರ್ಷವೂ ಮುಂದುವರಿಸಿದ್ದಾರೆ. ನಾಲ್ಕು ಸಾವಿರ ರೊಟ್ಟಿಗಳನ್ನು ನೀಡಿದ್ದಾರೆ.

67 ಪಾಕೆಟ್‌ ಭತ್ತ, 1001 ಕಡಲೆಬೇಳೆ, ಐದು ಪಾಕೆಟ್‌ ಅಕ್ಕಿ, ಕಲಬುರಗಿ ಮೂಲದ ಭಕ್ತರೊಬ್ಬರು 90 ಪಾಕೆಟ್‌ ತೊಗರಿ, ಗಂಗಾವತಿಯ ವೆಂಕಟೇಶ್ವರ ಇಂಡಸ್ಟ್ರೀಸ್ ಮಾಲೀಕ ಕೃಷ್ಣಪ್ಪ ರಾಮಣ್ಣ ಕೆಂದೊಳ್ಳಿ 100 ಅಕ್ಕಿ ಪಾಕೆಟ್‌ ಸಮರ್ಪಿಸಿದ್ದಾರೆ.

ಮಿರ್ಚಿ ವಿತರಣೆ: ಜಾತ್ರೆಯ ಸಮಯದಲ್ಲಿ ಪ್ರತಿ ವರ್ಷವೂ ಒಂದೊಂದು ವಿಶೇಷ ಖಾದ್ಯವನ್ನು ಮಾಡಲಾಗುತ್ತದೆ. ಅದರಂತೆಯೇ ಈ ಸಲ ಜ. 9ರಂದು ಉತ್ತರ ಕರ್ನಾಟಕದ ವಿಶೇಷ ಖಾದ್ಯ ಮಿರ್ಚಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಿರಗುಪ್ಪ ಮೂಲದ ಭಕ್ತರಾದ ಆರವಿ ಶಾಂತಮೂರ್ತಿ ಮಿರ್ಚಿಗಳ ತಯಾರಿಗಾಗಿ ಧಾನ್ಯಗಳನ್ನು ನೀಡಿದ್ದಾರೆ. ಗೆಳೆಯರ ಬಳಗದ ತಂಡ ಮಿರ್ಚಿಗಳನ್ನು ಪೂರೈಕೆ ಮಾಡಲಿದೆ. ಅಂದು ಬೆಳಿಗ್ಗೆ 4 ಗಂಟೆಯಿಂದ ಮಧ್ಯರಾತ್ರಿ ತನಕ ನಡೆಯಲಿಲದೆ. 20 ಜನರ ಮೂರು ತಂಡ ಮಿರ್ಚಿಗಳನ್ನು ವಿತರಿಸಲಾಗುತ್ತದೆ. ಅಂದಾಜು ಎರಡರಿಂದ ಮೂರು ಲಕ್ಷ ಜನ ಮಹಾದಾಸೋಹದ ಜೊತೆಗೆ ಮಿರ್ಚಿ ಸವಿಯಲಿದ್ದಾರೆ ಎಂದು ಕೊಪ್ಪಳದ ಮಿರ್ಚಿ ಸಿದ್ಧತೆ ಗೆಳೆಯರ ಬಳಗದ ತಂಡದ ಸದಸ್ಯರಾದ ಸಂತೋಷ ದೇಶಪಾಂಡೆ ಹಾಗೂ ಮಂಜುನಾಥ ಅಂಗಡಿ ತಿಳಿಸಿದ್ದಾರೆ.

ಸಿದ್ಧತೆ ಪರಿಶೀಲನೆ: ಭಕ್ತರ ಅನುಕೂಲಕ್ಕಾಗಿ ಒಂದೆಡೆಯೇ ಮೂಲ ಸೌಕರ್ಯಗಳನ್ನು ಕಲ್ಪಿಸಲು ಯುಟಿಲಿಟಿ ಕಟ್ಟಡ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಸೋಮವಾರ ಮಠ ಹಾಗೂ ಸುತ್ತಮುತ್ತಲೂ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಮಠದ ಮುಂಭಾಗದ ಆವರಣದಲ್ಲಿ ಎಡಕ್ಕೆ ಬೃಹದಾಕಾರದ ಸುಮಾರು 9000 ಸಾವಿರ ಚದರ ಅಡಿಯಲ್ಲಿ ಆಧುನಿಕ ಸ್ಪರ್ಶ ಇರುವ ಶೌಚಾಲಯ, ಮಹಿಳೆಯರು, ಅಂಗವಿಕಲರು ಮತ್ತು ಹಸುಗೂಸುಗಳಿಗೆ ಅನುಕೂಲ ಕಲ್ಪಿಸಲು ಸೌಲಭ್ಯ ಕಲ್ಪಿಸಲಾಗಿದೆ.

ನಾಳೆಯಿಂದ ಕಾರ್ಯಕ್ರಮಗಳು ಆರಂಭ

ಕೊಪ್ಪಳ: ಈಗಾಗಲೇ ಗವಿಮಠದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜ. 4ರಿಂದ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ಲಭಿಸಲಿದೆ.

ಗವಿಮಠದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿಮ್ಸ್, ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ 4ರಂದು ಬೆಳಿಗ್ಗೆ 8.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಅಂಗಾಂಗ ದಾನ ಜಾಗೃತಿ ಜಾಥಾ ನಡೆಯಲಿದೆ. ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಗವಿಮಠದ ಜಾತ್ರಾ ಮಹಾದಾಸೋಹ ತನಕ ತಲುಪಲಿದೆ.

ಜಲಕ್ರೀಡೆಗಳ ಉದ್ಘಾಟನೆ 5ರಂದು

ಕೊಪ್ಪಳ: ಭೂ ಸಾಹಸ ಹಾಗೂ ಜಲಕ್ರೀಡೆಗಳನ್ನು ನಡೆಸಲು ತಾಲ್ಲೂಕಿನ ಗಿಣಗೇರಾ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದ್ದು, ಜ. 5ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.

ಜಾತ್ರೆಯ ಅಂಗವಾಗಿ ರ್‍ಯಾಫ್ಟಿಂಗ್‌, ಕಯಾಕಿಂಗ್‌, ಸ್ಟೀಡ್‌ ಬೋಟ್‌, ಬೈಕ್‌ ರೈಡ್‌ ಹೀಗೆ ಹಲವು ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಮಕ್ಕಳ ಮನರಂಜನೆಯ ಉದ್ಯಾನ ಪ್ರವೇಶ ಉಚಿತವಾಗಿದೆ. ಬೆಂಗಳೂರು ಮೂಲದ ವಿನಿಯೋಗ್ ವೆಂಚರ್ಸ ಪ್ರೈ. ಲಿಮಿಟೆಡ್‍ ಭೂ ಸಾಹಸ ಹಾಗೂ ಜಲಕ್ರೀಡೆಗಳನ್ನು ಆಯೋಜಿಸುವ ಜವಾಬ್ದಾರಿ ಹೊತ್ತಿದೆ.

ಸಭಾಂಗಣ ನಿರ್ಮಾಣ: ಕೆರೆಗೆ ದಂಡೆಗೆ ಹೊಂದಿಕೊಂಡ ಜಾಗದಲ್ಲಿ ಪ್ರಕೃತಿಯ ನಡುವೆ ಕಾರ್ಯಕ್ರಮಗಳನ್ನು ಆಯೋಜಿಸಲು ಹೊರಾಂಗಣ ವೇದಿಕೆ ಸಿದ್ಧಪಡಿಸಿ ಅದಕ್ಕೆ ಗವಿಶ್ರೀ ಸಭಾಂಗಣ ಎಂದು ಹೆಸರಿಡಲಾಗಿದೆ.

ದಡದಲ್ಲಿ ಸಪೋಟ, ಮಾವು, ತೆಂಗು, ಸೀತಾಫಲ, ಮಲ್ನಾಡ್ ಹುಣಸೆಹಣ್ಣು, ಬಿದಿರು, ಬೇವು, ಸಿಲ್ವರ್ ಓಕ್ ಹೀಗೆ 11 ಸಾವಿರ ಸಸಿಗಳನ್ನು ನೆಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT