ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆ ಉತ್ತಮ; ಖರೀದಿ ಕೇಂದ್ರಕ್ಕೆ ಹೆಚ್ಚಿದ ಒತ್ತಡ

ಮುಂಗಾರು ಮಳೆ ಉತ್ತಮ; ರೋಗ ಬಾಧೆ, ಬೆಲೆ ಇಳಿಕೆಯಿಂದ ರೈತರು ಹೈರಾಣ
Last Updated 16 ಆಗಸ್ಟ್ 2021, 4:10 IST
ಅಕ್ಷರ ಗಾತ್ರ

ಕೊಪ್ಪಳ: ಮೂರು ವರ್ಷಗಳಿಂದ ಬರಗಾಲದ ಪರಿಸ್ಥಿತಿ ಕೊನೆಗೊಂಡು ಪ್ರಸ್ತುತ ವರ್ಷ ಮುಂಗಾರು ಮಳೆ ಉತ್ತಮವಾಗಿದೆ. ಸಮೃದ್ಧ ಬೆಳೆಗಳು ಬಂದಿವೆ. ಆದರೆ, ಈ ಬಾರಿ ರೋಗಬಾಧೆ ಮತ್ತು ಬೆಲೆ ಇಳಿಕೆಯಿಂದ ರೈತರು ಕಷ್ಟುಪಡುವಂತಾಗಿದೆ.

ಜಿಲ್ಲೆಯಲ್ಲಿ ವಾಡಿಕೆ ಮಳೆ 253 ಮಿ.ಮೀ. ಇದ್ದು, ಈ ಸಾರಿ 317 ಮಿ.ಮೀ. ಹೆಚ್ಚು ಮಳೆ ಸುರಿದಿದೆ. ಪರಿಣಾಮವಾಗಿ ಒಣ ಬೇಸಾಯದ ಬಿತ್ತನೆ ಪ್ರಮಾಣ ಕೂಡಾ ಹೆಚ್ಚಿದೆ. ಜಿಲ್ಲೆಯ 6 ಲಕ್ಷ ಹೆಕ್ಟೇರ್‌ ಜಮೀನು ಇದ್ದು, 5 ಲಕ್ಷ ಕೃಷಿ ಯೋಗ್ಯ ಜಮೀನು ಇದೆ. ಇದರಲ್ಲಿ 3 ಲಕ್ಷ ಹೆಕ್ಟೇರ್‌ ಒಣಬೇಸಾಯ, 1 ಲಕ್ಷ ಹೆಕ್ಟೇರ್ ನೀರಾವರಿ ಜಮೀನು ಇದೆ.

ಮುಂಗಾರು ಬೆಳೆ: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಪ್ರಮುಖ ಬೆಳೆ ಎಂದರೆ ಹೆಸರು ಮತ್ತು ಮೆಕ್ಕೆಜೋಳ. ಇದರ ಜೊತೆಗೆ ಸೂರ್ಯಕಾಂತಿ, ತೊಗರಿ, ಅಲಸಂದಿ, ಉದ್ದು, ಸಜ್ಜೆ, ಎಳ್ಳು, ಮಡಿಕೆ, ಶೇಂಗಾ ಸೇರಿದಂತೆ ವಿವಿಧ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳನ್ನು ಬೆಳೆಯುತ್ತಾರೆ.

ಹೆಸರು ಬೆಳೆಗೆ ಯಲಬುರ್ಗಾ, ಕುಕನೂರು ತಾಲ್ಲೂಕುಗಳು ಪ್ರಸಿದ್ಧಿಯಾಗಿದ್ದರೆ, ಕುಷ್ಟಗಿ ತಾಲ್ಲೂಕಿನ ಹನಮಸಾಗರ, ತಾವರಗೇರಾ ಹೋಬಳಿಗಳಲ್ಲಿ ರೈತರು ಸಜ್ಜೆ, ತೊಗರಿ, ಎಳ್ಳು, ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಕೊಪ್ಪಳ ತಾಲ್ಲೂಕಿನ ಅರ್ಧಭಾಗದಲ್ಲಿ ನೀರಾವರಿ ಇದ್ದರೆ ಇನ್ನರ್ಧ ಭಾಗ ಗೋವಿನಜೋಳ, ಹೆಸರು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಈ ಸಾರಿ ಎಲ್ಲ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಆದರೆ ಕೊಯ್ಲು ಸಮೀಪಿಸುವ ಸಮಯದಲ್ಲಿಯೇ ಬೆಲೆ ಇಳಿಕೆ ಆಗುತ್ತಿರುವುದು ರೈತರಿಗೆ ತಲೆನೋವಾಗಿದೆ.

ರೋಗಬಾಧೆ: ಹೆಸರು ಬೆಳೆ ಅತಿಯಾದ ಮಳೆ ಮತ್ತು ತೇವಾಂಶದಿಂದ ಹಳದಿ ರೋಗ ಬಂದರೆ, ಮೆಕ್ಕೆಜೋಳಕ್ಕೆ ಸೈನಿಕಹುಳು ಕಾಟ ತಪ್ಪಿದ್ದಲ್ಲ. ಶೇಂಗಾ ಮತ್ತು ತೊಗರಿಗೆ ದುಂಡಾಣು ಮತ್ತು ಎಲೆಚುಕ್ಕೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ಇಳುವರಿ ಕಡಿಮೆಯಾಗುವ ಆತಂಕ ರೈತರಿಗೆ ಇದೆ. ಹೆಸರು ಬೆಳೆ ಶೇ 40ರಷ್ಟು ಕೊಯ್ಲು ಮಾಡಿದ ಕೆಲವು ರೈತರು ಒಣಗಿಸಿ ದರ ನೋಡಿ ಮಾರಾಟ ಮಾಡಿಕೊಳ್ಳಲು ಅಡಚಣೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡಿದ್ದಾರೆ. ಕೆಲ ರೈತರಿಗೆ ಅವುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಕಷ್ಟವಾಗಿದೆ.

ಆರಂಭವಾಗದ ಖರೀದಿಗೆ ಕೇಂದ್ರ: ಪ್ರತಿವರ್ಷ ಕೊಯ್ಲು ಮುಗಿದ ನಂತರ ಎಷ್ಟೋ ದಿನಕ್ಕೆ ಆರಂಭವಾಗುವ ಸರ್ಕಾರದ ಖರೀದಿ ಕೇಂದ್ರಕ್ಕೆ ರೈತರು ಬರುವುದಿಲ್ಲ. ಅವರು ಗುಣಮಟ್ಟದ ಹೆಸರಿನಲ್ಲಿ ವಿಧಿಸುವ ಷರತ್ತು,
ಚೆಕ್‌ ಮೂಲಕ ನಂತರ ಹಣ ನೀಡುವುದು ನಮ್ಮ ರೈತರಿಗೆ ಕಾಯಲು ಪುರುಸೊತ್ತು ಇರುವುದಿಲ್ಲ. ಇದರಿಂದ ನೆಪಕ್ಕೆ ಮಾತ್ರ ಖರೀದಿ ಕೇಂದ್ರ ಎನ್ನುವಂತೆ ಆಗಿದೆ.

ಅದರ ಬದಲಿಗೆ ಕಾಯಂ ಖರೀದಿ ಕೇಂದ್ರಗಳನ್ನು ತೆರೆದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಈಗ ಹೆಸರನ್ನು ಕೆಲವು ರೈತರು 4500-5000ಕ್ಕೆ ಮಾರಾಟ ಮಾಡಿದ್ದಾರೆ. ಆದರೆ, ಖರೀದಿ ಕೇಂದ್ರಗಳಲ್ಲಿ 7 ಸಾವಿರದ ಮೇಲೆ ಬೆಲೆ ಇರಲಿದೆ ಎನ್ನಲಾಗುತ್ತಿದೆ. ಬಹುತೇಕ ರೈತರು ಹೆಸರಿನ ರಾಶಿಯಲ್ಲಿ ತೊಡಗಿದ್ದು, ಇನ್ನೂ ಯಾವುದೇ ಖರೀದಿ ಕೇಂದ್ರ ಆರಂಭಿಸಿಲ್ಲ.

ಅಲ್ಲದೆ ಗೋವಿನಜೋಳಕ್ಕೆ 3500 ಬೆಲೆ ಇದೆ. ರಾಶಿ ಮಾಡಿದ ನಂತರ 2500ಕ್ಕೆ ಇಳಿಯುತ್ತದೆ. ಆದ್ದರಿಂದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ ಬಿಳಿಜೋಳಕ್ಕೆ 4500, ಹೈಬ್ರೀಡ್ ಜೋಳಕ್ಕೆ 4000 ಬೆಲೆ ನಿಗದಿ ಮಾಡಿ ಖರೀದಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT